Wednesday 18 February 2015

ಇನ್ನೊಂದಿಷ್ಟು ಕಾಫ್ಕಾ ಕಥೆಗಳು

          ಈಗ ಕೆಲ ತಿಂಗಳ ಹಿಂದೆ ಒಂದಿಷ್ಟು ಚಿಕ್ಕ ಚಿಕ್ಕ ಕಾಫ್ಕಾ ಕಥೆಗಳ ಅನುವಾದ ಮಾಡಿ ಪೋಸ್ಟ್ ಮಾಡಿದ್ದೆ. ಎಷ್ಟು ಜನ ಓದಿದರೋ ಗೊತ್ತಿಲ್ಲ. ಹಿಂದೆ ಓದಿ, ಒಂದೊಮ್ಮೆ ಮತ್ತೂ ಓದಬೇಕು ಎನಿಸಿದಲ್ಲಿ, ಅಥವಾ ಈಗ ಓದಬೇಕು ಎನಿಸಿದಲ್ಲಿ, ಇನ್ನೊಂದಿಷ್ಟು ಇಲ್ಲಿವೆ.



ನ್ಯಾಯದೆದುರಲ್ಲಿ

          ನ್ಯಾಯದ ಮನೆಯ ಬಾಗಿಲಲ್ಲಿ ಕಾವಲುಗಾರನೊಬ್ಬ ನಿಂತಿದ್ದಾನೆ. ದೂರದ ಹಳ್ಳಿಗನೊಬ್ಬ ಕಾವಲುಗಾರನಲ್ಲಿಗೆ ಬಂದು ಒಳಪ್ರವೇಶಿಸಲು ಅನುಮತಿ ಕೇಳಿದ. ಆದರೆ ಕಾವಲುಗಾರ ಈ ಕ್ಷಣದಲ್ಲಿ ಪ್ರವೇಶಕ್ಕೆ ಅನುಮತಿಯಿಲ್ಲವೆಂದ. ಹಳ್ಳಿಗ ಒಮ್ಮೆ ಯೋಚಿಸಿ ಸ್ವಲ್ಪ ಸಮಯದ ನಂತರ ಒಳಹೋಗಬಹುದೇ ಎಂದು ಕೇಳಲು ಕಾವಲುಗಾರ ಹೇಳುತ್ತಾನೆ, "ಸಾಧ್ಯತೆಗಳಿವೆ, ಆದರೆ ಈ ಕ್ಷಣದಲ್ಲಿಯಂತೂ ಇಲ್ಲವೇ ಇಲ್ಲ". ದ್ವಾರವನ್ನು ತೆರೆದೇ ಇಟ್ಟು ಕಾವಲುಗಾರನು ಬದಿಯಲ್ಲಿ ಸರಿದು ನಿಲ್ಲಲು ಹಳ್ಳಿಗ ಬಾಗಿಲ ಮೂಲಕ ಇಣುಕಿ ಮನೆಯ ಒಳಾಂಗಾಣದೆಡೆಗೆ ದೃಷ್ಟಿ ಹಾಯಿಸುತ್ತಾನೆ. ಅದನ್ನು ನೋಡಿದ ಕಾವಲುಗಾರನು ನಗುತ್ತ "ನಿನಗೆ ಒಳಹೋಗಲು ಅಷ್ಟು ಇಷ್ಟವಿದ್ದರೆ ನನ್ನ ನಿರಾಕರಣವನ್ನು ಧಿಕ್ಕರಿಸಿ ಹೋಗುವ ಪ್ರಯತ್ನ ಮಾಡು. ನೆನಪಿರಲಿ : ನಾನು ಶಕ್ತಿವಂತ. ಆದರೆ ನಾನು ಕಾವಲುಗಾರರೆಲ್ಲರಲ್ಲೂ ಅತಿ ಕಡಿಮೆ ಶಕ್ತಿವಂತ. ಒಂದೊಂದು ಹಜಾರವನ್ನು ದಾಟಿದಂತೆಯೂ ಹಿಂದಿನವನಿಗಿಂತ ಶಕ್ತಿವಂತನಾದ ಮತ್ತೊಬ್ಬ ಕಾವಲುಗಾರ ಎದುರಾಗುತ್ತಾನೆ. ಮೂರನೆಯ ಕಾವಲುಗಾರನಂತೂ ಎಷ್ಟು ಭಯಂಕರನಾಗಿದ್ದಾನೆಂದರೆ ನಾನೂ ಅವನನ್ನು ಕಣ್ಣೆತ್ತಿ ನೋಡಲಾರೆ". ಹಳ್ಳಿಗ ಇವೆಲ್ಲವನ್ನೂ ನಿರೀಕ್ಷಿಸಿರಲಿಲ್ಲ ; ನ್ಯಾಯವೆಂದರೆ ಎಲ್ಲರ ಕೈಗೆಟಕುವಂತಿರಬೇಕು ಎಂಬುದು ಅವನ ಯೋಚನೆಯಾಗಿತ್ತು. ಆದರೀಗ ದಪ್ಪ ಕೋಟು ಧರಿಸಿದ, ಚೂಪಾದ ಉದ್ದ ಮೂಗಿನ, ಕಪ್ಪನೆಯ ಗಡ್ಡದ ಕಾವಲುಗಾರನನ್ನು ಹತ್ತಿರದಿಂದ ನೋಡಿದ ನಂತರ ಕಾಯುವುದೇ ವಾಸಿಯೆಂದು ನಿರ್ಧರಿಸಿದ. ಕಾವಲುಗಾರ ಹಳ್ಳಿಗನಿಗೆ ಕುಳಿತುಕೊಳ್ಳಲು ಬಾಗಿಲ ಬದಿಯಲ್ಲೇ ಆಸನವೊಂದನ್ನು ಇಟ್ಟುಕೊಟ್ಟ. ಹಳ್ಳಿಗ ಕಾಯುತ್ತ ಕುಳಿತ, ದಿನಗಟ್ಟಲೆ, ವರ್ಷಗಟ್ಟಲೆ. ನಡುನಡುವೆ ಒಳನುಸಿಯಲು ಹಲವು ಬಾರಿ ಪ್ರಯತ್ನವನ್ನೆಸಗಿದ ಕೂಡ, ಕಾವಲುಗಾರನನ್ನು ಪರಿಪರಿಯಾಗಿ ಬೇಡಿಕೊಂಡ. ಕಾವಲುಗಾರ ಒಮ್ಮೊಮ್ಮೆ ಅವನೊಡನೆ ಮಾತನಾಡುತ್ತಾನೆ, ಅವನ ಮನೆ, ಊರಿನ ವಿಚಾರವಾಗಿ. ಆದರೆ ಈ ಪ್ರಶ್ನೆಗಳೆಲ್ಲವೂ ರಾಜರು ಪ್ರಜೆಗಳಲ್ಲಿ ಕೇಳುವ ಪ್ರಶ್ನೆಗಳಂತೆ ಅಸಡ್ಡೆಯಿಂದ ಕೂಡಿರುತ್ತವೆ, ಮತ್ತು ಈ ಮಾತುಕತೆಗಳೆಲ್ಲವೂ ಒಳಹೋಗಲು ನಿರಾಕರಣೆಯೊಂದಿಗೆ ಮುಗಿಯುತ್ತವೆ. ಹಳ್ಳಿಗನು ಯಾತ್ರಾರ್ಥವಾಗಿ ತನ್ನೊಡನೆ ತಂದಿದ್ದ ಎಲ್ಲ ವಸ್ತುಗಳನ್ನೂ ಲಂಚದ ರೂಪದಲ್ಲಿ ಕಾವಲುಗಾರನಿಗೆ ಒಪ್ಪಿಸಿಬಿಡುತ್ತಾನೆ. ಇವೆಲ್ಲವನ್ನೂ ಸ್ವೀಕರಿಸುತ್ತ ಕಾವಲುಗಾರ, "ನೀನು ನನ್ನನ್ನೊಲಿಸಲು ಯಾವುದೋ ಒಂದು ಪ್ರಯತ್ನವನ್ನು ಮಾಡದೆ ಬಿಟ್ಟುಬಿಟ್ಟೆ ಎಂಬ ಭಾವನೆ ನಿನ್ನಲ್ಲಿರದಿರಲಿ ಎಂಬ ದೃಷ್ಟಿಯಿಂದ ಇವೆಲ್ಲವನ್ನೂ ತೆಗೆದುಕೊಳ್ಳುತ್ತಿದ್ದೇನೆ" ಎನ್ನುತ್ತಾನೆ. ವರ್ಷಗಳುರುಳಿದಂತೆ ಹಳ್ಳಿಗ ಮೊದಲನೇ ಕಾವಲುಗಾರನನ್ನೇ ತೀವ್ರವಾಗಿ ಗಮನಿಸುತ್ತ ಉಳಿದವರನ್ನು ಮರೆತೇಬಿಡುತ್ತಾನೆ. ನ್ಯಾಯದ ಹಾದಿಯಲ್ಲಿ ಇವನೊಬ್ಬನೇ ತೊಡರು ಎಂದು ಭಾವಿಸಿಬಿಡುತ್ತಾನೆ. ಮೊದಮೊದಲು ತನ್ನ ದುರದೃಷ್ಟವನ್ನು ಜೋರಾಗಿ ಕೂಗುತ್ತಲೇ ಹಳಿದುಕೊಳ್ಳುತ್ತಿದ್ದವನು ಈಗ ಗೊಣಗುತ್ತಾನೆ ಅಷ್ಟೆ. ಮಕ್ಕಳಂತೆ ಆಡುತ್ತಾನೆ. ವರ್ಷಾನುಗಟ್ಟಲೆ ಕಾವಲುಗಾರನನ್ನು ನೋಡಿ, ಗಮನಿಸಿ, ಪರಿಶೀಲಿಸಿ, ಹಳ್ಳಿಗನಿಗೆ ಅವನ ಕೋಟಿನ ಕಾಲರಿನ ತುಪ್ಪಳದೊಳಗೆ ಅಡಗಿರುವ ಹೇನುಗಳ ಪರಿಚಯವೂ ಆಗಿಬಿಟ್ಟಿದೆ. ಅವನು ಆ ಹೇನುಗಳ ಬಳಿ ಕಾವಲುಗಾರನ ಮನವೊಲಿಸುವಲ್ಲಿ ತನಗೆ ಸಹಾಯ ಮಾಡಿರೆಂದು ಬೇಡಿಕೊಳ್ಳುತ್ತಾನೆ. ಈಗೀಗ ಅವನ ದೃಷ್ಟಿ ಕ್ಷೀಣಿಸುತ್ತಿದೆ, ಜಗತ್ತೇ ಕತ್ತಲೆಯಲ್ಲಿ ಮುಳುಗಿದೆಯೋ ಅಥವಾ ತನ್ನ ಕಣ್ಣುಗಳು ತನಗೆ ಮೋಸ ಮಾಡುತ್ತಿವೆಯೋ ತಿಳಿಯುತ್ತಿಲ್ಲ. ಆದರೂ ಅವನಿಗೆ ನ್ಯಾಯದ ದ್ವಾರದಿಂದ ಹೊಮ್ಮಿರುವ ಪ್ರಖರ ಪ್ರಭೆ ಗೋಚರಿಸುತ್ತಿದೆ. ಅವನು ಇನ್ನು ಬಹಳ ದಿನ ಬದುಕಲಾರ. ಸಾಯುವ ಮೊದಲು, ಅವನ ತಲೆಯಲ್ಲಿ ಇವಿಷ್ಟೂ ವರ್ಷಗಳ ಅನುಭವಗಳು ಸೇರಿ ಕಾವಲುಗಾರನನ್ನು ಇನ್ನೂ ಕೇಳಿರದ ಒಂದು ಪ್ರಶ್ನೆಯಾಗಿ ರೂಪುಗೊಳ್ಳುತ್ತವೆ. ಸೆಟೆದುಕೊಳ್ಳುತ್ತಿರುವ ತನ್ನ ದೇಹದ ಕಾರಣ ಎದ್ದು ಕೂರಲಾಗದೆ ಕಾವಲುಗಾರನನ್ನೇ ತನ್ನ ಬಳಿ ಕರೆಯುತ್ತಾನೆ. ಕಾವಲುಗಾರ ಹತ್ತಿರ ಬಂದು ಬಗ್ಗಿ, "ಈಗೇನು ತಿಳಿಯಬಸುತ್ತೀಯ?" ಎಂದು ಕೇಳಲು ಹಳ್ಳಿಗನು, "ಎಲ್ಲರೂ ನ್ಯಾಯವನ್ನು ತಲುಪಲು ಶ್ರಮಿಸುತ್ತಾರೆ. ಅಂಥದ್ದರಲ್ಲಿ ಇನ್ನುವರೆಗೂ ಒಳಹೋಗಲು ಅನುಮತಿ ಬೇಡಿ ನನ್ನನ್ನು ಬಿಟ್ಟು ಮತ್ತೊಬ್ಬ ಯಾಕೆ ಬಂದಿಲ್ಲ?" ಕಾವಲುಗಾರನಿಗೆ ಹಳ್ಳಿಗನ ಅಂತ್ಯ ಹತ್ತಿರವಾಗಿದೆ ಎಂಬ ಅರಿವಾಗಿ, ಶ್ರವಣಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಅವನ ಕಿವಿಯಲ್ಲಿ ಕೂಗಿ ಹೇಳುತ್ತಾನೆ, "ಬೇರೆ ಯಾರಿಗೂ ಈ ಬಾಗಿಲಲ್ಲಿ ಪ್ರವೇಶವಿಲ್ಲವಾಗಿತ್ತು. ಯಾಕೆಂದರೆ ಈ ಬಾಗಿಲನ್ನು ಕೇವಲ ನಿನಗಾಗಿ ನಿರ್ಮಿತವಾಗಿತ್ತು ಮತ್ತು ನಾನೀಗ ಅದನ್ನು ಮುಚ್ಚಲಿದ್ದೇನೆ"



ಹೀಗೊಂದು ರಾಜಸಂದೇಶ

          ಅರಮನೆಯಿಂದ ಬಹುದೂರದಲ್ಲೆಲ್ಲೋ ತುಚ್ಛ ನೆರಳಿನಂತೆ ಅವಿತು ಕುಳಿತಿರುವ ವಿನಮ್ರ ಪ್ರಜೆಯೇ, ಮಹಾರಾಜರು ನಿನಗೊಂದು ಸಂದೇಶವನ್ನು ಕಳುಹಿಸಿದ್ದಾರೆಂದು ಸುದ್ದಿ ಹರಡಿದೆ. ಅವರು ತಮ್ಮ ಮರಣ ಶಯ್ಯೆಯಿಂದ ಕೇವಲ ನಿನಗಾಗಿ ಈ ಸಂದೇಶವನ್ನು ಕಳುಹಿಸಿದ್ದಾರೆ. ಸಂದೇಶಗಾರನನ್ನು ತಮ್ಮ ಹಾಸಿಗೆಯ ಪಕ್ಕ ಮಂಡಿಯೂರಿ ಕೂರಿಸಿ ಸಂದೇಶವನ್ನು ಆತನ ಕಿವಿಯಲ್ಲಿ ಉಸುರಿದ್ದಾರಂತೆ. ಇದರ ಬಗ್ಗೆ ಅವರು ಎಷ್ಟು ಎಚ್ಚರ ವಹಿಸಿದ್ದರಂತೆಂದರೆ ತಾವು ಹೇಳಿದ್ದನ್ನು ಪುನಃ ತಮ್ಮ ಕಿವಿಯಲ್ಲಿ ಹೇಳುವಂತೆ ಆಜ್ಞಾಪಿಸಿದರಂತೆ. ಹೌದು, ಅವರ ಸಾವಿಗೆ ಸಾಕ್ಷಿಯಾಗಿ ನಿಂತಿದ್ದ ಎಲ್ಲರ ಮುಂದೆ. ಅಂತಃಪುರದ ಗೋಡೆಗಳನ್ನು ಒಡೆದು ಸರ್ವರಿಗೂ ವೀಕ್ಷಣೆಯ ಅವಕಾಶ ಕಲ್ಪಿಸಲಾಗಿತ್ತಂತೆ, ರಾಜಕುಮಾರರೆಲ್ಲರೂ ವಿಶಾಲವಾದ ಮೆಟ್ಟಿಲುಗಳ ಮೇಲೆ ನಿಂತಿದ್ದರಂತೆ. ಪ್ರಬಲ, ದಣಿವರಿಯದ ಸಂದೇಶಗಾರ ಕೂಡಲೇ ಪ್ರಯಾಣಕ್ಕೆ ಅಣಿಯಾಗಿ ಹೊರಟಿದ್ದಾನೆ. ಅಗೋ! ಈಗ ಬಲಗೈ, ಈಗ ಎಡಗೈ ಮುನ್ನೂಕುತ್ತ ಜನಸಂದಣಿಯನ್ನು ಸೀಳಿ ಧಾವಿಸಿದ್ದಾನೆ. ದಾರಿಯಲ್ಲಿ ಯಾರಾದರೂ ಅಡ್ಡ ಬಂದರೆ ಆತ ತನ್ನ ಎದೆಯಮೇಲೆ ಮಿನುಗುತ್ತಿರುವ ಸೂರ್ಯನ ಚಿಹ್ನೆಯ ರಾಜಲಾಂಛನವನ್ನು ತೋರಿಸುತ್ತಾನೆ. ಈಗ ಅವನನ್ನು ಯಾರೂ ಏನೂ ಕೇಳರು. ಅವನು ಗಾಳಿಯಲ್ಲಿ ಹಾರಿ ಅರಮನೆಯನ್ನು ದಾಟಿ ಬಂದುಬಿಡುವಂತಿದ್ದರೆ ಈ ಹೊತ್ತಿಗಾಗಲೇ ನಿನ್ನ ಮನೆಯ ಬಾಗಿಲು ತಟ್ಟಿರುತ್ತಿದ್ದನೇನೋ. ಆದರೆ ಅವನ ಶಕ್ತಿ ವ್ಯರ್ಥವಾಗಿ ಕ್ಷಯಿಸುತ್ತಿದೆ. ಇನ್ನೂ ಅವನು ಎಲ್ಲಕ್ಕಿಂತ ಒಳಗಿನ ಅರಮನೆಯ ಕೋಣೆಯೊಂದನ್ನು ದಾಟುತ್ತಿದ್ದಾನೆ ಅಷ್ಟೇ. ಆದರೆ ಅವನು ಅದರಾಚೆ ಬರಲಾರ. ಅಕಸ್ಮಾತ್ ಬಂದರೂ ಏನೂ ಉಪಯೋಗವಿಲ್ಲ, ಆಂಗಣವನ್ನು ದಾಟಬೇಕು. ಅದರಾಚೆಗೆ ಎರಡನೇ ಅರಮನೆ. ಇನ್ನೊಂದು ಬಾರಿ ಮೆಟ್ಟಿಲುಗಳನ್ನು ಇಳಿದು ಅಂಗಳವನ್ನು ದಾಟಬೇಕು. ಮುಂದೆ ಮತ್ತೊಂದು ಅರಮನೆ. ಹೀಗೆ ಸಾವಿರಾರು ವರ್ಷಗಳು ಕಳೆದುಹೋಗಬಹುದು. ಅಂತೂ ಕೊನೆಗೊಮ್ಮೆ ಆತ ಎಲ್ಲಕ್ಕಿಂತ ಹೊರಗಿನ ದ್ವಾರವನ್ನು ಬೇಧಿಸಿ ಹೊರಬಂದನೆಂದುಕೊಳ್ಳಿ - ಅದು ಯಾವತ್ತೂ ಆಗುವ ಕೆಲಸವಲ್ಲ ಎಂಬುದು ನೆನಪಿರಲಿ - ಮುಂದೆ ಭೂಮಿಯ ಕೇಂದ್ರವಾದ, ಜನರಿಂದ ತುಂಬಿ ಸಿಡಿಯುತ್ತಿರುವ ರಾಜಧಾನಿಯಿದೆ. ಅದು ಯಾವನೇ ಆದರೂ, ಸತ್ತವನ ಸಂದೇಶವನ್ನು ಹೊತ್ತವನೇ ಆದರೂ ಇದನ್ನೆಲ್ಲ ಪಾರಾಗಿ ಹೊರಬರಲು ಅವನಿಗೆ ಸಾಧ್ಯವಿಲ್ಲ. ಆದರಿಲ್ಲಿ ನೀನು ಸಂಜೆಯಾಗುತ್ತಿದ್ದಂತೆ ಕಿಟಕಿಯ ಪಕ್ಕ ಕುಳಿತು ಕನಸು ಕಾಣುತ್ತಿದ್ದೀಯ.



