Thursday 19 April 2012

ಲೇಖನ

ನಿನ್ನೆ, ಅಂದರೆ ೧೮ನೆ ತಾರೀಖು ಈ ನನ್ನ ಲೇಖನ ವಿಜಯವಾಣಿ ದಿನಪತ್ರಿಕೆಯ  ಪುರವಣಿಯಲ್ಲಿ ಪ್ರಕಟವಾಯಿತು. ನಮ್ಮಲ್ಲಿ ಹಲವರಿಗೆ(ನನಗೂ ಕೂಡ ) ದಿನಪತ್ರಿಕೆ, ಅದೂ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸ ಇರುವುದಿಲ್ಲವಾದ್ದರಿಂದ ಇದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

 ವಸತಿ ಶಾಲೆಯ ರಾತ್ರಿ ಜಾತ್ರೆ 

         ಆಗ ನಾನು ಹತ್ತನೇ ಕ್ಲಾಸು. ಓದುತ್ತಿದ್ದುದು ಜಿಲ್ಲೆಗೇ ಪ್ರತಿಷ್ಠಿತವಾದ ನವೋದಯ ಶಾಲೆಯಲ್ಲಿ. ನಮ್ಮ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿ ಎಂಬ ಗ್ರಾಮದಲ್ಲಿ. ವಸತಿ ಶಾಲೆಯಾದ್ದರಿಂದ ಮಕ್ಕಳ ಜವಾಬ್ದಾರಿ ಶಾಲೆಯ ಆಡಳಿತದ ಮೇಲಿರುತ್ತದೆ. ಸುರಕ್ಷೆಯ ದೃಷ್ಟಿಯಿಂದ ಕಂಪೌಂಡಿನಿಂದಾಚೆ ಸಕಾರಣವಿಲ್ಲದೆ, ಜೊತೆಗೆ ಯಾರೂ ಇಲ್ಲದೆ ಕಾಲಿಡುವುದು ನಿಷಿದ್ಧವಾಗಿತ್ತು. ಇದೊಂದು ನಿಯಮವೆಂದಮೇಲೆ ನಿಯಮವನ್ನು ಉಲ್ಲಂಘಿಸುವುದು ವಿದ್ಯಾರ್ಥಿಗಳಾದ ನಮ್ಮ ಆದ್ಯ ಕರ್ತವ್ಯವೆಂದು ತಿಳಿದುಕೊಂಡಿದ್ದ ಕಾಲ. ಹೀಗಾಗಿ ರೂಲ್ಸ್ ಬ್ರೇಕ್ ಮಾಡಿ ನಮ್ಮ ಸಾಹಸ ಪರಾಕ್ರಮಗಳನ್ನು ಸ್ನೇಹಿತರೆದುರಿಗೆ ಪ್ರದರ್ಶನ ಮಾಡಲು ಯಾವುದಾದರೂ ಒಂದು ಸಣ್ಣ ಅವಕಾಶ ಸಿಗಬಹುದೇನೋ ಎಂದು ಕಾಯುತ್ತಲೇ ಇರುತ್ತಿದ್ದೆವು. 
ಮಳಗಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಶುರುವಾಗಿಬಿಟ್ಟಿದೆ. ಜಾತ್ರೆಗೆ ಮಕ್ಕಳೆಲ್ಲರನ್ನೂ ಶಿಕ್ಷಕರು ಯಾವುದಾದರು ಒಂದು ಸಂಜೆ ಕರೆದುಕೊಂಡು ಹೋಗುತ್ತಿದ್ದರೂ ಹಾಗೆ ಹೋಗಿ ಬರುವುದರಲ್ಲಿ ನಮಗೆ, ಅಂದರೆ ಸೀನಿಯರುಗಳಿಗೆ ಹೊಸತೇನೂ ಇರಲಿಲ್ಲ. ರಾತ್ರಿ ಹನ್ನೆರಡು