ಸಂತೋಷರಾಹಿತ್ಯ

          ನವೆಂಬರ್ ತಿಂಗಳ ಒಂದು ಸಂಜೆ. ತಾಳಲಾರದಷ್ಟು ಚಳಿಯಿತ್ತು. ಕೋಣೆಯಲ್ಲಿ ಹಾಸಿದ್ದ ಚಾಪೆಯ ಅಂಚಿನಗುಂಟ ಓಡಿದೆ, ಬೀದಿಯ ಬೆಳಕಿಗಿಂತ ಕಳಗೆ ತಗ್ಗಿ. ಒಳಗೋಡೆಯತ್ತ ತಿರುಗುತ್ತಿದ್ದಂತೆ ಥಟ್ಟನೆ ಏನೋ ಕಂಡಂತಾಗಿ ಜೋರಾಗಿ ಚೀರಿದೆ. ಆದರೆ ನನ್ನ ಧ್ವನಿಯೇ ನನಗೆ ಕೇಳಿತೆ ಹೊರತು ಅದರಿಂದ ಬೇರೇನೂ ಉಪಯೋಗವಾಗಲಿಲ್ಲ. ಮೌನವಾಗಿಯೇ ನನ್ನ ಚೀರು ಅಗಾಧವಾಗಿ ಬೆಳೆಯುತ್ತಿದೆಯೆನಿಸುತ್ತಿರುವಂತೆಯೇ ಕೋಣೆಯ ಬಾಗಿಲು ನನ್ನೆಡೆಗೆ ತೆರೆದುಕೊಂಡಿತು, ಮಿಂಚಿನ ವೇಗದಲ್ಲಿ, ಏಕೆಂದರೆ ಆಗ ವೇಗದ ಅವಶ್ಯಕತೆಯಿತ್ತು. ಕೆಳಗೆ ರಸ್ತೆಯಲ್ಲಿ ಕುದುರೆಗಾಡಿಯು ಕೂಡ ಯುದ್ಧೋತ್ಸಾಹದಲ್ಲೆಂಬಂತೆ ಗಾಳಿಯಲ್ಲಿ ಹಾರಿಯೇ  ಹೊರಟಿವೆಯೆನೋ.
          ಇನ್ನೇನು ದೀಪ ಬೆಳಗಬೇಕು ಎನ್ನುವಷ್ಟರಲ್ಲೇ ಭೂತದಂತೆ ಹುಡುಗಿಯೊಬ್ಬಳು ತೆರೆದ ಬಾಗಿಲಿನಿಂದ ನನ್ನೆಡೆಗೆ ಧಾವಿಸಿದಳು. ಮುಳುಗುತ್ತಿರುವ ಸೂರ್ಯನ ಕಿರಣಗಳ ಪ್ರಭೆಗೊಳಗಾದವಳಂತೆ ಒಮ್ಮೆ ಮುಖವನ್ನು ಮುಚ್ಚಿಕೊಂಡಂತೆ ಮಾಡಿದರೂ ಕೂಡಲೇ ಆಕೆ ಕೂಡಲೇ ತೆರೆದೇ ಇದ್ದ ಕಿಟಕಿಯ ಬದಿ ಹೋಗಿ ನಿಂತಳು, ಮುಖವನ್ನು ಗಾಳಿಗೊಡ್ಡಿ.
          ನಾನು ಅವಳೆಡೆಗೊಮ್ಮೆ ನೋಡಿ "ನಮಸ್ಕಾರ" ಎನ್ನುತ್ತ ಅಂಗಿಯನ್ನು ಮೈಮೇಲೇರಿಸಿ ದೀರ್ಘವಾದ ಉಸಿರನ್ನು ಹೊರಚೆಲ್ಲಿದೆ, ನನ್ನೊಳಗಿನ ಅಸಮಾಧಾನವನ್ನು ಹೊರಹಾಕಲೆಂಬಂತೆ. ಬಾಯಲ್ಲಿ ಏನೋ ಕಹಿಕಹಿ ಎನಿಸಿತು. ಕಣ್ರೆಪ್ಪೆಗಳು ತಂತಾನೆ ಫಡಫಡಿಸಲಾರಂಭಿಸಿದವು. ಆದರೆ ಅವೆಲ್ಲವುಗಳಿಂದ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು.
           ಆ ಹುಡುಗಿ ಅಲ್ಲೇ ನಿಂತಿದ್ದಳು, ಕಿಟಕಿಯಿಂದಾಚೆ ದೃಷ್ಟಿ ಬೀರಿ, ಕಿಟಕಿಗೆ ಕೂಡಿದ ಗೋಡೆಯ ಮೇಲೆ ಬಲಗೈಯನಿಟ್ಟು ಅದರ ಮೇಲೆ ತನ್ನ ತಲೆಯನ್ನು ಒರಗಿಸಿದ್ದಳು. ಆಕೆಯ ಕೆನ್ನೆ ಗುಲಾಬಿ ರಂಗಿನಲ್ಲಿ ಹೊಳೆದಿತ್ತು. ಸುಣ್ಣ ಬಳಿದ ಗೋಡೆಯ ಒರಟು ಮೈ ಆಕೆಯ ಬೆರಳ ತುದಿಯನ್ನು ತರಚಿತ್ತು. ನಾನು ಕೇಳಿದೆ, "ನೀನು ಹುಡುಕುತ್ತಿರುವುದು ನನ್ನನ್ನೇ ಹೌದೇನು? ಯಾವುದೇ ಪ್ರಮಾದವೇನು ಇಲ್ಲ ತಾನೇ? ಯಾಕೆಂದರೆ ಈ ದೊಡ್ಡ ಕಟ್ಟಡದಲ್ಲಿ ಹುಡುಕುವಲ್ಲಿ ತಪ್ಪುಗಳಾಗುವುದು ಸಹಜ. ನನ್ನನ್ನು 'ಇಂಥವನು' ಎಂದು ಕರೆಯುತ್ತಾರೆ ಮತ್ತು ನಾನು ಮೂರನೇ ಮಹಡಿಯಲ್ಲಿ ವಾಸಿಸುತ್ತೇನೆ. ಈಗ ಹೇಳು, ನೀನು ನನ್ನನ್ನೇ ಹುಡುಕುತ್ತಿರುವುದೇನು?"
"ಶ್... ಶ್..." ಆ ಹುಡುಗಿ ನನ್ನತ್ತ ತಿರುಗಿ ಹೇಳಿದಳು, "ಸುಮ್ಮನಿರು, ಅಂಥದ್ದೇನೂ ಇಲ್ಲ"
"ಹಾಗಾದರೆ ಇನ್ನೂ ಒಳಗೆ ಬಾ. ನಾನು ಬಾಗಿಲು ಸರಿಸುತ್ತೇನೆ"
"ನಾನು ಆಗಲೇ ಬಾಗಿಲು ಹಾಕಿದ್ದೇನೆ. ತಲೆಬಿಸಿ ಬೇಡ. ಆರಾಮಾಗಿ ಇರು"
"ತಲೆಬಿಸಿ ಎಂದಲ್ಲ. ಇದೇ ಆವಾರದಲ್ಲಿ ತುಂಬ ಜನ ವಾಸಿಸುತ್ತಾರೆ. ಹೌದು, ಅವರೆಲ್ಲರೂ ನನಗೆ ಗೊತ್ತು. ಹೆಚ್ಚಿನವರು ಕೆಲಸದಿಂದ ಹಿಂದಿರುಗುವ ಸಮಯವಾಗಿದೆ. ನನ್ನ ಕೋಣೆಯಿಂದ ಮಾತುಗಳು ಕೇಳಿಸಿದರೆ ಯಾರಾದರೂ ಬಾಗಿಲು ತೆರೆದು ಒಳಬಂದು ನೋಡಲೂಬಹುದು. ಅವರು ಹಾಗೇ. ದಿನದ ಕೆಲಸ ಮುಗಿದ ಮೇಲೆ ಯಾರ ಮಾತನ್ನೂ ಕೇಳಿ ನಡೆದುಕೊಳ್ಳಬೇಕೆಂಬ ಯೋಚನೆ ಅವರಲ್ಲಿ ಇರುವುದಿಲ್ಲ. ಇವೆಲ್ಲವೂ ನಿನಗೂ ಚೆನ್ನಾಗಿ ಗೊತ್ತು. ದಯವಿಟ್ಟು ಬಾಗಿಲು ಹಾಕಲು ಬಿಡು ನನ್ನ"
"ಅದರಿಂದ ಏನಾಗುತ್ತದೆ? ಇದೇ ಕಟ್ಟಡದ ಜನರೇ ಬಂದರೂ ನನಗೇನೂ ತೊಂದರೆಯಿಲ್ಲ. ಮೇಲಾಗಿ ಮೊದಲೇ ಹೇಳಿದಂತೆ ನಾನು ಬಾಗಿಲನ್ನು ಆಗಲೇ ಹಾಕಿದ್ದೇನೆ. ನಿನಗೊಬ್ಬನಿಗೇ ಬಾಗಿಲು ಹಾಕಲು ಬರುವುದೆಂದು ಅಂದುಕೊಂಡಿರುವೆಯೇನು? ಚಿಲಕವನ್ನೂ ಹಾಕಿದ್ದೇನೆ"
"ಒಳ್ಳೆಯದು ಬಿಡು. ಇನ್ನೂ ಹೆಚ್ಚಿನದೇನನ್ನೂ ಕೇಳುವುದಿಲ್ಲ. ಚಿಲಕ ಹಾಕುವ ಅವಶ್ಯಕತೆ ಇಲ್ಲವಾಗಿತ್ತು. ಈಗ ಹೇಳು. ನೀನು ನನ್ನ ಅತಿಥಿ. ನನ್ನನ್ನು ನೀನು ಸಂಪೂರ್ಣವಾಗಿ ನಂಬಬಹುದು. ನಿನ್ನದೇ ಮನೆಯೆಂದು ತಿಳಿ, ಹೆದರಬೇಡ. ಇರು ಅಥವಾ ಹೊರಡು ಎನ್ನುವ ಒತ್ತಾಯವಿಲ್ಲ. ಇದನ್ನೆಲ್ಲ ನಾನು ನಿನಗೆ ಹೇಳಬೇಕೇ? ಅಷ್ಟೂ ಪರಿಚಯವಿಲ್ಲವೇ ನಮ್ಮಲ್ಲಿ?"
"ಇಲ್ಲ. ನೀನು ಅದನ್ನೆಲ್ಲ ಹೇಳಬೇಕಿಲ್ಲ. ಈಗ ಹೇಳಿದ್ದನ್ನು ಹೇಳಬೇಕಾಗಿಯೂ ಇರಲಿಲ್ಲವಾಗಿತ್ತು. ನಾನು ಯಕಶ್ಚಿತ್ ಹುಡುಗಿಯಷ್ಟೇ. ನನಗೆ ಇಷ್ಟೊಂದು ಆದರವೇಕೆ?"
"ಹಾಗಲ್ಲ. ಹೌದು, ನೀನು ಹುಡುಗಿಯೇ. ಆದರೆ ಅಷ್ಟು ಚಿಕ್ಕ ಹುಡುಗಿಯೇನೂ ಅಲ್ಲ. ನೀನು ದೊಡ್ದವಳೇ. ಒಂದೊಮ್ಮೆ ಯುವತಿಯಾಗಿದ್ದರೆ ಹೀಗೆ ನನ್ನೊಡನೆ ಒಂದು ಕೋಣೆಯಲ್ಲಿ ಸುಮ್ಮನೆ ಬಂಧಿತಳಾಗುವ ಧೈರ್ಯ ಮಾಡುತ್ತಿರಲಿಲ್ಲವಾಗಿದ್ದೆ"
"ಅದರ ಬಗ್ಗೆ ಚಿಂತಿತನಾಗುವ ಅವಶ್ಯಕತೆಯಿಲ್ಲ. ನಾನು ಹೇಳುತ್ತಿರುವುದೇನೆಂದರೆ : ನಿನ್ನ ಬಗ್ಗೆ ತಿಳಿದಿರುವುದರಿಂದ ನನಗೆ ಲಾಭವೇನಿಲ್ಲ. ಅದರಿಂದ ನಿನಗೆ ನನ್ನೊಡನೆ ಮಾತನಾಡುವುದು ಸುಲಭವಾಗಬಹುದಷ್ಟೆ. ಅಷ್ಟಾಗಿಯೂ ನೀನು ನನಗೆ ಆದರ ತೋರಿಸುತ್ತಿದ್ದೀಯ. ಬೇಡ. ಬೇಡಿಕೊಳ್ಳುತ್ತೇನೆ, ಬೇಡ. ನನಗೆ ನಿನ್ನ ಬಗ್ಗೆ ಅಷ್ಟು ಸಂಪೂರ್ಣವಾಗಿಯೂ ಗೊತ್ತಿಲ್ಲ, ಅದೂ ಈ ಕತ್ತಲೆಯಲ್ಲಂತೂ ಇಲ್ಲವೇ ಇಲ್ಲ. ದೀಪ ಹೊತ್ತಿಸಿದರೆ ಚೆನ್ನಾಗಿರುತ್ತಿತ್ತೇನೋ. ಬೇಡ ಬಿಡು. ಯಾವುದಕ್ಕೂ ನೀನು ನನ್ನನ್ನು ಬೆದರಿಸುತ್ತಿದ್ದೀಯ ಎಂಬುದನ್ನು ನನ್ನ ಮನಸಿನಲ್ಲಿಟ್ಟುಕೊಳ್ಳುತ್ತೇನೆ"
"ಏನು? ನಾನು ನಿನ್ನನ್ನು ಬೆದರಿಸಬೇಕಾಗಿತ್ತೆ? ನೋಡು, ನೀನೂ ಕೊನೆಗೂ ಬಂದಿರುವಿಯೆಂದು ನಾನೆಷ್ಟು ಖುಷಿಗೊಂಡಿರುವೆ. 'ಕೊನೆಗೂ' ಎಂದು ಯಾಕೆ ಹೇಳುತ್ತಿದ್ದೇನೆಂದರೆ ಈಗಲೇ ಬಹಳಷ್ಟು ವಿಳಂಬವಾಗಿದೆ ಮತ್ತು ನೀನು ಯಾಕೆ ಇಷ್ಟು ತಡಮಾಡಿ ಬಂದಿರುವಿಯೆಂದು ನನಗೆ ತಿಳಿಯುತ್ತಿಲ್ಲ. ನಿನ್ನನ್ನು ಕಂಡ ಖುಷಿಯಲ್ಲಿ ನಾನು ಏನೇನೋ ಹಲುಬುತ್ತಿದ್ದೇನೆ, ಸರಿ. ಅದು ನಿನ್ನ ಹೆದರಿಕೆಗೆ ಕಾರಣವಾಗಿರಲೂಬಹುದು. ಆದರೆ ಜಗಳ ಬೇಡ, ದಯವಿಟ್ಟು. ಆ ತರಹದ ಯೋಚನೆಯಾದರೂ ನಿನ್ನ ತಲೆಯಲ್ಲಿ ಹೇಗೆ ಹುಟ್ಟುತ್ತದೆ? ನನ್ನಲ್ಲೇಕೆ ಅಷ್ಟು ಕಠೋರತನ? ಯಾಕೆ ಈ ಸುಂದರ ಕ್ಷಣವನ್ನು ಹಾಳುಗೆಡವಲು ಹವಣಿಸುತ್ತೀಯ? ಒಬ್ಬ ಆಗಂತುಕ ನಿನಗಿಂತ ಎಷ್ಟೋ ವಾಸಿಯೆನಿಸುತ್ತದೆ"
"ನಾನಿದನ್ನು ಒಪ್ಪುತ್ತೇನೆ. ಈ ವಿಷಯದಲ್ಲೇನೂ ಹೊಸತಿಲ್ಲ. ಯಾವುದೇ ಆಗಂತುಕನೂ ಸಹಜವಾಗಿ ನಿನಗೆ ಇಷ್ಟು ಹತ್ತಿರ ಬರಲಾರ. ನಿನಗದು ಗೊತ್ತಿದ್ದೂ ಈ ಗೋಳೇಕೆ? ಇದೇ ರೀತಿ ಅಸಂಬದ್ಧವಾಗಿ ಮಾತಾಡುತ್ತಿದ್ದರೆ ನಾನು ಹೊರಟುಹೋಗುತ್ತೇನೆ"
"ಏನು? ಹೀಗೆಲ್ಲ ಮಾತಾಡುವಷ್ಟು ಅಧಿಕಪ್ರಸಂಗಿಯೇ ನೀನು? ಉದ್ದಟತನವಾಯಿತು ಇದು. ನನ್ನ ಕೋಣೆಯಲ್ಲಿ ನೀನಿರುವುದು ಎಂಬ ನೆನಪಿರಲಿ. ನೀನು ಹುಚ್ಚಿಯಂತೆ ಬೆರಳುಜ್ಜುತ್ತಿರುವುದು ನನ್ನ ಗೋಡೆಯ ಮೇಲೆ ಎನ್ನುವುದು ನೆನಪಿರಲಿ. ನನ್ನ ಕೋಣೆ, ನನ್ನ ಗೋಡೆ! ನೀನು ಹೇಳುತ್ತಿರುವುದೇನು? ನನ್ನೊಡನೆ ಹೀಗೆ ಮಾತಾಡಲು ನಿನ್ನ ಸ್ವಭಾವ ಪ್ರೇರೇಪಿಸುತ್ತದೆಯೇ? ತಗೋ, ನನ್ನದೂ ಅದೇ ಸ್ವಭಾವ. ಈಗ ನನ್ನ ಸ್ವಭಾವವು ಸ್ನೇಹವನ್ನು ಬಯಸಿದರೆ ನಿನ್ನದೂ ಅಂತೆಯೇ ಇರಬೇಕು"
"ಇದು ಸ್ನೇಹ ಬಯಸುವವರು ಮಾತಾಡುವ ಪರಿಯೇ?"
"ನಾನು ಈ ಹಿಂದಿನದರ ಬಗ್ಗೆ ಮಾತಾಡುತ್ತಿದ್ದೇನೆ"
"ಈ ಮುಂದೆ ನನಗೆನಾಗಬಹುದು ಎಂದು ನಿನಗೆ ಗೊತ್ತಿದೆಯೇ?"
"ನನಗೇನೂ ಗೊತ್ತಿಲ್ಲ"
          ನಾನು ಹಾಸಿಗೆಯ ಬಳಿ ಹೋಗಿ ಪಕ್ಕದಲ್ಲಿರುವ ಟೇಬಲ್ಲಿನ ಮೇಲೆ ಮೋಂಬತ್ತಿಯೊಂದನ್ನು ಹೊತ್ತಿಸಿಟ್ಟೆ. ಆಗ ನನ್ನ ಕೋಣೆಯಲ್ಲಿ ವಿದ್ಯುದ್ದೀಪವಾಗಲೀ ಗ್ಯಾಸ್ ಲೈಟ್ ಆಗಲೀ ಇರಲಿಲ್ಲವಾಗಿತ್ತು. ನಂತರ ಬೇಸರ ಎನ್ನಿಸುವವರೆಗೂ ಅಲ್ಲಿಯೇ ಕೂತೆ. ಹಾಗೆಯೇ ಎದ್ದು ನಿಂತು ಕೋಟೇರಿಸಿ ಟೋಪಿ ಧರಿಸಿ ಮೋಂಬತ್ತಿಯನ್ನಾರಿಸಿದೆ. ಮುಂದೆ ಹೆಜ್ಜೆಯಿಡುತ್ತಿದ್ದಂತೆ ಕುರ್ಚಿಯೊಂದಕ್ಕೆ ಕಾಲೆಡವಿದೆ.
ಮೆಟ್ಟಿಲಿಳಿಯುತ್ತಿರುವಾಗ ನನ್ನದೇ ಮಹಡಿಯಲ್ಲಿರುವ ಇನ್ನೊಬ್ಬನನ್ನು ಭೇಟಿಯಾದೆ.
"ಆಗಲೇ ಇನ್ನೊಮ್ಮೆ ಹೊರಗೆ ಹೊರಟಿರುವೆಯಾ? ಅಯೋಗ್ಯ!" ನನ್ನನ್ನು ಅಡ್ಡಗಟ್ಟಿ ಕೇಳಿದ ಅವನು.
"ಏನು ಮಾಡಲಿ?" ನಾನೆಂದೆ, "ನನ್ನ ಕೋಣೆಯಲ್ಲಿ ದೆವ್ವವೊಂದು ಬಂದು ಸೇರಿಕೊಂಡಿದೆ"
"ನೀನಿದನ್ನು ನಿನ್ನ ಅನ್ನದಲ್ಲಿ ಕೂದಲು ಕಂಡಷ್ಟೇ ಸರಾಗವಾಗಿ ಹೇಳುತ್ತಿರುವೆಯಲ್ಲ"
"ತಮಾಷೆ ಮಾಡಬೇಡ. ದೆವ್ವವೆಂದರೆ ದೆವ್ವ"
"ನಿಜ. ಆದರೆ ದೆವ್ವಗಳಲ್ಲಿ ನಂಬಿಕೆ ಇಲ್ಲದಿದ್ದರೆ ಏನು ಮಾಡುವುದು?"
"ನಾನು ನಂಬುತ್ತೇನೆ ಎಂದುಕೊಂಡಿರುವಿಯೇನು? ಆದರೆ ನಂಬದೆ ಇರುವುದರಿಂದಲೂ ಯಾವುದೇ ಉಪಯೋಗವಾಗುತ್ತಿಲ್ಲ"
"ಯಾಕಾಗುವುದಿಲ್ಲ? ಅಕಸ್ಮಾತ್ ದೆವ್ವವೇ ಬಂದರೂ ಹೆದರಿಕೊಳ್ಳಲಾರೆ ಎಂಬುದಿದ್ದರಾಯಿತು"
"ಅಯ್ಯೋ! ಆ ಭಯವಿಲ್ಲ. ನಿಜವಾದ ಭಯವಿರುವುದು ದೆವ್ವ ಯಾವ ಕಾರಣದಿಂದಾಗಿ ಬಂತೆಂಬುದರ ಬಗ್ಗೆ. ಆ ಭಯ ಹೋಗುವುದಿಲ್ಲ. ನನ್ನಲ್ಲೇ ಮನೆ ಮಾಡಿ ಕೂತುಬಿಟ್ಟಿದೆ" ಏನೋ ಒಂದು ರೀತಿಯ ಮಾನಸಿಕ ಒತ್ತಡಕ್ಕೊಳಗಾಗಿ ಜೇಬುಗಳನ್ನೆಲ್ಲ ತಡಕಾಡತೊಡಗಿದೆ.
"ನಿನಗೆ ದೆವ್ವ ಇರುವುದರ ಬಗ್ಗೆ ಭಯ ಇಲ್ಲವಾಗಿತ್ತಾದ್ದರಿಂದ ಆಗಲೇ ಅದರ ಬಳಿಯೇ ಯಾಕೆ ಬಂದೆಯೆಂದು ಕೇಳಿಬಿಡಬಹುದಿತ್ತು"
"ನೀನು ಮೊದಲೆಂದೂ ದೆವ್ವಗಳ ಜೊತೆ ಮಾತಾಡಿಲ್ಲ, ನಿನಗೆ ಗೊತ್ತಿಲ್ಲ. ದೆವ್ವಗಳು ಯಾವತ್ತೂ ನೇರವಾಗಿ ಉತ್ತರಿಸುವುದಿಲ್ಲ. ಇವುಗಳಿಗೆಲ್ಲ ತಮ್ಮ ಅಸ್ತಿತ್ವದ ಬಗ್ಗೆ ನಮಗಿರುವುದಕ್ಕಿಂತ ಹೆಚ್ಚು ಸಂಶಯವಿದ್ದಂತಿದೆ, ಪಾಪದವು"
"ಆದರೂ ಅವು ನಮ್ಮನ್ನು ಇಷ್ಟಪಡುವಂತೆ ಮಾಡಬಹುದು ಎಂದು ಕೇಳಿದ್ದೇನೆ"
"ಸರಿಯಾಗಿಯೇ ಕೇಳಿದ್ದೀಯ. ನಿಜವೇ. ಆದರೆ ಹಾಗೆ ಯಾರಾದರೂ ಮಾಡಬಹುದೇ?"
"ಯಾಕೆ ಮಾಡುವುದಿಲ್ಲ? ಒಂದೊಮ್ಮೆ ಅದೊಂದು ಹೆಣ್ಣು ದೆವ್ವ ಎಂದುಕೋ" ಹೇಳಿದ ಅವನು, ಒಂದು ಹೆಜ್ಜೆ ಮೇಲಕ್ಕಿಡುತ್ತ.
"ಆಹಾ!" ನಾನೆಂದೆ, "ಆದರೆ ಅದರಿಂದಲೂ ಏನೂ ಉಪಯೋಗವಿಲ್ಲ"
          ನನ್ನ ತಲೆಯಲ್ಲಿ ಬೇರೇನೋ ಆಲೋಚನೆಗಳು ಸುಳಿಯತೊಡಗಿದವು. ತಲೆಯೆತ್ತಿ ನೋಡುವಷ್ಟರಲ್ಲಿ ಅವನಾಗಲೇ ತುಂಬ ಮೇಲೆ ಹೋಗಿಬಿಟ್ಟಿದ್ದ, ಕರೆದರೆ ಸರಿಯಾಗಿ ಕೇಳದಷ್ಟು. "ಎಲ್ಲಾ ಒಂದೇ" ಕೂಗಿದೆ, "ನೀನು ನನ್ನ ದೆವ್ವವನ್ನು ಕದ್ದು ಒಯ್ದೆಯೆಂದರೆ ನನ್ನ ನಿನ್ನ ನಡುವಿನ ಎಲ್ಲವೂ ಮುಗಿಯಿತೆಂದೇ ಅರ್ಥ, ಶಾಶ್ವತವಾಗಿ"
"ನಾನು ತಮಾಷೆ ಮಾಡುತ್ತಿದ್ದೆ ಅಷ್ಟೇ" ಎಂದು ಅವನು ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತಿ ನಡೆದ.
"ಪರವಾಗಿಲ್ಲ" ಎಂದೆ ನಾನು. ಈ ಸಮಯದಲ್ಲಿ ಸುಮ್ಮನೆ ನಡೆದಾಡಲು ಹೋಗಬಹುದು ಎನ್ನಿಸಿತು. ಆದರೆ ನನ್ನ ಹತಾಶೆಯು ಹೇಳಿದಂತೆ ಮತ್ತೆ ಕೋಣೆಗೆ ಹೋಗಿ ಮಲಗಲೆಂದು ಮೆಟ್ಟಿಲು ಹತ್ತತೊಡಗಿದೆ.



ಅವಿವಾಹಿತನ ದುರ್ದೈವ

          ಅವಿವಾಹಿತರಾಗಿಯೇ ಉಳಿದು ಜೀವನ ಸಾಗಿಸುವುದು ತುಂಬ ಭಯಾನಕವಾದುದು. ಒಂದು ಸಂಜೆ ಜೊತೆಯಲ್ಲಿ ಕಳೆಯಲೂ ಯಾರಾದರೂ ಒಬ್ಬಳನ್ನು ಬೇಡಿಕೊಳ್ಳುತ್ತಲೂ ನಮ್ಮ ಗೌರವವನ್ನು ಕಾಯ್ದುಕೊಳ್ಳಬೇಕು. ಹೀಗೇ ಮುದುಕರಾಗುತ್ತೇವೆ. ಖಾಲಿ ಕೋಣೆಯ ಮೂಲೆಯ ಹಾಸಿಗೆಯೊಂದರ ಮೇಲೆ ಕುಳಿತು ವಾರಗಟ್ಟಲೆ ನಿಸ್ತೇಜವಾಗಿ ದೃಷ್ಟಿ ಬೀರುತ್ತಿರುತ್ತೇವೆ. ಪಕ್ಕದ ಮನೆಯವರಿಗೆ 'ಶುಭ ರಾತ್ರಿ' ಹಾರೈಸುತ್ತೇವೆ. ಹೆಂಡತಿಯ ಹಿಂದೆ ಮೆಟ್ಟಿಲು ಹತ್ತುತ್ತ  ಓಡುವ ಅದೃಷ್ಟ ಸಿಗುವುದಿಲ್ಲ. ಕೋಣೆಗೆ ಒಂದೇ ಅಡ್ಡ ಬಾಗಿಲಿರುತ್ತದೆ, ಪಕ್ಕದ ಮನೆಗೆ ಹೋಗಲು. ನಮ್ಮ ಊಟವನ್ನು ನಾವೇ ಹೋಟೆಲಿನಿಂದ ತರಬೇಕಾಗುತ್ತದೆ. ಬೇರೆಯವರ ಮಕ್ಕಳನ್ನು ನೋಡಿ ಮೆಚ್ಚಿಕೊಳ್ಳಬೇಕು, ಯೌವ್ವನದ ದಿನಗಳಲ್ಲಿ ನೋಡಿದ ಅವಿವಾಹಿತರನ್ನು ನೆನಪು ಮಾಡಿಕೊಳ್ಳುತ್ತ ಅವರು ಹೇಳುವಂತೆ "ನನಗೆ ಮಕ್ಕಳಿಲ್ಲ" ಎಂದು ಹೇಳುವ ಅಧಿಕಾರವೂ ಇರುವುದಿಲ್ಲ.
          ಇದು ಹೀಗೇ ಇರುತ್ತದೆ. ವಾಸ್ತವತೆಯಲ್ಲಿ ನಾವಿರುತ್ತೇವೆ ಅಷ್ಟೇ. ಇಂದಿಗೂ, ಎಂದಿಗೂ. ನಮ್ಮ ಸ್ಥೂಲ ದೇಹವನ್ನೂ, ದೇಹದ ಮೇಲೆ ಒಂದು ತಲೆಯನ್ನೂ, ತಲೆಯಲ್ಲಿ ಕೆರೆದುಕೊಳ್ಳಲು ಒಂದು ಹಣೆಯನ್ನೂ ಹೊತ್ತುಕೊಂಡು.

Friday 25 April 2014

ಒಂದಿಷ್ಟು ಕಾಫ್ಕಾ ಕಥೆಗಳು

          ಜರ್ಮನ್ ಕಥೆಗಾರನಾದ Franz Kafka ಎಂಬೀತ Existentialism ಎಂಬ ಸಿದ್ಧಾಂತವನ್ನು ತಳಹದಿಯಾಗಿಟ್ಟುಕೊಂಡು ತನ್ನ ಅಲ್ಪ ಜೀವಾವಧಿಯಲ್ಲೇ ಹಲವು ಅತ್ಯುತ್ತಮವಾದ ಕಥೆ, ಕಾದಂಬರಿಗಳನ್ನು ರಚಿಸಿ ಜಗತ್ಪ್ರಸಿದ್ಧನಾದ. ದೈನಂದಿನ ಆರ್ಡಿನರಿ ಬದುಕಿನಿಂದಾಚೆ ಹಾರಲು ತುಡಿಯುವ ಮನಸ್ಸಿನ ಕಲಸಿಹೋದ ಕನಸುಗಳ ರಾಶಿಯಂತೆ ಗೋಚರಿಸುವ ಈತನ ಕೃತಿಗಳು ಮೇಲ್ನೋಟಕ್ಕೆ ಹುಚ್ಚನೊಬ್ಬನ ಹಲಬರಿಕೆಯಂತೆ ಕಾಣುತ್ತವೆ. ಆದರೆ ಕೆದಕಿ ನೋಡಿದಾಗ ಮತ್ತೆ ಮತ್ತೆ ಯೋಚನೆಗೆ ಹಚ್ಚುವಂತಹ, ನಿಗೂಢ ಲೋಕವೊಂದರೊಳಕ್ಕೆ ಕರೆದೊಯ್ಯುವ ಭಾವನೆಗಳನ್ನು ಇವು ಉದ್ದೀಪಿಸುತ್ತವೆ.
         ಯಶವಂತ ಚಿತ್ತಾಲರನ್ನು ನಾನು ಒದಲಾರಂಭಿಸಿದ್ದು ಇತ್ತೀಚಿಗೆ. 'ಅಪರಿಚಿತರು' ಮೊದಲಾಗಿ ಚಿತ್ತಾಲರ ಹಲವು ಕಥೆಗಳಲ್ಲಿ ಕಾಫ್ಕಾನ ಛಾಯೆ ದಟ್ಟವಾಗಿ ಎದ್ದು ಕಾಣುತ್ತವೆ. ತನ್ನ ಕಥಾರಚನೆಯಲ್ಲಿ ಕಾಫ್ಕಾನ ಪ್ರಭಾವ ಇದೆ ಎಂದು ಒಂದು ಅವರೇ ಹೇಳಿಕೊಂಡಿದ್ದಾರೆ ಕೂಡ. ಇದನ್ನೋದಿದ ನಾನು ಕುತೂಹಲ ಕೆರಳಿ ಕಾಫ್ಕಾನನ್ನು ಓದುವ ಪ್ರಯತ್ನ ಮಾಡುತ್ತಿದ್ದೇನೆ. ಹಾಗೂ ಅವನ ಕೆಲ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸುವ ಸಾಹಸವನ್ನೂ ಮಾಡಿದ್ದೇನೆ. Read at your own risk...




ಮರಗಳು

          ನಾವು ಹಿಮದಲ್ಲಿ ಬಿದ್ದಿರುವ ಮರದ ದಿಮ್ಮಿಗಳಂತೆ. ಒಂದು ಚಿಕ್ಕ ದೂಡುವಿಕೆಯಿಂದ ಅವುಗಳನ್ನು ಉರುಳಿಸಿಬಿಡಬಲ್ಲೆವೆಂದು ತೋರುತ್ತದೆ. ಆದರೆ ಹಾಗೆ ಮಾಡಲಾರೆವು. ಯಾಕೆಂದರೆ ಅವು ಅಲ್ಲೇ ಬೇರು ಬಿಟ್ಟಿವೆ. ಆದರೆ ನೋಡಿ, ಅದೂ ಕೇವಲ ಒಂದು ತೋರಿಕೆಯಷ್ಟೆ.




ತಿರಸ್ಕಾರ

          ನಾನು ಸುಂದರ ಹುಡುಗಿ ಒಬ್ಬಳನ್ನು ಕಂಡು ಆಕೆಯ ಬಳಿ "ನನ್ನ ಜೊತೆಯಾಗುವೆಯ?" ಎಂದು ಕೇಳಿದಾಗ ಆಕೆ ಹೀಗೆಂದು ಉತ್ತರಿಸುತ್ತಾಳೆ:
          "ಶಾಂತ, ದಯಾಮಯಿ ಕಣ್ಣುಗಳನ್ನುಳ್ಳ, ಸುಂದರವಾದ ಮೈಯುಳ್ಳ ರಾಜನೇನು ನೀನಲ್ಲ. ಸಪ್ತಸಾಗರಗಳನ್ನು ನೀನು ನನಗೋಸ್ಕರ ದಾಟಿ ಬಂದಿಲ್ಲ. ಹೀಗಿರುವಾಗ ನನ್ನಂತಹ ಸುಂದರವಾದ ಹುಡುಗಿಯೊಬ್ಬಳು ನಿನ್ನನ್ನು ಯಾಕೆ ಒಪ್ಪಿಕೊಳ್ಳಬೇಕು?"
          "ಯಾವುದೇ ಒಂದು ಮಾರ್ಗವನ್ನಾಗಲೀ, ಒಂದೇ ಬಾರಿಯಲ್ಲಿ ಕ್ರಮಿಸುವುದು ಅಸಾಧ್ಯವೆಂಬುದು ನಿನಗೆ ತಿಳಿದಿಲ್ಲ. ನಿನ್ನನ್ನು ಹಿಂಬದಿಯಿಂದ ಬಳಸಿ ಹಿಡಿದು, ಕಿವಿಯಲ್ಲೇನೋ ಪಿಸುದನಿಯಲ್ಲಿ ಮಾತಾಡುತ್ತ ನಿನ್ನೊಡನೆ ಯಾವ ಗಂಡೂ ಬರುತ್ತಿಲ್ಲ. ನಿನ್ನ ಸ್ತನಗಳು ರವಿಕೆಯೊಳಗೆ ಸಂಯಮದಿಂದಿದ್ದರೂ ನಿನ್ನ ತೊಡೆ ಮತ್ತು ಸೊಂಟಗಳು ನಿನ್ನ ಮಾತನ್ನು ಕೇಳುತ್ತಿಲ್ಲ. ಕಾಲಕ್ಕೆ ತಕ್ಕುದಾದ ಉಡುಗೆಯನ್ನು ಧರಿಸದೆ ನೀನು ಆಪತ್ತನ್ನು ಆಹ್ವಾನಿಸಿಯೂ ನಗುತ್ತಲಿರುವೆ."
          "ಹೌದು, ನಾವಿಬ್ಬರೂ ಸರಿಯಾಗಿಯೇ ಇದ್ದೇವೆ. ಆದರೆ ಅದನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಸುತ್ತ ಕೂರುವ ಬದಲು ನಮ್ಮ ದಾರಿ ನಾವ್ಯಾಕೆ ಹಿಡಿಯಬಾರದು?"




ವ್ಯಾಪಾರಿ

          ಕೆಲವರಾದರೂ ನನಗೋಸ್ಕರ ದುಃಖಿಸಿರಬಹುದು, ಆದರೆ ನನ್ನ ಅರಿವಿಗದು ಬಂದಿಲ್ಲ. ನನ್ನ ಸಣ್ಣ ವ್ಯಾಪಾರವು ಈಗಾಗಲೇ ನೋವಿನಿಂದ ತಲೆ ಸಿಡಿದುಹೋಗುವಷ್ಟು ಆಲೋಚನೆಗಳನ್ನು ನನ್ನಲ್ಲಿ ತುಂಬಿದೆ. ಸುಖ ಮಾತ್ರ ಒಂದಿನಿತೂ ಇಲ್ಲ. ಯಾಕೆಂದರೆ ನನ್ನದು ಸಣ್ಣ ವ್ಯಾಪಾರ.
          ವ್ಯಾಪಾರಕ್ಕೆಂದು ಸರಕನ್ನು ಸಿದ್ಧಪಡಿಸುತ್ತ ನಾನು ತಾಸುಗಟ್ಟಲೆ ಕಳೆಯುತ್ತೇನೆ. ಕೆಲಸಗಾರರನ್ನು ಎಚ್ಚರಿಸುತ್ತ, ಮುಂದಿನ ವರ್ಷ ಜನ ಯಾವ ರೀತಿಯ ಉಡುಪು ಧರಿಸಬಹುದೆಂದು ಆಲೋಚಿಸುತ್ತ. ನನ್ನ ಪರಿಚಯದ ಜನರಲ್ಲ, ನಾಡಿನ ಯಾವುದೋ ಮೂಲೆಯ ರೈತಾಪಿ ಜನರು.
          ನನಗೆ ಪರಿಚಯವಿರದವರ ಬಳಿ ನನ್ನ ಹಣವಿರುತ್ತದೆ. ಅವರು ಯಾವ ಕೆಲಸ ಮಾಡುವರು, ಅವರ ಶಕುನಗಳು ಹೇಗಿವೆ ಎಂಬುದು ನನಗೆ ತಿಳಿದಿಲ್ಲ. ತಿಳಿದೀತಾದರೂ ಹೇಗೆ? ಅವರು ಭೂರಿ ಭೋಜನವನ್ನು ಸವಿಯುತ್ತಿರಬಹುದು. ಅಥವಾ ಖುಷಿಯಿಂದ ವಿದೇಶಕ್ಕೆ ಪ್ರಯಾಣಿಸುತ್ತಿರಬಹುದು.
          ದಿನದ ವ್ಯಾಪಾರವನ್ನು ಮುಗಿಸಿ ಅಂಗಡಿಯ ಕದ ಮುಚ್ಚುವಾಗ ಈ ವ್ಯಾಪಾರವು ನನ್ನೆದುರಿಗಿಡುವ ಎಂದಿಗೂ ಮುಗಿಯದ ಬೇಡಿಕೆಗಳ ಯಾದಿ ಕಣ್ಣೆದುರಿಗೆ ನಿಲ್ಲುತ್ತದೆ. ಹಾಗೂ ಬೆಳಿಗ್ಗೆ ನಾನೇ ಹೊಡೆದೋಡಿಸಿದ್ದ ಉತ್ಸಾಹ ಅಲೆಯಂತೆ ಹಿಂದಿರುಗಿ ನನ್ನನ್ನು ಗುರಿಯಿಲ್ಲದೆ ಕರೆದೊಯ್ಯುತ್ತದೆ.
          ಆದರೆ ಈ ಉದ್ವೇಗದಿಂದ ಯಾವುದೇ ಉಪಯೋಗವಿಲ್ಲ. ನನ್ನ ಕೊಳಕಾದ, ಬೆವರಾದ ಮುಖವನ್ನು ಹೊತ್ತು, ಕಲೆಯಾದ, ಧೂಳು ಕೂತ ಉಡುಪಿನಲ್ಲಿ, ಕೊಳಕು ಟೋಪಿಯನ್ನು ಧರಿಸಿ, ಹರಿದುಹೋದ ಚಪ್ಪಲಿಯನ್ನು ಮೆಟ್ಟಿ ನಾನು ಮನೆಯತ್ತ ನಡೆಯುತ್ತೇನೆ, ಅಲೆಯೊಂದರೊಡನೆ ತೇಲಿ ಹೋದಂತೆ ಆಚೀಚೆ ಕೈಯಾಡಿಸುತ್ತ. ದಾರಿಯಲ್ಲಿ ಚಿಕ್ಕ ಮಕ್ಕಳ್ಯಾರಾದರೂ ಸಿಕ್ಕರೆ ಅವರ ತಲೆ ನೇವರಿಸುತ್ತೇನೆ.
          ಆದರೆ ದಾರಿ ಚಿಕ್ಕದು. ಬಹುಬೇಗ ನನ್ನ ಮನೆಯಿರುವ ಕಟ್ಟಡ ತಲುಪಿಬಿಡುತ್ತೇನೆ. ಲಿಫ್ಟಿನ ಬಾಗಿಲು ಸರಿಸಿ ಒಳಗಡಿಯಿಡುತ್ತೇನೆ.
          ಧಿಡೀರನೆ ನಾನು ಒಬ್ಬಂಟಿಯೆಂಬ ಯೋಚನೆ ನನ್ನ ತಲೆಯಲ್ಲಿ ಸುಳಿಯುತ್ತದೆ. ಮೆಟ್ಟಿಲು ಹತ್ತಿ ಮೇಲಕ್ಕೇರುವ ಉಳಿದವರು ಏದುಸಿರು ಬಿಡುತ್ತ ಸಾವರಿಸಿಕೊಳ್ಳಲು ಯಾವುದಾದರೊಂದು ಮನೆಯ ಮುಂದೆ ನಿಂತು, ನೀರು ಕುಡಿದು, ಮಾತನಾಡಿ ಮುಂದುವರಿದು ಹಲವು ಗಾಜಿನ ಬಾಗಿಲುಗಳನ್ನು ದಾಟಿ ತಮ್ಮ ತಮ್ಮ ಮನೆಯೊಳ ಹೊಕ್ಕು ತಾವೂ ಒಬ್ಬಂಟಿಗಳೆಂಬ ಅರಿವಿಗೊಳಗಾಗುತ್ತಾರೆ.
           ಲಿಫ್ಟಿನೊಳಗೆ ನಾನೊಬ್ಬ ಮಾತ್ರ ಇದ್ದೇನೆ. ಮೆಲ್ಲಗೆ ಲಿಫ್ಟು ಚಲಿಸಲಾರಂಭಿಸಿದಂತೆ ಗಾಜಿನ ಕಿಟಕಿಯೊಳಗಿನಿಂದ ಹೊರಗೆ ದೃಷ್ಟಿ ಬೀರುತ್ತ ಹೇಳುತ್ತೇನೆ :
          "ಸಾಕು ಸುಮ್ಮನಿರು ಈಗ. ಆ ಮರದ ನೆರಳಿನಲ್ಲಿ, ಅಥವಾ ಕಿಟಕಿಯ ಪರದೆಯ ಹಿಂದೆ, ಅಥವಾ ಕೈದೋಟದಲ್ಲಿನ ಹೂಕುಂಡದಲ್ಲಿ ನೀನು ಮಾಡಬಯಸುವುದಾದರೋ ಏನು?"
          ಮನಸಿನೊಳಗೆ ನಾನು ಇದನ್ನು ಹೇಳಿಕೊಳ್ಳುತ್ತಿರುವಾಗಲೇ ಕಿಟಕಿಯ ಗಾಜಿನಾಚೆ ಕೆಳಸರಿದ ಮೆಟ್ಟಿಲಿನ ಸಾಲು ಹರಿವ ನೀರಿನಂತೆ ತೋರುತ್ತದೆ.
          "ಹಾರು ಹಾಗಾದರೆ, ನಾನು ಹಿಂದೆಂದೂ ನೋಡಿರದ ನಿನ್ನ ರೆಕ್ಕೆಗಳನ್ನು ಬಿಚ್ಚು. ಬಹುದೂರ ಎಲ್ಲಾದರೂ ಹಾರಿಹೋಗು, ಅದೇ ನಿನ್ನಿಚ್ಛೆಯಾದರೆ..."
          "ಅದೋ ನೋಡು. ಮೆರವಣಿಗೆ. ಮೂರು ದಿಕ್ಕುಗಳಿಂದ ಬರುತ್ತಿದ್ದಾರೆ ಜನ. ಹಾಗೇ ಒಂದು ಕಡೆ ಸಂಧಿಸಿದ ಈ ಮೆರವಣಿಗೆಗಳು ಸದ್ದಿಲ್ಲದೇ ಸರಿದು ಹೋಗಿವೆ. ಅದೋ! ಅಲ್ಲೊಬ್ಬಳು ಸುಂದರ ಹೆಣ್ಣಿದ್ದಾಳೆ. ಅವಳೆಡೆಗೆ ಕೈಬೀಸಿ ಒಮ್ಮೆ ನಗು."
"ಮರದ ಸೇತುವೆಯಲ್ಲಿ ಹೊಳೆಯನ್ನು ದಾಟು. ಈಜುತ್ತಿರುವ ಮಕ್ಕಳೆಡೆಗೊಮ್ಮೆ ನೋಡಿ ತಲೆದೂಗು. ಅದೇನದು... ದೂರದಲ್ಲಿ? ಸಾವಿರ ಯೋಧರನ್ನು ತುಂಬಿಕೊಂಡ ಯುದ್ಧನೌಕೆಯೇ?!"
          "ಮುಂದೆ ನಡೆಯುತ್ತಿರುವ ಕುಬ್ಜನನ್ನು ಹಿಂಬಾಲಿಸು. ಜನನಿಬಿಡ ಮೂಲೆಯೊಂದರಲ್ಲಿ ಅವನನ್ನು ದೋಚು. ಮತ್ತು ಶಕ್ತಿಹೀನನಾದ ಕುಬ್ಜನು ದುಃಖದಿಂದ ಹೋಗುತ್ತಿರುವುದನ್ನು ಜೇಬಿನಲ್ಲಿ ಕೈಹಾಕಿ ನಿಂತು ನೋಡು."
          "ಕುದುರೆಗಳ ಖುರಪುಟದ ಸದ್ದು ಕೇಳುತ್ತಿದೆ. ನಿನ್ನನ್ನು ಹುಡುಕಿಕೊಂಡು ಪೊಲೀಸರು ಬರುತ್ತಿರಬೇಕು. ಬರಲಿ. ನೀನು ಮರೆಯಲ್ಲಿ ನಿಂತಿದ್ದೀಯ. ಖಾಲಿ ಬೀದಿಗಳನ್ನು ನೋಡಿ ಖೇದಗೊಂಡ ಪೊಲೀಸರು ಈಗ ವಾಪಸ್ಸು ಹೋಗುತ್ತಿದ್ದಾರೆ."
          ಈಗ ನಾನು ಲಿಫ್ಟಿನಿಂದ ಹೊರಬಂದು ಮನೆಯ ಕರೆಗಂಟೆಯನ್ನು ಒತ್ತಬೇಕು. ಕೆಲಸದಾಕೆ ಬಾಗಿಲು ತೆರೆಯುತ್ತಾಳೆ.