ದಾಟಿದಮೇಲೆ ಗುಂಪಾಗಿ ಕಂಪೌಂಡು ಹಾರಿ ಕಳ್ಳವಂಟಿಗೆಯಲ್ಲಿ ಹೋಗಿ ಪೇಟೆ ಸುತ್ತಿಬರುವುದರಲ್ಲೇ ಇತ್ತು ಅಸಲೀ ಮಜ. ನನಗೆ ಸರಿಯಾದ ಜೊತೆ ಯಾರೂ ಸಿಗದೇ ಒಂದನೇ ರಾತ್ರಿ ಹಾಗೇ ಕಳೆದುಹೋಯಿತು. ಸುಮ್ಮನಿದ್ದರೆ ಇದು ಆಗುವ ಕೆಲಸವಲ್ಲ ಎಂಬುದನ್ನು ಅರಿತ ನಾನು ಮರುದಿನ ಬೆಳಿಗ್ಗೆಯೇ ಗೆಳೆಯ ಕುಮಾರನ ಬಳಿ ಹೋದೆ ಹಾಗೂ ನನ್ನ ಪ್ಲ್ಯಾನನ್ನ್ನು ಅವನ ಎದುರಿಗಿಟ್ಟೆ. ನಮ್ಮ ಬ್ಯಾಚಿನ ಹುಡುಗರಲ್ಲೆಲ್ಲರಲ್ಲೂ ನನ್ನಂತೆಯೇ ಸೋ ಕಾಲ್ಡ್ ಡೀಸೆಂಟ್ ಬಾಯ್ ಆಗಿದ್ದ ಆತ ಮೊದಮೊದಲು ನಾನಂದುಕೊಂಡತೆಯೆ ಹೆದರಿದ ಹಾಗೂ ಬರಲು ನಿರಾಕರಿಸಿದ. ಆದರೆ ಅಷ್ಟು ಸುಲಭಕ್ಕೆ ನಾನು ಬಿಡುವವನಾ? ಸುಮಾರು ಅರ್ಧ ಗಂಟೆ ಪಂಪ್ ಹೊಡೆದು ಉಬ್ಬಿಸಿದಮೇಲೆ ಅಂತೂ ಇಂತೂ ಆಸಾಮಿ ಒಪ್ಪಿಕೊಂಡ.
ಅಂದು ರಾತ್ರಿ ಹನ್ನೆರಡಕ್ಕೆಲ್ಲ ಸರಿಯಾಗಿ ನಾವಿಬ್ಬರೂ ಕಂಪೌಂಡು ಗೋಡೆಯ ಬಳಿ ಇದ್ದೆವು. ಅದ್ಯಾವುದೋ ಹುಂಬ ಧೈರ್ಯದಲ್ಲಿ ಅವಶ್ಯಕತೆ ಇರುತ್ತದೆಂಬುದು ಗೊತ್ತಿದ್ದೂ ಇಬ್ಬರಲ್ಲಿ ಒಬ್ಬರೂ ಒಂದು ಟಾರ್ಚನ್ನೂ ತಂದಿರಲಿಲ್ಲ. ಕಂಪೌಂಡು ಸಮೀಪಿಸಿದಾಗ ಕತ್ತಲೆಯ ಅರಿವಾಗಿ ಸಣ್ಣ ಹೆದರಿಕೆಯೊಂದು ಶುರುವಾಗಿತ್ತು. ಆದರೂ ಇಲ್ಲಿಯತನಕ ಬಂದಿದ್ದಾಗಿದೆ, ಮತ್ತೆ ಅದನ್ನು ತರಲೆಂದು ವಾಪಸ್ ಹಾಸ್ಟೆಲಿಗೆ ಯಾವನು ಹೋಗುತ್ತಾನೆ? ಹೇಗಾದರೂ ಮುಂದೆ ಬೀದಿ ದೀಪಗಳಿರುತ್ತವೆ ಎಂದು ನಮಗೆ ನಾವೇ ಧೈರ್ಯ ಹೇಳಿಕೊಂಡು ಗೋಡೆ ಹತ್ತಿ ಆಚೆ ಹಾರಿಯೇಬಿಟ್ಟೆವು. ರಪ್ಪೆಂದು ಕೆಳಗೆ ಬಿದ್ದಿದ್ದೇ ತಡ, ಸದ್ದು ಕೇಳಿದ ಅಲ್ಲಿಯೇ ಇದ್ದ ಮನೆಯೊಂದರ ನಾಯಿ ತನಗೆ ಇದ್ದ ಶಕ್ತಿಯನ್ನೆಲ್ಲವನ್ನೂ ಒಗ್ಗೂಡಿಸಿ ಬೊಗಳಲಾರಂಭಿಸಿತು. ಇನ್ನು ತಡಮಾಡಿದರೆ ಮನೆಯ ಯಜಮಾನ ದೊಣ್ಣೆ ಹಿಡಿದು ಹೊರಗೆ ಬಂದಾನು ಎಂದುಕೊಂಡ ನಾವಿಬ್ಬರೂ ಒಂದೇ ಉಸಿರಿಗೆ ಅಲ್ಲಿಂದ ಕಾಲುಕಿತ್ತಿದ್ದೆವು. ಹಾಗೆ ಓಡುತ್ತಲೇ ಸುಮಾರು ಒಂದು ಫರ್ಲಾಂಗ್ ಕ್ರಮಿಸಿದ್ದೆವೇನೋ, ಆಗ ಎದುರಾಗಿತ್ತು ಆಲದಮರ. ತನ್ನ ಅಸಂಖ್ಯ ಬಿಳಲುಗಳನ್ನು ನೆಲದ ಮೇಲೆಲ್ಲ ಹರಿಯಬಿಟ್ಟು ಕತ್ತಲೆಯಲ್ಲಿ ಗುಮ್ಮನಂತೆ ನಿಂತಿದ್ದ ಆ ಮಹಾಗಾತ್ರದ ಆಲದಮರದಲ್ಲಿ ಪ್ರೇತಾತ್ಮಗಳಿರುತ್ತವೆ ಎಂದು ಹಾಸ್ಟೆಲ್ಲಿನಲ್ಲಿ ಯಾರೋ ತಮಾಷೆಗೆ ಹೇಳಿದ್ದು ನೆನಪಾಯಿತು. ಹೇಳಿದ್ದು ತಮಾಷೆಗೆಂಬ ಅರಿವಿದ್ದರೂ ಆ ಕ್ಷಣಕ್ಕೆ ನಾವಿಬ್ಬರೂ ನಿಜವಾಗಿ ಮೈತುಂಬ ಬೆವರಲಾರಂಭಿಸಿಬಿಟ್ಟಿದ್ದೆವು. ದಾರಿಯಲ್ಲಿ ಸ್ವಲ್ಪ ಹಿಂದೆ ಕಳೆದಿದ್ದ ಬೀದಿ ದೀಪದ ಕ್ಷೀಣ ಬೆಳಕು ಅಲ್ಲಿಯೂ ಹರಡಿತ್ತು. ಅದೇ ಬೆಳಕಿನಲ್ಲಿಯೇ ಮರದ ಎದುರಿಗೇ ಇದ್ದ ದಾರಿಯನ್ನೊಮ್ಮೆ ಸರಿಯಾಗಿ ನೋಡಿಕೊಂಡೆವು. ಹಾಗೆಯೇ ಕಣ್ಣುಮುಚ್ಚಿ ಜನಿವಾರವನ್ನು ಕೈಯಲ್ಲಿ ಹಿಡಿದು ಸಟಸಟನೆ ನಡೆಯುತ್ತಲೇ ಇದ್ದವರು ನಿಂತದ್ದು ಕುಮಾರ ಕಲ್ಲೊಂದನ್ನು ಎಡವಿ ಬಿದ್ದು ಕೂಗಿಕೊಂಡಾಗಲೇ. ಪುಣ್ಯಕ್ಕೆ ಅಷ್ಟರಲ್ಲಾಗಲೇ ನಾವು ಆಲದಮರವನ್ನು ದಾಟಿ ಸುಮಾರು ದೂರ ಬಂದಾಗಿತ್ತು  ಮತ್ತು ಕುಮಾರನಿಗೆ ದೊಡ್ಡದೆಂಬಂತಹ ಗಾಯವೇನೂ ಆಗಿರಲಿಲ್ಲ. ಅಲ್ಲಿಯೇ ಸ್ವಲ್ಪ ಹೊತ್ತು ಕೂತು ಸುಧಾರಿಸಿಕೊಂಡಮೇಲೆ ಸಾವಕಾಶ ಮುಖ್ಯರಸ್ತೆ ತಲುಪಿದೆವು.
ಇನ್ನೂ ಒಂದೂವರೆ ಕಿಲೋಮೀಟರ್ ನಡೆಯಬೇಕು ಮಳಗಿ ತಲುಪಲು. ಆದರೆ ರಸ್ತೆ ಬೀದಿ ದೀಪಗಳಿಂದ ಬೆಳಕಾಗಿದ್ದುದರಿಂದ ಹಾಗೂ ನಾವು ಶಾಲೆ ಕಳೆದು ಆಗಲೇ ತುಂಬ ದೂರ ಬಂದಿದ್ದೆವಾದ್ದರಿಂದ ಜಾತ್ರೆ ನಡೆಯುತ್ತಿದ್ದ ಜಾಗ ತಲುಪುವಲ್ಲಿ ನಮಗೆ ಯಾವುದೇ ತೊಂದರೆ, ಹೆದರಿಕೆ ಆಗಲಿಲ್ಲ. ಅಷ್ಟೆಲ್ಲ ಪಾಡು ಪಟ್ಟು ಜಾತ್ರೆಗೆ ಹೋಗಿ ನಾವು ಮಾಡಿದ್ದೇನು? ಏನಾದರೂ ಮಾಡಲಿಕ್ಕೆ ಆ ಅಪರಾತ್ರಿಯಲ್ಲಿ ಇದ್ದದ್ದಾದರೂ ಏನು? ಒಂದು ಮೂಲೆಯ ಟೆಂಟಿನಲ್ಲಿ ನಾಟಕ ನಡೆಯುತ್ತಿತ್ತು, ಟಿಕೇಟು ತೆಗೆದುಕೊಂಡು ಕೂತು ಬೆಳಗಿನತನಕ ನೋಡುವ ಸ್ಥಿತಿಯಲ್ಲಿ, ವ್ಯವಧಾನದೊಡನೆ ನಾವಿರಲಿಲ್ಲ. ಅಲ್ಲಲ್ಲಿ ಗುಂಪುಗಳಲ್ಲಿ ಜನ ಜುಗಾರಿ ಆಡುತ್ತಿದ್ದರು. ಹತ್ತಿರ ಹೋಗಿ ನೋಡಿದರೆ ನಮ್ಮ ಶಾಲೆಯ ಜವಾನನೊಬ್ಬನೂ ಜೋರು ಆಟದಲ್ಲಿ ನಿರತನಾಗಿದ್ದಾನೆ. ರಾತ್ರಿಯಲ್ಲೂ ಬಾಗಿಲು ತೆರೆದಿದ್ದ ಮಿಠಾಯಿ ಅಂಗಡಿಯೊಂದರಲ್ಲಿ ಏನನ್ನೋ ಕೊಂಡು ತಿಂದೆವು ಮತ್ತು ಹಾಸ್ಟೆಲ್ಲಿನಲ್ಲಿ ತಿನ್ನಲೆಂದು ಮತ್ತಿಷ್ಟು ಕಟ್ಟಿಸಿಕೊಂಡೆವು. ಉತ್ಸಾಹ ಬಾಕಿ ಇತ್ತಾದ್ದರಿಂದ ಇನ್ನೂ ಅರ್ಧಗಂಟೆ ಎಲ್ಲೆಲ್ಲೋ ತಿರುಗುತ್ತಿದ್ದೆವು. ಹಾಗೆ ತಿರುಗುತ್ತಿದ್ದಾಗಲೇ ನಮ್ಮಂತೆಯೇ ಹಾಸ್ಟೆಲ್ಲಿನಿಂದ ಬೇರೆಬೇರೆ ಗುಂಪಿನ ಜೊತೆ ಭೇಟಿಯೂ ಆಯಿತು. ಎಲ್ಲ ಗುಂಪಿನವರ ಮುಖದಲ್ಲೂ ನನ್ನನ್ನು ಮತ್ತು ಕುಮಾರನನ್ನು ಕಂಡು ಏನೋ ಅನಿರೀಕ್ಷಿತವಾದುದನ್ನು ಕಂಡ ಭಾವನೆ ಪ್ರಕಟವಾಗುತ್ತಿತ್ತು. ವಾಚು ನೋಡಿದರೆ ಗಂಟೆಯ ಮುಳ್ಳು ಆಗಲೇ ಮೂರರ ಕಡೆ ಮುಖಮಾಡಿದೆ. ಇನ್ನು ತಡಮಾಡಿದರೆ ಆಪತ್ತು ಖಚಿತ ಎಂದುಕೊಳ್ಳುತ್ತ ಶಾಲೆಯ ದಾರಿ ಹಿಡಿದೆವು ನಾವಿಬ್ಬರೂ.
ಅದೇಕೋ ಹಿಂತಿರುಗಿ ಬರಬೇಕಾದರೆ ಅದೇ ಆಲದಮರವನ್ನು ದಾಟಿ ಬಂದರು ಒಂದು ಚೂರೂ ಹೆದರಿಕೆಯಾಗಲೇ ಇಲ್ಲ. ಇಪ್ಪತ್ತು ನಿಮಿಷ ಕಳೆಯುವುದರೊಳಗೆ ಮತ್ತೆ ಕಂಪೌಂಡ್ ಗೋಡೆಯ ಬಳಿ ತಲುಪಿಯಾಗಿತ್ತು ನಾವು. ಇನ್ನೇನು ಹತ್ತಿ ಹಾರುವುದೊಂದೇ ಬಾಕಿ. ನಾನೇ ಮೊದಲು ಹತ್ತುತ್ತೇನೆಂದು ಹತ್ತಿ ಗೋಡೆಯ ಮೇಲೆ ನಿಂತಿದ್ದಾಗಲೇ ಸರಿಯಾಗಿ ನನ್ನ ಮುಖದ ಮೇಲೆ ಪ್ರಖರವಾದ ಟಾರ್ಚ್ ಬೆಳಕು ಬಿದ್ದಿತು. ಆಯಿತು, ನಮ್ಮ ಕಥೆಯಿನ್ನು ಮುಗಿಯಿತು. ಈ ಟಾರ್ಚ್ ಬೆಳಕು