ದಾರಿಹೋಕರು

          ನೀವು ಹೀಗೇ ಒಂದು ರಾತ್ರಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರ ಎಂದುಕೊಳ್ಳಿ. ಆಗ ನಿಮ್ಮೆದುರಿಗಿನ ಏರನ್ನು ಇಳಿದು ಯಾವನೋ ಒಬ್ಬ ನಿಮ್ಮ ಕಡೆಗೇ ಓಡೋಡಿ ಬರುತ್ತಿರುವುದು ಶುಭ್ರವಾಗಿ ಬೆಳಗಿದ ಚಂದ್ರನ ಬೆಳಕಿನಲ್ಲಿ ನಿಮಗೆ ಕಾಣುತ್ತದೆ. ಆಗ ನೀವು ಅವನನ್ನು ತಡೆದು ನಿಲ್ಲಿಸುವುದಿಲ್ಲ, ಬೇಕಾದರೆ ಅವನು ಎಷ್ಟೇ ದಯನೀಯ ಸ್ಥಿತಿಯಲ್ಲಿರಲಿ, ಬೇಕಾದರೆ ಇನ್ಯಾರೋ ಒಬ್ಬ ಅಟ್ಟಿಸಿಕೊಂಡು ಬರುತ್ತಿರುವುದರಿಂದ ಆತ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿರಲಿ. ಬದಲಾಗಿ ಅವನನ್ನು ಹಾಗೆಯೇ ಓಡಲು ಬಿಡುತ್ತೀರಿ.
          ಯಾಕೆಂದರೆ ಈಗ ರಾತ್ರಿಯ ಸಮಯ. ರಸ್ತೆ ಏರುಪೇರಾಗಿದೆ. ಮೇಲಾಗಿ ಅವರಿಬ್ಬರೂ ಕೇವಲ ತಮಾಷೆಗಾಗಿ ಹೀಗೆ ಓಡುತ್ತಿರಬಹುದು, ಅಥವಾ ಅವರಿಬ್ಬರೂ ಸೇರಿ ಮೂರನೆಯವನನ್ನು ಅಟ್ಟಿಸಿಕೊಂಡು ಹೋಗುತ್ತಿರಬಹುದು, ಅಥವಾ ಮುಂದೆ ಇರುವವನನ್ನು ಹಿಂದಿನವ ಕೊಲ್ಲಲೆಂದು ಹೊರಟಿರಬಹುದು, ನಾನ್ಯಾಕೆ ಮಧ್ಯ ಹೋಗಿ ಸಿಕ್ಕಿಬೀಳಲಿ? ಬಹುಶಃ ಅವರಿಬ್ಬರಿಗೂ ಯಾವ ಸಂಬಂಧವೂ ಇಲ್ಲದೆ, ತಮ್ಮ ಪಾಡಿಗೆ ತಾವು ಮನೆ ಸೇರಿ ಮಲಗಲೆಂದು ಓಡುತ್ತಿರಬಹುದು. ಅವರು ನಿಶಾಚರಿಗಳಿರಬಹುದು, ಅವರ ಬಳಿ ಆಯುಧವಿರಬಹುದು.
          ಅದೆಲ್ಲ ಇರಲಿ. ನಿಮಗೆ ಜಾಸ್ತಿ ಸುಸ್ತಾದಂತಿದೆಯಲ್ಲವೇ? ನೀವು ಇಂದು ಬಹಳ ಕುಡಿದಿರೋ ಏನೋ? ಅಬ್ಬ! ಅವರಿಬ್ಬರೂ ಈಗ ನಿಮ್ಮ ಕಣ್ಣಿಗೆ ಕಾಣದಷ್ಟು ದೂರವಾಗಿದ್ದಾರೆ. ಸಮಾಧಾನ ನಿಮಗೀಗ.




ಬಸ್ಸಿನೊಳಗೆ

          ನಾನು ಬಸ್ಸಿನ ಹಿಂಭಾಗದಲ್ಲಿ ನಿಂತಿದ್ದೇನೆ. ಕಾಲ್ಗಳನ್ನು ಎಲ್ಲಿಟ್ಟಿದ್ದೇನೆ ಎಂಬುದರ ಖಾತ್ರಿ ನನಗಿಲ್ಲ. ನಾನು ಯಾವ ದಿಕ್ಕಿನಲ್ಲಿ ಹೊರಟಿದ್ದೇನೆ ಎಂದೂ ನನಗೆ ಸೂಚಿಸುತ್ತಿಲ್ಲ. ಮೇಲಿನಿಂದ ಜೋತಾಡುತ್ತಿರುವ ಈ ಹಗ್ಗದ ಈ ಚೂರನ್ನು ಹಿಡಿದು ನಿಂತಿರುವ ನಾನು ಸುರಕ್ಷಿತನೆಂದು ನನಗನ್ನಿಸುತ್ತಿಲ್ಲ. ಬಸ್ಸಿಗೆ ದಾರಿ ಮಾಡಿಕೊಟ್ಟು ಆಚೀಚೆ ಸರಿಯುತ್ತಿರುವ ಜನರಿಗೋ, ಅಥವಾ ಕಿಟಕಿಯ ಗಾಜಿನಿನದಾಚೆ ಎವೆಯಿಕ್ಕದೆ ನೋಡುತ್ತಿರುವ ಜನರಿಗೋ ರಕ್ಷಣೆ ಕೊಡಬಲ್ಲೆನೆಂದೂ ನಾನು ಹೇಳಲಾರೆ. ಅವರು ನನ್ನಿಂದ ರಕ್ಷಣೆಯನ್ನು ಬಯಸಿಯೂ ಇಲ್ಲ, ಆ ವಿಷಯ ಬೇರೆ.
          ಬಸ್ಸು ಮುಂದಿನ ನಿಲ್ದಾಣ ತಲುಪುತ್ತಲೇ ಹುಡುಗಿಯೋರ್ವಳು ಇಳಿಯಲು ತಯಾರಾಗಿ ಬಾಗಿಲ ಬಳಿ ಬರುತ್ತಿದ್ದಾಳೆ. ಅವಳನ್ನು ನೋಡುತ್ತಲೇ 'ಮೊದಲೆಲ್ಲೋ ಈಕೆಯನ್ನು ನೋಡಿದ್ದೇನೆ, ಈಕೆಯ ಮೈದಡವಿದ್ದೇನೆ' ಎಂಬ ಆಲೋಚನೆ ನನ್ನ ತಲೆಯಲ್ಲಿ ಸುಳಿಯುತ್ತಿದೆ. ಅವಳು ಕಪ್ಪು ಬಣ್ಣದ ದಿರಿಸಿನಲ್ಲಿದ್ದಾಳೆ. ಅವಳ ಲಂಗದ ನೆರಿಗೆಗಳು ಅಲ್ಲಾಡುತ್ತಿಲ್ಲ, ಬಿಳಿ ಕಾಲರಿನ ಆಕೆಯ ರವಿಕೆ ಬಿಗಿಯಾಗಿದೆ. ಎಡಗೈಯಲ್ಲಿ ಬಸ್ಸಿನ ಬಾಗಿಲನ್ನು ಹಿಡಿದು, ಬಲಗೈಯಲ್ಲಿನ ಛತ್ರಿಯನ್ನು ಮೆಟ್ಟಿಲಿನ ಮೇಲೆ ಊರಿದ್ದಾಳೆ. ಕಂದು ಬಣ್ಣದ ಮುಖದ ಅವಳ ಮೂಗು ಬದಿಯಲ್ಲಿ ಸೆಟೆದುಕೊಂಡು ತುದಿಯಲ್ಲಿ ಅಗಲವಾಗಿಯೂ, ಗೋಳವಾಗಿಯೂ ಇದೆ. ಅವಳ ಕೂದಲು ಕೂಡ ಕಂದು ಬಣ್ಣದ್ದೇ, ಹಣೆಯ ಬದಿಯಲ್ಲಿ ಮುಂಗುರುಳು ಹಾರಿದೆ. ಅವಳ ಕಿವಿಗಳು ಚಿಕ್ಕವೇ ಆದರೂ ನಾನೀಗ ಆಕೆಗೆ ಬಹಳ ಸಮೀಪದಲ್ಲಿ ನಿಂತಿರುವುದರಿಂದ ಕಿವಿಯ ಸುರುಳಿಯೂ, ಬುಡದಲ್ಲಿನ ನೆರಳೂ ಕಾಣಿಸುತ್ತಿದೆ.
          ಆಗ ನನ್ನನು ನಾನು ಕೇಳಿಕೊಳ್ಳುತ್ತೇನೆ : ಅವಳ್ಯಾಕೆ ಇನ್ನೂ ಸುಮ್ಮನೆ ನಿಂತಿದ್ದಾಳೆ? ಅವಳಿಗ್ಯಾಕೆ ತನ್ನ ಕುರಿತು ಆಶ್ಚರ್ಯವಾಗುತ್ತಿಲ್ಲ?

Friday 18 October 2013

ಕಥೆಯೊಂದು ಮೊಳೆತು....



ಕಾಯಿ
"ಇಲ್ಲಿ ಅಶ್ಲೀಲ ಶಬ್ದಗಳನ್ನು ಬರೆಯಬಾರದು" ಬಸ್ ನಿಲ್ದಾಣದ ಹೆಸರು ಮಳೆ, ಬಿಸಿಲು, ಗಾಳಿಗೆ ಸಿಕ್ಕಿ ಎಂದೋ ಅಳಿಸಿಹೋಗಿ ಒಳಗೋಡೆಯ ಮೇಲೆ ದೊಡ್ಡದಾಗಿ ಕಪ್ಪಕ್ಷರಗಳಲ್ಲಿ ಬರೆದ ಈ ವಾಕ್ಯವಷ್ಟೆ ತೋರುತ್ತಿತ್ತು. ಅದಕ್ಕೆ ಪ್ರತ್ಯುತ್ತರವೆಂಬಂತೆ ಹಲವು ಉದಯೋನ್ಮುಖ ಪ್ರೇಮಿಗಳು ಬಣ್ಣದ ಕಲ್ಲಿನಿಂದ ಬರೆದ ವಾಕ್ಯಗಳೂ ಗೋಡೆಯನ್ನು ಅಲಂಕರಿಸಿದ್ದವು. ಆದರೆ ಈ ದಾರಿಯಲ್ಲಿ ತಿರುಗಾಡುವ ಎಲ್ಲರಿಗೂ ಅದು ಚಾಂದ್ರಾಣಿ ನಿಲ್ದಾಣವೆಂಬುದು ತಿಳಿದಿದೆ. ಚಂದಾವರ ಟೆಂಪೋದ ಕೊನೆಯ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ತನ್ನನ್ನು ತಾನು ತುರುಕಿಕೊಂಡು ಕುಳಿತಿದ್ದ ಕುಟ್ಣಪ್ಪ ನಾಯ್ಕ ಟೆಂಪೋ ಅಲ್ಲಿ ನಿಲ್ಲುತ್ತಲೆ ಆ ಗೋಡೆಯನ್ನೊಮ್ಮೆ ಪರಿಶೀಲಿಸಿದ. ದಿನವೂ ಇದೇ ದಾರಿಯಲ್ಲಿ ಕಾಲೇಜಿಗೆ ಹೋಗುವ ಹಾಗೂ ಚಾಂದ್ರಾಣಿಯಲ್ಲಿ ಬಹಳಷ್ಟು ಸ್ನೇಹಿತರನ್ನಿಟ್ಟುಕೊಂಡಿರುವ ತನ್ನ ಮಗ ಮಹೇಶನೂ ಈ ಗೋಡೆಯ ಮೇಲೆ ತನ್ನ ಪ್ರತಿಭೆಯನ್ನು ತೋರಿದ್ದಾನೋ ಎಂಬುದು ಆತನ ಅನುಮಾನವಾಗಿತ್ತು. ಅಂಥದ್ದೇನೂ ಕಣ್ಣಿಗೆ ಬೀಳದೆ "ಛೆ, ನನ್ನ ಮಗ ಇಂತ ಕೆಲಸವನ್ನೆಲ್ಲ ಮಾಡುವವನಲ್ಲ. ನನಗ್ಯಾಕೆ ಹೀಗೆಲ್ಲ ಅನ್ನಿಸುತ್ತದೆ?" ಎಂದು ತನಗೆ ತಾನೆ ಸಮಾಧಾನ ಹೇಳಿಕೊಂಡ. ಟೆಂಪೋ ಮುಂದಕ್ಕೋಡಿತು. ಸ್ವಲ್ಪವೇ ಮುಂದಕ್ಕೆ ಶಿಲೆಯನ್ನು ಕುಟ್ಟಿ ಪುಡಿಮಾಡುವ ಜಲ್ಲಿ ಮಷೀನೊಂದು ಎದುರಾಗುತ್ತದೆ. ಅದು ತನ್ನ ಅವಾಜು ನಿಲ್ಲಿಸಿ ಹಾಳುಬಿದ್ದು ಎಷ್ಟೋ ಕಾಲವಾಯಿತು. ಆದರೆ ಕುಟ್ಣಪ್ಪನಿಗೆ ಅದೇಕೋ ಪ್ರತೀ ಬಾರಿ ಆ ಜಾಗದಿಂದ ಹಾಯ್ದಾಗಲೂ "ಈ ಮಿಶನ್ನು ಕೆಲಸ ಮಾಡಬೇಕಾಗಿತ್ತು, ಫ್ಯಾಕ್ಟರಿ ನಡೆಯಬೇಕಾಗಿತ್ತು" ಅನಿಸುತ್ತದೆ. ಇಂದೂ ಕೂಡ ಹಾಗೇ ಅಂದುಕೊಂಡ.
            ಭಾಸ್ಕೇರಿ ಹೊಳೆಯ ಬದಿಯಲ್ಲಿರುವ ದೊಡ್ಡಹಿತ್ತಲಿನವ ಈ ಕುಟ್ಣಪ್ಪ ನಾಯ್ಕ. ತೆಂಗಿನಕಾಯಿ, ಅಡಿಕೆಗೊನೆ, ಮುಂತಾದವುಗಳನ್ನು ಕೊಯ್ಯುವ ಮರಕಸುಬು ಹುಟ್ಟಿನಿಂದ ಬಂದಿಲ್ಲವಾಗಿತ್ತಾದರೂ ನೋಡುವವರಿಗೆ ಇವನೇನು ಮರದ ಮೇಲೇ ಹುಟ್ಟಿದ್ದನೋ ಅನಿಸುವಷ್ಟು ಸಲೀಸು. ಹಗಲಿನಲ್ಲಿ ಒಡೆಯರು ಕರೆದು ಕೊಯ್ಲಿನ ಕೆಲಸಕ್ಕೆ ಹೋದರೆ ರಾತ್ರಿ ಕರೆಯದಿದ್ದರೂ ಕೆಲಸಕ್ಕೆ ಹೋಗುತ್ತಾನೆ. ಆದರೆ ರಾತ್ರಿ ಹೋಗುವುದು ಅಪರೂಪಕ್ಕೊಮ್ಮೆ ಅಷ್ಟೆ. ಕಳ್ಳತನವನ್ನಾದರೂ ಒಂದು ಆತ್ಮಸಾಕ್ಷಿಯೊಂದಿಗೆ ಮಾಡಬೇಕೆಂಬುದು ತನ್ನ ಅರಿವಿಗೆ ಬಾರದೆ ಅವನು ಪಾಲಿಸಿಕೊಂದು ಬಂದ ಸಿದ್ಧಾಂತ. ಸಿಕ್ಕಿಬೀಳುತ್ತೇನೆಂಬ ಭಯವೂ ಸ್ವಲ್ಪ ಇತ್ತೆನ್ನಿ. ಇಬ್ಬರು ಗಂಡುಮಕ್ಕಳು. ಹಿರಿಯವನಾದ ಮಹೇಶ ಹೊನ್ನಾವರದ ಐಟಿಐ ಕಾಲೇಜಿಗೆ ಮೂರು ವರ್ಷ ಹೋಗಿಬಂದುಮುಗಿಸಿ ಮನೆಯಲ್ಲಿ ಕೂತಿದ್ದಾನೆ. ಕಿರಿಯ ದಿನೇಶ ಸಂತೆಗುಳಿ ಶಾಲೆಯಲ್ಲಿ ಐದನೇ ತರಗತಿ.
            ಮಗ ಮಹೇಶನಿಗೆ ಕೇವಲ ತನ್ನ ಮಾರ್ಕ್ಸ್ ಕಾರ್ಡು ತೋರಿಸುವುದರಿಂದ ಕೆಲಸ ಸಿಗುವುದಿಲ್ಲ ಎಂಬುದು ಅರಿವಾಗಿತ್ತು. ಸಾಕಷ್ಟು ತಿರುಗಾಡಿ ಚಪ್ಪಲಿ ಸವೆಸಿದ ನಂತರ ಒಂದು ದಿನ ಮೂವತ್ತು ಸಾವಿರ ರೂಪಾಯಿ ಕೊಟ್ಟಲ್ಲಿ ಕೆಲಸ ಗ್ಯಾರಂಟಿ ಎಂದು ಕಾರವಾರದ ಯಾವುದೋ ಏಜನ್ಸಿಯವರು ಹೇಳಿದ್ದರು. ಮಾಡಲು ಕೆಲಸವಿಲ್ಲದೆ ಮನೆಯಲ್ಲಿ ಪುಕ್ಸಟ್ಟೆ ತಿನ್ನುತ್ತಾ ಕೂತ ಮಗನನ್ನು ನೋಡಿ ನೋಡಿ ಸಿಟ್ಟೋ, ಕನಿಕರವೋ, ಏನೋ ಒಂದು ಬಂದು ಸೀದ ಹೊನ್ನಾವರಕ್ಕೆ ಹೋಗಿ ಶೆಟ್ಟರ ಗಿರವಿ ಅಂಗಡಿಯಲ್ಲಿ ತನ್ನ ಹೇಂಡತಿಯ ಆಪರ್ಧನವಾದ ಕೆಲವೇ ಕೆಲವು ಒಡವೆಗಳನ್ನು ಒತ್ತೆಯಿಟ್ಟು ದುಡ್ಡು ತೆಗೆದುಕೊಂಡ ಕುಟ್ಣಪ್ಪ ಈ ಟೆಂಪೊವನ್ನು ಹತ್ತಿದ್ದ. ಆದರೆ ಸುಡುಗಾಡು ಸರ, ಬಳೆ ಜೋಡಿಗೆ ಸಿಕ್ಕಿದ್ದೆಷ್ಟು? ಬರೀ ಇಪ್ಪತ್ತು ಸಾವಿರ.  ಇನ್ನೂ ಹತ್ತು ಸಾವಿರ ಒಟ್ಟುಮಾಡಬೇಕಿತ್ತು. ಪಕ್ಕದ ಮನೆಯ ರಾಮನಾಯ್ಕನನ್ನು ಕೇಳುವುದು. ಹೇಗಾದರೂ ಅವನ ಮಗ ಗೋವಾದಲ್ಲಿ ಯಾವುದೋ ಕೆಲಸ ಮಾಡುತ್ತಿದ್ದಾನೆ. ಅದಕ್ಕೂ ಮೊದಲು ದಾರಿಯಲ್ಲೇ ಸಿಗುವ ಒಡೆಯ ಶಂಕರ ಹೆಗಡೇರ ಬಳಿಯೊಮ್ಮೆ ಕೇಳಿಬಿಡೋಣ ಎಂದುಕೊಂಡಿದ್ದ.
            ಮಳೆನೀರಿಗೆ ಜಂಗು ಹಿಡಿಯಬಾರದೆಂದು ಕೆಂಪು, ನೀಲಿ ಆಯಿಲ್ ಪೇಂಟು ಬಳಿಸಿಕೊಂಡು ನಿಂತಿದ್ದ ಕಬ್ಬಿಣದ ಗೇಟನ್ನು ಕುಟ್ಣಪ್ಪ ತಳ್ಳುತ್ತಿದ್ದಂತೆ ಹೆಗಡೇರ ಮನೆ ನಾಯಿ ದೊಡ್ಡ ಸ್ವರದಲ್ಲಿ ಬೊಗಳಲಾರಂಭಿಸಿತು. ಮನೆಮುಂದಿನ ತೋಟಕ್ಕೆ ಕವಳದ ಎಲೆ ಕೊಯ್ಯಲೆಂದು ಬಂದಿದ್ದ ಶಂಕರ ಹೆಗಡೆ ಗೇಟಿನತ್ತ ದೃಷ್ಟಿ ಹಾಯಿಸಿ "ಅರೆ! ಕುಟ್ಣಪ್ಪ. ಏನು ಇತ್ಲಾಗೆ ಬಂದಿದ್ದು? ಕಾಯಿ ಕೊಯ್ಯ್ಲಿಕ್ಕೇನು ಹೇಳಿಕಳಿಸಿದಹಾಗೆ ಇಲ್ಲವಲ್ಲ?" ಕೇಳಿದರು. "ಇಲ್ರ ವಡೆಯ. ಬೇರೆ ಕೆಲಸ ಇತ್ತು, ಅದ್ಕೆ ಬಂದೆ" ಗೇಟಿನ ಚಿಲಕವನ್ನೆಳೆಯುತ್ತ ಹೇಳಿದ ಕುಟ್ಣಪ್ಪ. "ಓಹೋ, ಬಾ ಬಾ. ಸಮಾ ಟೈಮಿಗೆ ಬಂದಿದ್ದೀಯ. ನಿನಗೂ ಒಂದು ಚಾ ಮಾಡಿಸಿಬಿಡುವ" ಎಂದು "ಇವಳೇ, ಕುಟ್ಣಪ್ಪ ಬಂದಿದ್ದಾನೆ. ಅವನಿಗೂ ಒಂದು ಚಾ." ಹೆಂಡತಿಯನ್ನು ಕೂಗಿ ಹೇಳಿದರು ಹೆಗಡೇರು. ಅದು ಇದು ಊರಮೇಲಿನ ಸುದ್ದಿಯೊಂದಿಗೆ ಚಹಾಸೇವನೆಯಾಗಿ ಇಬ್ಬರ ಬಾಯಲ್ಲೂ ಒಂದೊಂದು ಕವಳ ಬಿದ್ದಾದನಂತರ ವಿಷಯಕ್ಕೆ ಬಂದ ಕುಟ್ನಪ್ಪ "ಸ್ವಲ್ಪ ದುಡ್ಡು ಬೇಕಾಗಿತ್ತಲ್ರ ವಡೆಯ" ಎಂದ. ಹೆಗಡೇರು ಕೇಳಿದರು, "ಸ್ವಲ್ಪ ಅಂದರೆ ಎಷ್ಟು? ನಿನಗೆ ಕೊಡಲಿಕ್ಕಾಗುವುದಿಲ್ಲ ಹೇಳಲಿಕ್ಕಾಗುವುದಿಲ್ಲ". "ಸ್ವಲ್ಪ ಎಂದರೆ ಸ್ವಲ್ಪ ಹೆಚ್ಚೇ ಬೇಕು. ಒಂದು ಹತ್ತು ಸಾವಿರ" ಸುತ್ತಿ ಬಳಸದೆ ನೇರವಾಗಿ ಹೇಳಿಬಿಟ್ಟ ಕುಟ್ಣಪ್ಪ. "ಥೋ! ಅಷ್ಟೆಲ್ಲ ಎಲಿಂದ ತರೂದೋ ಈಗ? ಕಷ್ಟಕ್ಕೆ ಬಂತಲ್ಲ" ಕಪಾಟಿನೊಳಗೆ ಇದ್ದರೂ ಅಷ್ಟೊಂದು ಹಣವನ್ನು ಕೆಲಸದವನೊಬ್ಬನಿಗೆ ಕೊಡಲು ಒಮ್ಮೆ ಹಿಂದೇಟು ಹಾಕಿದರು. ಆದರೆ ಅವರಿಗೆ ಕುಟ್ಣಪ್ಪ ಹಿಡಿದ ಪಟ್ಟನ್ನು ಅಷ್ಟು ಸುಲಭವಾಗಿ ಬಿಡುವ ಆಸಾಮಿಯಲ್ಲವೆಂಬುದು ಗೊತ್ತಿತ್ತು. ಹಾಗೇ ಕುಟ್ಣಪ್ಪನೊಬ್ಬನೇ ತಮಗೆ ಬೇಕಾದ ಸಮಯದಲ್ಲಿ ಇಲ್ಲವೆನ್ನದೆ ಕೆಲಸಕ್ಕೆ ಬಂದವನು ಎಂಬ ಅರಿವೂ ಇತ್ತು. ಕೆಲಹೊತ್ತು ಆಲೋಚಿಸಿದವರಂತೆ ನಟಿಸಿ "ತಿಂಗಳೊಳಗೆ ವಾಪಸ್ ಮಾಡಬೇಕು ಹಾಂ?" ಎನ್ನುತ್ತ ಕೋಣೆಯ ಒಳಹೊಕ್ಕರು.
            ದುಡ್ಡಿನ ವ್ಯವಸ್ಥೆಯಾಗಿಬಿಟ್ಟಿತು. ಇನ್ನು ಮಗನನ್ನು ಕಾರವಾರಕ್ಕೆ ಕಳಿಸುವುದೊಂದೇ ಬಾಕಿ. ಮಗ ಅನ್ನುವವನು ಹೆತ್ತವರನ್ನು ಸಾಕಲು ಯೋಗ್ಯನೋ ಎಂಬುದು ತಿಳಿದುಬಿಡುತ್ತದೆ ಎಂದೆಲ್ಲ ಯೋಚಿಸುತ್ತ ಕುಟ್ಣಪ್ಪ ರಸ್ತೆಯಲ್ಲಿ ನಡೆದುಬರುತ್ತಿದ್ದಾಗಲೇ ಉಮೇಶ ಭಟ್ಟರು ಎದುರಾದರು. ಅವನನ್ನು ಕಂಡದ್ದೇ ಅಂದರು, "ನಾಳೆ ಒಂದೇ ದಿನ ಬಂದು ನಮ್ಮನೆ ಕಾಯಿ ಕೊಯ್ಲು ಮುಗಿಸಿಕೊಟ್ಟು ಹೋಗು ಮಾರಾಯಾ". ಕುಟ್ಣಪ್ಪನಿಗೆ ಗೊತ್ತಿದೆ, ಭಟ್ಟರು ಪೂರ್ತಿ ಕೂಲಿ ದುಡ್ಡನ್ನು ಯಾವತ್ತೂ ಕೊಟ್ಟವರಲ್ಲ. ಏನೋ ಒಂದು ಕಾರಣ ಹೇಳಿ ಸಾಗಹಾಕಿಬಿಡುತ್ತಾರೆ. ದಿನಕಳೆದಂತೆ ಅದು ತನಗೂ ಮರೆತುಹೋಗುತ್ತದೆ. ಆದರೂ ಹೋಗದೆ ಬೇರೆ ಉಪಾಯವಿಲ್ಲ. ಏಕೆಂದರೆ ನಾಳೆ ಬೇರೆ ಎಲ್ಲೂ ಕರೆಯವಿಲ್ಲ. "ಆಯ್ತು ಭಟ್ಟರೆ, ಕೊಯ್ದುಕೊಡುವ. ನಾಳೆ ಒಂದೇ ದಿನ." ಎನ್ನುತ್ತ ಹೆಗಡೇರ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಕವಳವನ್ನು ಬಾಯಲ್ಲಿಟ್ಟ.
            ಎಂದೂ ಇಷ್ಟವಾಗದ ತನ್ನ ಹೆಂಡತಿಯ ಅಡಿಗೆ ಅದೇಕೋ ಕುಟ್ಣಪ್ಪನಿಗೆ ಇಂದು ಇಷ್ಟವಾಯಿತು. ಅದೂ ರಾತ್ರಿ ಊಟಕ್ಕೆಂದು ಬೇರೆ ಮಾಡಿದ್ದಲ್ಲ, ಮಧ್ಯಾಹ್ನದ ತಂಗಳೇ. ಎರಡು, ಮೂರನೇ ಸಲ ಅನ್ನ ಹಾಕಿಸಿಕೊಂಡು ಉಣ್ಣುತ್ತಿರುವ ತನ್ನ ಗಂಡನನ್ನು ನೋಡಿ ಸಾವಿತ್ರಿಗೆ ಕಾರಣ ತಿಳಿಯದಿದ್ದರೂ, ಯಾಕೆಂದು ಕೇಳುವ ಧೈರ್ಯ ಬಾರದೆ ಇದ್ದರೂ ಖುಷಿಯಾಯಿತು. ಎಲ್ಲೋ ಊರ ಮೇಲೆ ತಿರುಗಲು ಹೋಗಿದ್ದ ಮಹೇಶ ಎಷ್ಟೋ ರಾತ್ರಿ ಬಂದಾಗಲೂ ಅಪ್ಪ, ಹೋಗಲಿ ಅಮ್ಮನೂ ಎನೋ ಹೇಳದೆ ಇದ್ದುದನ್ನು ಕಂಡು ಆಶ್ಚರ್ಯಗೊಂಡ. ನಿಶ್ಶಬ್ದವಾಗಿ ಊಟ ಮುಗಿಸಿ ತಾಟು ತೊಳೆದಿಟ್ಟು ಹಸೆ ಬಿಚ್ಚಲು ತಯಾರಾಗುತ್ತಿದ್ದಾಗಲೇ ಪಕ್ಕದಲ್ಲಿಯೇ ಮಲಗಿದ್ದ ಕುಟ್ಣಪ್ಪ ಕಣ್ಣು ಮುಚ್ಚಿಯೇ "ದುಡ್ಡಿನ ವ್ಯವಸ್ಥೆ ಆಗಿದೆ. ನಾಳೆಗೇ ಹೊರಡುವ ತಯಾರಿ ಮಾಡಿಕೊ" ಅಂದ. ತಾನು ಹೋಗುವುದು ಇನ್ನೂ ತನಗೇ ಖಾತ್ರಿಯಾಗಿರದೆ ಇದ್ದ ಮಹೇಶ ಅಪ್ಪನ ಮಾತನ್ನು ಕೇಳಿ ಗಹನವಾದ ಆಲೋಚನೆಯಲ್ಲಿ ಬಿದ್ದ. ಹಾಗೆ ಯೋಚಿಸುತ್ತಲೇ ನಿದ್ದೆ ಹೋಗಿಯೂಬಿಟ್ಟ.  
            ಕುಟ್ಣಪ್ಪ ಅಂದುಕೊಂಡಂತೆಯೇ ಆಯಿತು. ಮರಕ್ಕೆ ಹದಿಮೂರರಂತೆ ಒಟ್ಟೂ ಇಪ್ಪತ್ತು ಮರಗಳಿಗೆ ಇನ್ನೂರ ಅರವತ್ತು ರೂಪಾಯಿ ಕೊಡಬೇಕಾಗಿದ್ದ ಉಮೇಶ ಭಟ್ಟರು ಕೊನೆಯಲ್ಲಿ ಅವನ ಕೈಗಿತ್ತದ್ದು ಇನ್ನೂರು ಅಷ್ಟೇ. ದುಡ್ಡೆಲ್ಲ ಬ್ಯಾಂಕಿನಲ್ಲಿದೆ, ಮುಂದಿನ ಬಾರಿ ಹೋದಾಗ ತಂದಿಡುತ್ತೇನೆ. ಒಂದೆರಡು ವಾರ ಬಿಟ್ಟು ಬಾ. ಇನ್ನೊಂದು ಸಣ್ಣ ಕೊಯಿಲಿದೆ, ಅದನ್ನೂ ಮುಗಿಸಿಕೊಟ್ಟುಬಿಡು. ಎಲ್ಲ ಸೇರಿಸಿ ಕೊಡುತ್ತೇನೆ ಎಂಬ ಅಶ್ವಾಸನೆಯೊಂದಿಗೆ ಕೈತೊಳೆದುಕೊಂಡುಬಿಟ್ಟರು. ಹೀಗೆ ಆಗುತ್ತದೆಂಬ ಅರಿವು ಮೊದಲೇ ಇದ್ದ ಕುಟ್ಣಪ್ಪ ಪಾಲಿಗೆ ಸಿಕ್ಕಿದ್ದು ಪಂಚಾಮೃತವೆಂದುಕೊಳ್ಳುತ್ತ ಎಳನೀರಿನ ಬೊಂಡವೊಂದನ್ನು ಹಿಡಿದು ಮನೆಯತ್ತ ನಡೆದ. ಅವನು ನಿರ್ಧರಿಸಿಬಿಟ್ಟಿದ್ದ, ಈ ಭಟ್ಟರ ಕಪಟಕ್ಕೆ ಪ್ರತಿಯಾಗಿ ಆ ಬಾರಿ ಏನಾದರೂ ಮಾಡಲೇಬೇಕೆಂದು. ಮತ್ತೇನಿಲ್ಲ, ಇವತ್ತು ರಾತ್ರಿ ಅವರದೇ ಮತ್ತೊಂದು ತೋಟಕ್ಕೆ ಹೋಗಿ ಬೆಳೆದ ತೆಂಗಿನಕಾಯಿ, ಅಡಿಕೆಗೊನೆಗಳನ್ನೆಲ್ಲ ಇಳಿಸಿಕೊಂಡು ಬಂದುಬಿಡುವುದು. ಭಟ್ಟರಿಗೆ ಗೊತ್ತಾಗಲಿಕ್ಕಂತೂ ಶಕ್ಯವಿಲ್ಲ. ಬಾಯಿ ಬಾಯಿ ಬಡಿದುಕೊಳ್ಳಲಿ.