ಬಿಟ್ಟಿದ್ದು ಯಾರೋ ಗೂರ್ಖಾನೇ ಎಂಬುದು ಖಚಿತವಾದೊಡನೆಯೇ ನಾನು ಒಳಹಾರಿ ಎದ್ದು ಬಿದ್ದು ಓಡಲಾರಂಭಿಸಿದೆ. ಕುಮಾರ ಗೋಡೆ ಹತ್ತಲೇ ಇಲ್ಲ. ಆಗ ಕೇಳಿಸಿತು, "ನಿಲ್ಲಲೇ! ಹಂಗ್ಯಾಕೆ ಓಡ್ತೀ?" ಥಟ್ಟನೆ ಆ ಧ್ವನಿ ಯಾರದೆಂದು ಗೊತ್ತಾಗಿಹೋಯಿತು ನನಗೆ. ಅವನೇ, ರಮಾಕಾಂತ. ನನ್ನ ಮತ್ತೊಬ್ಬ ಗೆಳೆಯನಾಗಿದ್ದ ಆತ ಬೇರೊಂದು ದಾರಿಯಲ್ಲಿ ಅವನ ಗುಂಪಿನವರೊಡನೆ ಸರಿಯಾಗಿ ನಾವು ಬಂದ ಹೊತ್ತಿಗೇ ವಾಪಸ್ ಬಂದಿದ್ದ ಹಾಗೂ ನನ್ನನ್ನು ಕಂಡು ಮುಖದ ಮೇಲೆ ಬೆಳಕು ಬಿಟ್ಟಿದ್ದ. ಅಬ್ಬ! ನನಗೆ ಹೋದ ಜೀವ ಬಂದಂತಾಯಿತು. ರಮಾಕಾಂತ ಸಣ್ಣದಾಗಿ ಕುಹಕ ನಗುತ್ತಿದ್ದ. ಕುಮಾರ ಇದೆಲ್ಲ ನಡೆಯುತ್ತಿದ್ದಾಗಲೇ ಮೆಲ್ಲನೆ ಒಳಬಂದಿದ್ದ.
ಎಲ್ಲ ನಡೆದು ಸುಮಾರು ಏಳು ವರ್ಷವಾಗಿದ್ದರೂ ಮೊನ್ನೆಮೊನ್ನೆ ನಡೆದಂತೆ ನೆನಪುಗಳು ಹಸಿರಾಗೇ ಇವೆ ಮತ್ತು ಹಾಗೇ ಇರುತ್ತವೆ ಕೂಡ. ನಾವು ಮಾಡಿದ ಕೆಲಸ ಅಂದು ನಮಗೆ ಹೆಮ್ಮೆಯ ವಿಷಯವೇ ಆಗಿತ್ತಾದರೂ ಮುಂದಿನ ವರ್ಷಗಳಲ್ಲಿ ನಾನು ಮಾಡಿದ್ದು ತಪ್ಪೆಂಬ ಅರಿವಾಗಿದೆ. ಆದರೆ ತಪ್ಪುಗಳನ್ನೇ ಮಾಡದ, ರೂಲ್ಸುಗಳನ್ನೇ ಬ್ರೇಕ್ ಮಾಡದ ಜೀವನವಾದರೂ ಅದೆಂಥ ಜೀವನ?  

5 comments:

 1. Sooper .... Nangoo nanna shaleya dinagalannella ondh kshanadalle recap maadule anuvu maadtu ee lekhana.... nice one.

  ReplyDelete
 2. Oho! Malgi jatre :)
  Congrats artcle publish agiddakke. Keep writing. JNV ela ond sala nenpaatu :)

  ReplyDelete
 3. one of OUR dare act in JNVUK. Sihi Nenapu.! nice article Vaagish.:) #NavodayaLife

  ReplyDelete