            ರಾತ್ರಿ ಊಟ ಮುಗಿಸಿ ಒಂದೆರಡು ತಾಸು ಮಲಗಿದನಷ್ಟೆ. ಹನ್ನೆರಡು ಗಂಟೆಯಾಗುತ್ತಲೇ ಥಟ್ಟನೆ ಎದ್ದವನೇ ಅಂಡುಕೊಕ್ಕೆಗೆ ಕತ್ತಿಯನ್ನು ಸಿಗಿಸಿಕೊಂಡು ಚೂಳಿಯೊಂದನ್ನು ಕೈಯಲ್ಲಿ ಹಿಡಿದು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟೇಬಿಟ್ಟ.
            ಸರಿಯಾಗಿ ಒಂದು ನಾಲ್ಕು ಮರ ಹತ್ತಿ ಇಳಿದಿದ್ದನೋ ಇಲ್ಲವೋ, ಭಟ್ಟರ ತೋಟದ ಪಕ್ಕದ ಹಾದಿಯಲ್ಲಿ ಯಾರೋ ಇಬ್ಬರು ಸೂಡಿ ಹಿಡಿದುಕೊಂಡು ಬರುತ್ತಿರುವುದು ಕಾಣಿಸಿತು. ಅವರು ಯಾರು, ಆ ದಾರಿಯಲ್ಲೇಕೆ ಬಂದರು, ಎಂಬುದನ್ನೆಲ್ಲ ಯೋಚಿಸುವ ಗೊಡವೆಗೆ ಹೋಗದೆ ಕ್ಷಣಾರ್ಧದದಲ್ಲಿ ಮರವೊಂದರ ಹಿಂದೆ ಸರಿದು ಕತ್ತಲಲ್ಲಿ ಕತ್ತಲಾದ. ಆದರೆ ದುರದೃಷ್ಟವಶಾತ್ ತಪ್ಪೊಂದು ಆಗಿಬಿಟ್ಟಿತ್ತು. ಚೂಳಿಯನ್ನು ಅಲ್ಲೇ, ಕೊಯ್ಯುತ್ತಿದ್ದ ಮರದಡಿಯಲ್ಲೇ ಬಿಟ್ಟುಬಿಟ್ಟಿದ್ದ. ದಾರಿಯಲ್ಲಿ ಬರುತ್ತಿದ್ದವರು ಮತ್ಯಾರೂ ಅಲ್ಲ, ಉಮೇಶ ಭಟ್ಟರೇ. ಬೇರೆ ಯಾವುದೋ ಊರಿಗೆ ಪರಾನ್ನಕ್ಕೆಂದು ಹೋದವರು ಬರಲು ತಡವಾಗಿ ಈ ಹೊತ್ತಿನಲ್ಲಿ ಮನೆಯ ದಾರಿ ಹಿಡಿದಿದ್ದರು. ಜೊತೆಯಲ್ಲಿ ಅವರನ್ನು ಕರೆದುಕೊಂಡು ಬರಲು ಹೋಗಿದ್ದ ಅವರ ಮಗನೂ ಇದ್ದ. ಚೂಳಿಯು ದಾರಿಯಲ್ಲಿ ಹೋಗುತ್ತಿರುವವರ ಕಣ್ಣಿಗೆ ಬೀಳದಿರಲಿ ಎಂದು ಇಷ್ಟದೈವ ಲಕ್ಷ್ಮೀನಾರಾಯಣನಲ್ಲಿ ಕುಟ್ಣಪ್ಪ ಮನಸಾರೆ ಮಾಡಿಕೊಂಡ ಪ್ರಾರ್ಥನೆ ಫಲ ಕೊಡಲೇ ಇಲ್ಲ. ತಮ್ಮ ತೋಟದಲ್ಲಿ ಈ ಅಪರಾತ್ರಿಯಲ್ಲಿ ಚೂಳಿಯನ್ನು ನೋಡಿದ ಉಮೇಶ ಭಟ್ಟರಿಗೆ ಇದು ಯಾರೋ ಕಳ್ಳತನ ಮಾಡಲು ಬಂದವರದೇ ಎಂದು ಗ್ರಹಿಸಲು ಬಹಳ ಹೊತ್ತು ಹಿಡಿಯಲಿಲ್ಲ. ಓಡಿಹೋಗಲು ದಾರಿಯೇ ಕಾಣದೆ ಕುಟ್ಣಪ್ಪ ಸಿಕ್ಕಿಯೂಬಿದ್ದುಬಿಟ್ಟ. ಬಾಯಿಗೆ ಬಂದಿದ್ದು, ಬಾರದೆ ಇದ್ದುದು, ಎಲ್ಲ ಬೈಗುಳಗಳ ಮಳೆಗರೆದ ಭಟ್ಟರು ತಮ್ಮ ಮಗನೆಡೆ ಒಮ್ಮೆ ನೋಡಿದರು. ಅಪ್ಪನ ಆವೇಶವನ್ನು ನೋಡಿ ಹುರುಪೇರಿದ ಗಣಪತಿ ಕುಟ್ನಪ್ಪನ ಮುಖ-ಮುಸುಡಿ ನೋಡದೆ ಸರಿಯಾಗಿ ನಾಲ್ಕು ಬಿಟ್ಟ. "ಮತ್ತೊಂದು ಬಾರಿ ನನ್ನ ತೋಟದ ಕಡೆ ಮುಖ ಮಾಡಿ ಮಲಗಿದರೂ ಕೊಟ್ಟು ಕೊಂದುಬಿಡುತ್ತೇನೆ ಹುಶಾರ್!" ಭುಸುಗುಡುತ್ತ ಕುಟ್ಣಪ್ಪ ಕೊಯ್ದಿಟ್ಟಿದ್ದ ಕಾಯಿಗಳನ್ನು ಚೂಳಿ ಸಮೇತ ತಮ್ಮ ಮಗನ ತಲೆಯ ಮೇಲೆ ಹೊರಿಸಿದರು ಭಟ್ಟರು.
"ಬೇಕಾಗಿತ್ತು, ನನಗೆ ಇದೆಲ್ಲ ಬೇಕಾಗಿತ್ತು. ಅಲ್ಲ ಈ ಭಟ್ಟರು ಹೀಗೆ ಎಂದು ಮೊದಲೇ ಗೊತ್ತಿದ್ದರೂ ಅವರ ಕಾಯಿ ಕೊಯ್ಯಲಿಕ್ಕೆ ಒಪ್ಪಿಕೊಂಡಿದ್ದಾದರೂ ಯಾಕೆ ನಾನು? ನಂತರ ಪಗಾರು ಪೂರ ಕೊಡಲಿಲ್ಲ ಅಂತ ಕದಿಯುವುದಕ್ಕೆ ಹೋಗಿದ್ದು ಸೊಕ್ಕು ತಲೆಗೇರಿಯೇ ಅಲ್ಲವಾ?" ಕುಟ್ಣಪ್ಪನಿಗೆ ತನ್ನನ್ನು ತಾನೂ ಎಷ್ಟು ಬಯ್ದುಕೊಂಡರೂ ಸಮಾಧಾನವೇ ಆಗುತ್ತಿಲ್ಲ. ಬಿಡುವವರಲ್ಲ ಭಟ್ಟರು. ನಾಳೆ ಬೆಳಗಾಗುತ್ತಲೇ ಇಡೀ ಊರಿಗೆ ಡಂಗೂರ ಸಾರುತ್ತಾರೆ. ಇನ್ನು ಯಾರ ಮನೆಯಲ್ಲೂ ತನ್ನನ್ನು ಕೆಲಸಕ್ಕೆ ಕರೆಯುವುದು ಸಂಶಯವೇ. ಒಂದು ವೇಳೆ ಕರೆದರೂ ತಾನು ಹೋಗುವುದಾದರೂ ಯಾವ ಮುಖವನ್ನು ಹೊತ್ತುಕೊಂಡು? ಹೀಗೆಲ್ಲ ಯೋಚಿಸುತ್ತ ಮಲಗಿದ ಕುಟ್ಣಪ್ಪನ ಬಳಿ ರಾತ್ರಿ ಕಳೆದು ಬೆಳಗಾದರೂ ನಿದ್ರೆ ಸುಳಿಯಲಿಲ್ಲ. ಬೆಳಿಗ್ಗೆ ಎದ್ದ ಸಾವಿತ್ರಿ ಸೊಪ್ಪಿಗೆ ಹೋಗಲೆಂದು ಚೂಳಿಯನ್ನು ಹುಡುಕಿ ಹುಡುಕಿ ಸಾಕಾಗಿ ಕುಟ್ಣಪ್ಪನನ್ನು ಕೇಳಲು ಅವನೂ ಸ್ವಲ್ಪ ಹುಡುಕಿದಂತೆ ನಾಟಕವಾಡಿ "ಥತ್, ಇತ್ತೀಚೆಗೆ ಏನೆಂದರೆ ಏನನ್ನಾದರೂ ಕದ್ದುಬಿಡುತ್ತಾರೆ. ಬಡ್ಡಿಮಕ್ಕಳು" ಎಂದು ಯಾರಿಗೋ ಬಯ್ಯುವ ನೆಪದಲ್ಲಿ ಮತ್ತೊಮ್ಮೆ ತನ್ನನ್ನು ತಾನೇ ಬಯ್ದುಕೊಂಡ. ಸೊಪ್ಪು ಕೊಯ್ಯುವ ಕೆಲಸಕ್ಕೆ ತನ್ನದಿವತ್ತು ರಜೆ ಎಂದು ಪಕ್ಕದ ಮನೆಯಾಕೆಯ ಹತ್ತಿರ ಹೇಳಿ ಕಳುಹಿಸಿದ ಸಾವಿತ್ರಿ ಬೆಳಗಿನ ತಿಂಡಿಗೆ ಅಣಿಮಾಡಿದಳು. ತಿಂಡಿ ಮುಗಿಯುತ್ತಲೇ ಲಗುಬಗೆಯಿಂದ ಮಗನ ಕೈಯಲ್ಲಿ ದುಡ್ಡನ್ನಿಟ್ಟು ಕಾರವಾರಕ್ಕೆಂದು ಕಳುಹಿಸಿದ ಕುಟ್ಣಪ್ಪ ನಿನ್ನೆ ರಾತ್ರಿಯ ಪ್ರಸಂಗವನ್ನು ಮಾತ್ರ ಯಾರಲ್ಲಿಯೂ ಹೇಳಲು ಹೋಗಲಿಲ್ಲ. ಉಮೇಶ ಭಟ್ಟರು ಯಾವ ರೀತಿ ಪ್ರಚಾರ ಮಾಡಿದ್ದರೆಂದರೆ ಮಧ್ಯಾಹ್ನದ ಹೊತ್ತಿಗೆ ರಾಮನಾಯ್ಕನೇ ಬಂದು ಆ ವಿಷಯದ ಬಗ್ಗೆ ಕುಹಕವಾಡುವಂತಾಗಿತ್ತು. ಅಷ್ಟಕ್ಕೂ ರಾಮನಾಯ್ಕನೇನು ಸಂಭಾವಿತನೆಂದಲ್ಲ. ಒಂದು ಕಾಲದಲ್ಲಿ ಕುಟ್ಣಪ್ಪನಿಗೆ ಸಾಥು ಕೊಟ್ಟವನೇ. ಆದರೆ ಸದ್ಯಕ್ಕೆ ಅದ್ಯಾವುದೂ ಗಣ್ಯವಾಗುವುದಿಲ್ಲ. ಸಿಕ್ಕಿಬಿದ್ದು ಪೆಟ್ಟುತಿಂದವನು ಕುಟ್ಣಪ್ಪ ಮಾತ್ರ.
            ಅಂದುಕೊಂಡಂತೆ ಕುಟ್ಣಪ್ಪನನ್ನು ಕೆಲಸಕ್ಕೆ ಕರೆಯುವುದನ್ನು ಕಮ್ಮಿ ಮಾಡಿದ್ದರು. ಶಂಕರ ಹೆಗಡೇರು ಕೂಡ ಒಂದೆರಡು ಬಾರಿ ದಾರಿಯಲ್ಲಿ ಸಿಕ್ಕವರು ದಾರಿಯಲ್ಲೇ ನಿಂತು ಮಾತಾಡಿ ಆಡಿದ ಮಾತಿನಲ್ಲಿಯೂ ತನಗೆ ವಾಪಸ್ ಬರಬೇಕಾಗಿದ್ದ ಹಣದ ಕುರಿತೇ ಒತ್ತಿ ಹೇಳಿದ್ದರು. ವಾರವೊಂದು ಕಳೆಯುವಷ್ಟರಲ್ಲಿ ಕುಟ್ನಪ್ಪನ ಕಾಲುಗಳು ತಾವೇ ತಾವಾಗಿ ಕೇರಿ ತುದಿಯ ಸಾರಾಯಿ ಅಂಗಡಿಯತ್ತ ನಡೆದವು. ಕುಡಿತವೇನೂ ಕುಟ್ನಪ್ಪನಿಗೆ ಹೊಸತಲ್ಲ. ಅಪರೂಪದ ಕಳ್ಳತನದಂತೆ ತಿಂಗಳಿಗೆ ಎರಡು-ಮೂರು ಬಾರಿ ಕುಡಿಯುತ್ತಿದ್ದ ಅಷ್ಟೆ. ಆದರೀಗ ಅದು ಅತಿಯಾಗಿ ಎರಡು-ಮೂರು ದಿನಕ್ಕೆ ಒಂದು ಬಾರಿ ಅನ್ನುವಂತಾಗಿತ್ತು. ಒಂದು ದಿನವಂತೂ ಮಗ ದಿನೇಶನಿಗೆ ಪಟ್ಟಿ-ಪುಸ್ತಕ ತರುತ್ತೇನೆ ಎಂದು ಹೆಂಡತಿಯ ಬಳಿ ತೆಗೆದುಕೊಂಡು ಹೋದ ದುಡ್ಡಲ್ಲಿ ಕುಡಿದು ಬಂದು ಮನೆಯಲ್ಲಿ ರಾಮಾಯಣ-ಮಹಾಭಾರತವೇ ನಡೆದಿತ್ತು. ಮರುದಿನ ಪಟ್ಟಿ ಇಲ್ಲದೆ ಶಾಲೆಗೆ ಹೋದ ದಿನೇಶ ಕಾಲ ಮೇಲೆ ಕೆಂಪಗೆ ಬರೆ ಬೀಳುವಂತೆ ಮಾಸ್ತರರ ಕೈಯಲ್ಲಿ ಹೊಡೆತ ತಿಂದು ಬಂದಿದ್ದ. ಅದನ್ನು ನೋಡಿ ಕುಟ್ನಪ್ಪನಿಗೆ ಅಯ್ಯೋ ಪಾಪ ಎನ್ನಿಸದೆ ಇರಲಿಲ್ಲ. ಆಗಿಂದಾಗ ಅವತ್ತಿನ ಕೂಲಿ ದುಡ್ಡಲ್ಲಿ ಪಟ್ಟಿ ತಂದಿಟ್ಟು ಮಗನ ಕಣ್ಣೊರೆಸಿದ್ದ. ಅರ್ಧ ಮುಚ್ಚಿದ ಬಾಗಿಲ ಹಿಂದೆ ಕೋಣೆಯ ಕತ್ತಲಲ್ಲಿ ನಿಂತಿದ ಸಾವಿತ್ರಿ ಇದನ್ನೆಲ್ಲ ನೋಡಿ ತಾನೂ ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು.
            ಇದ್ದಕ್ಕಿದ್ದಂತೆ ಅದೊಂದು ದಿನ ಮಹೇಶ ವಾಪಸ್ ಬಂದುಬಿಟ್ಟ. ಯಾವ ಬಟ್ಟೆಯಲ್ಲಿ ಹೋಗಿದ್ದನೋ ಅದರಲ್ಲೇ ಹಿಂದಿರುಗಿದ್ದ. ಕುಟ್ನಪ್ಪನಿಗೆ ಅವನ ಸೋತ ಮುಖವನ್ನು ನೋಡುತ್ತಲೇ ಏನಾಗಿರಬಹುದೆಂಬ ಅಂದಾಜು ಆಗಿಹೋಯಿತು. ಹೆಗಲ ಮೇಲಿನ ಬ್ಯಾಗನ್ನು ಕೆಳಗೂ ಇಳಿಸದೆ ಅಂಗಳದಲ್ಲೇ ನಿಂತು ಹೇಳಿದ್ದ ಮಹೇಶ "ಎಲ್ಲ ಮೋಸ ಅಪ್ಪ. ಕೆಲಸವೂ ಇಲ್ಲ ಮಣ್ಣೂ ಇಲ್ಲ". ದುಡ್ಡನ್ನೆಲ್ಲ ಕಟ್ಟಿಕೊಂಡು ಬಿಲ್ಡಿಂಗಿನ ಷಟರ್ ಎಳೆದು ಅದ್ಯಾವುದೋ ಏಜನ್ಸಿ ಎಂದು ಬೋರ್ಡು ಹಾಕಿಕೊಂಡ ಮನುಷ್ಯ ರಾತ್ರೋರಾತ್ರಿ ಪರಾರಿಯಾಗಿದ್ದ. ಕೊಟ್ಟು ಕೆಟ್ಟ ಮಹೇಶ ಮತ್ತು ಇನ್ನೂ ಹಲವರು ಕಣ್ಣಿಗೆ ನೀರು ಹಚ್ಚಿಕೊಂಡು ಮನೆಯ ದಾರಿ ಹಿಡಿದಿದ್ದರು. ಎಲ್ಲಾದರೂ ಓಡಿಹೋಗಿಬಿಡಲೆ ಎಂಬ ಆಲೋಚನೆ ಕ್ಷಣಕಾಲ ಮಹೇಶನ ತಲೆಯಲ್ಲಿ ಸುಳಿದಿತ್ತು. ಆದರೆ ಅಷ್ಟೇ ಬೇಗ ಅದೆಲ್ಲ ಆಗುವ ಕೆಲಸವಲ್ಲ ಎಂಬ ಅರಿವೂ ಆಗಿತ್ತು. ಅವನಂದುಕೊಂಡಿದ್ದನ್ನು ಅಪ್ಪನಿಗೆ ಹೇಳಿದ್ದರೆ ಸಂಪೂರ್ಣ ಸಮ್ಮತಿ ಕೊಟ್ಟುಬಿಡುತ್ತಿದ್ದನೇನೋ. ಆದರೆ ಈಗ ಆಗಿದ್ದೆಲ್ಲವನ್ನೂ ಸುಮ್ಮನೆ ಕೂತು ಕೇಳಿಸಿಕೊಂಡವನೇ ಏನೂ ಆಗಿಲ್ಲವೆಂಬಂತೆ ಹಳೇ ಅಂಗವಸ್ತ್ರವೊಂದನ್ನು ತಲೆಗೆ ಚಂಡಿ ಕಟ್ಟಿ ಮನೆಯಿಂದ ಹೊರಗೆ ಹೋಗಿಬಿಟ್ಟಿದ್ದ.
            ಅಂದು ಆಶ್ಚರ್ಯವೆಂಬಂತೆ ಶಂಕರ ಹೆಗಡೇರೇ ಕೆಲಸಕ್ಕೆ ಹೇಳಿಕಳುಹಿಸಿದ್ದರು. ಅದನ್ನೇ ಕಾಯುತ್ತಿದ್ದನೆಂಬಂತೆ ಕುಟ್ನಪ್ಪ ಬೆಳಗಿನ ತಿಂಡಿಯನ್ನೂ ತಿನ್ನದೆ ಅವರ ಮನೆಗೋಡಿದ್ದ. "ಒಂದು ನಾಲ್ಕು ಮರ ಇದೆ ಅಷ್ಟೇ ಕುಟ್ಣಪ್ಪ. ಬೇಗ ಕೊಯ್ದುಮುಗಿಸಿಬಿಡುವ ಬಾ" ಎನ್ನುತ್ತ ಮನೆ ಮುಂದಿನ ತೋಟದ ಕಡೆ ನಡೆದರು ಹೆಗಡೇರು. ಸದ್ದಿಲ್ಲದೇ ಅವರನ್ನು ಹಿಂಬಾಲಿಸಿದ ಕುಟ್ಣಪ್ಪ ಸುಮಾರು ಮೂರ್ನಾಲ್ಕು ತೆಂಗಿನಮರಗಳನ್ನು ಸರಿಯಾಗಿಯೇ ಹತ್ತಿಳಿದ. ಮುಂದಿನ ಮರದ ತುದಿಯಲ್ಲಿದ್ದವ ಏಕ್ ದಂ ಜಾರಿಬಿಟ್ಟ. ಜಾರಿದನೋ ಅಲ್ಲ ಹಾರಿದನೋ ಒಟ್ಟಾರೆ ಕಾಯಿ ಗೊಂಚಲಿನ ಜೊತೆ ಕುಟ್ಣಪ್ಪನೂ ಕೆಳಬರುತ್ತಿರುವುದು ಹೆಗಡೇರಿಗೆ ಗೋಚರವಾಯಿತು. ನೆಲಮುಟ್ಟುವ ಮೊದಲು, ಗಾಳಿಯಲ್ಲಿದ್ದಾಗ ಅದೇಕೋ ಕುಟ್ಣಪ್ಪನಿಗೆ ಭಯ-ಭೀತಿ ಮುಂತಾದವುಗಳು ಉಂಟಾಗುವ ಬದಲು "ಇಲ್ಲ. ನನ್ನ ಮಗ ಅಷ್ಟು ಕೆಲಸಕ್ಕೆ ಬಾರದವನಲ್ಲ. ಕಾರವಾರವಲ್ಲದಿದ್ದಲ್ಲಿ ಮತ್ತೊಂದೆಡೆ ಇನ್ನೊಂದು ಕೆಲಸವನ್ನು ಹುಡುಕುತ್ತಾನೆ. ತನ್ನ ಕಾಲಮೇಲೆ ತಾನು ನಿಲ್ಲುತ್ತಾನೆ. ಸ್ವಲ್ಪ ಸಮಯ ಬೇಕಷ್ಟೆ" ಎಂದೆನಿಸುತ್ತಿತ್ತು.

Sunday 16 June 2013

360 ಎಲ್ಲಿ ಹೋಯಿತು?

ಹತ್ತು, ಹದಿನೈದು ನಿಮಿಷಗಳಿಗೊಮ್ಮೆ ಪುರುಸೊತ್ತಿಲ್ಲದಂತೆ, ಬೇಡವೆಂದರೂ ಬರುತ್ತಿದ್ದ

ಹಗಲುಗಳಲ್ಲೆಲ್ಲ ಖಾಲಿ ಖಾಲಿಯಾಗಿ ಹೋಗುತ್ತಿದ್ದ 

ಇಷ್ಟು ಹೊತ್ತಿನಲ್ಲಾಗಲೇ ಬಂದುಬಿಡಬೇಕಾಗಿದ್ದ 

ಮಾರಾಟವಾಗದೆ ಹಾಗೆ ಉಳಿದ ಬಣ್ಣದ ಕಾಗದದ ಗಿರಗಿಟ್ಲೆ, ಹವೆ ಹೊರಬಿಟ್ಟು ಚಪ್ಪಟೆಯಾದ ಬಲೂನುಗಳನ್ನು ಕಟ್ಟಿದ ಕೋಲನ್ನು ಹಿಡಿದ ಕೋಲಿನಂತಹ ಹುಡುಗ ಕಾಯುತ್ತಿದ್ದ 

ಸ್ಟ್ಯಾಂಡಿನ ಪಕ್ಕದ 'ಕಾಫಿ ಡೇ'ಯಿಂದ ತಂಪಾಗಿ ಹೊರಬಂದ ಜೋಡಿ, ಒಂದು ವೇಳೆ ಬಂದರೂ ಹತ್ತುವುದು ಬೇಡವೆಂದುಕೊಂಡು ನಿಂತಿರುವಾಗ 

ದಿನದ ಕೆಲಸ ಮುಗಿಸಿ ಸಿಗರೇಟೊಂದನ್ನು ಈಗಷ್ಟೇ ಬೂದಿಮಾಡಿ ಹೊಗೆಯುಗುಳುತ್ತಲೇ ಬಂದು ನಿಂತ ಸಾಫ್ಟ್ವೇರು ಎಂಜಿನಿಯರನನ್ನು ಹತ್ತಿಸಿಕೊಳ್ಳಬೇಕಾಗಿದ್ದ 

ಜ್ವರದಿಂದ ನರಳಿದ್ದ ತನ್ನ ಪುಟ್ಟ ಮಗುವನ್ನು ಹೊತ್ತು ಆಸ್ಪತ್ರೆಗೆ ಬಂದು ವಾಪಸು ಹೊರಡಲು ತಡವಾಗಿ ಕ್ಷಣಕ್ಕೊಮ್ಮೆ ಅದರ ಹಣೆ ಮುಟ್ಟಿ ತಳಮಳಗೊಳ್ಳುತ್ತಿರುವಾಗ

ಬೆಳಗಿಂದ ದುಡಿದು ಪಡೆದ ಕೂಲಿಯಲ್ಲಿ ಮೂಗಿನ ತುದಿವರೆಗೆ ಕುಡಿದು ಸಂಪೂರ್ಣ ತೀರ್ಥರೂಪನಾಗಿ ನಿಂತಲ್ಲೇ ತೇಲುತ್ತಿದ್ದವನ ಹತ್ತಿಸಿಕೊಳ್ಳದೆ ಮುಂದೆ ಹೋಗಬೇಕಾಗಿದ್ದ

ಶಾಲೆಯಲ್ಲಿ ಕಲಿತದ್ದಷ್ಟೇ ಅಲ್ಲದೆ ಟ್ಯೂಶನ್ನಿನ ಪಾಠವನ್ನೂ ಹೇಗೆ ನೆನಪಿಟ್ಟುಕೊಳ್ಳುವುದೆಂದು ಬಗೆಹರಿಯದೆ ಕೂತ ಹುಡುಗನ ಬ್ಯಾಗಿನ ಭಾರವನ್ನು ಕಡಿಮೆ ಮಾಡಬೇಕಾಗಿದ್ದ

ಮುಂದೆಲ್ಲೋ ಹೋಗಿಳಿದು ತನ್ನೂರಿನ ಬಸ್ಸು ಹತ್ತಲಿರುವ, ತನ್ನಷ್ಟೇ ಗಾತ್ರದ ಚೀಲಕ್ಕಾತುಕೊಂಡು ನಿಂತವನ ಬಿಟ್ಟು

ರಾತ್ರಿ ಪಾಳಿಯ ಮತ್ಯಾವುದೋ ಕೆಲಸಕ್ಕೆಂದು ಮತ್ತೆಲ್ಲಿಗೋ ಹೋಗಬೇಕಾಗಿದ್ದವರನ್ನು ಅಲ್ಲಿಗೆ ಕರೆದೊಯ್ಯಬೇಕಾಗಿದ್ದ

ಟೆರೇಸಿನ ಮೇಲೆ ಒಣಹಾಕಿದ್ದ ಬಟ್ಟೆಗಳೆಲ್ಲ ಮಳೆಗೆ ಎಲ್ಲಿ ಒದ್ದೆಯಾದಾವೋ ಎಂದು ಪದೇ ಪದೇ ಆಕಾಶ ನೋಡಿ ಆತಂಕಗೊಂಡ ಗೃಹಿಣಿ ಕಾಯುತ್ತಿದ್ದ

ದಿನವಿಡೀ ಗಾರೆ ಕೆಲಸ ಮಾಡಿ ಮೈಮೇಲೆಲ್ಲ ಕರೆಗಟ್ಟಿದ ಸಿಮೆಂಟು-ಧೂಳನ್ನು ಈಗಷ್ಟೇ ತಿಕ್ಕಿ ತಿಕ್ಕಿ ತೊಳೆದು ಸ್ನಾನ ಮಾಡಿ ಲೈಫ್ ಬಾಯ್ ಘಮ ಬೀರುತ್ತ ನಿಂತ ಸರವಣನನ್ನು ಮನೆಮುಟ್ಟಿಸಬೇಕಾಗಿದ್ದ

ಮುಖದ ತುಂಬ ಪೌಡರು ಮೆತ್ತಿಕೊಂಡು, ತಲೆತುಂಬ ಮಲ್ಲಿಗೆ ಮುಡಿದು, ಸ್ಲೀವ್ ಲೆಸ್ಸು ಬ್ಲೌಸು ತೊಟ್ಟು, ಹೈ ಹೀಲ್ದು ಚಪ್ಪಲಿ ಮೆಟ್ಟಿ, ಮೊಬೈಲನ್ನು ಕಿವಿಗೆ ಚುಚ್ಚಿ ಗಿರಾಕಿಯೊಂದಿಗೆ ಮೈಯನ್ನು ಎಷ್ಟಕ್ಕೆ ಮಾರುವುದೆಂಬ ವಾದದಲ್ಲಿ ತೊಡಗಿದ ಆಕೆ ಹತ್ತಬೇಕಾಗಿದ್ದ

360....

ಗಂಟೆ ಹತ್ತಾಯ್ತು
ರಸ್ತೆ ಬರಡಾಯ್ತು
ಮೋಡ ದಟ್ಟವಾಯ್ತು
ಚಳಿ ಜೋರಾಯ್ತು

....ಎಲ್ಲಿ ಹೋಯಿತು? 360....
....ಎಲ್ಲಿ ಹೋಯಿತು?

Saturday 7 July 2012

ಮತ್ತೊಂದು ಲೇಖನ

ಈ ಲೇಖನ ಜೂನ್ 20ರಂದು ವಿಜಯವಾಣಿ ದಿನಪತ್ರಿಕೆಯ ಅದೇ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಯಿತು.



ನೆನಪೊಂದೆ ಉಳಿಯುವುದು

                ಅಂತೂ ಸಿ.ಇ.ಟಿ ಪರೀಕ್ಷೆಯನ್ನು ಒಳ್ಳೆಯದು ಅನ್ನಬಹುದಾದಂತಹ ಒಂದು ರ್‍ಯಾಂಕಿನೊಂದಿಗೆ  ಪಾಸು ಮಾಡಿ ಕೌನ್ಸೆಲಿಂಗಿನಲ್ಲಿ ಆರ್.ಎನ್.ಎಸ್ ಎಂಜಿನಿಯರಿಂಗ್ ಕಾಲೇಜನ್ನೇ ಬೇಕೆಂದು ಆಯ್ದುಕೊಂಡು ಕಾಲೇಜಿನ ಜೊತೆಗೆ ಹಾಸ್ಟೆಲಿಗೂ ಅಡ್ಮಿಷನ್ ಮಾಡಿಸಿಯೇಬಿಟ್ಟೆ. ಸುಮಾರು ಒಂದು ವಾರದ ನಂತರ ಕಾಲೇಜು ಶುರುವಾಗಲಿತ್ತು. ಇನ್ನು ಹೀಗೆ ಫ್ರೀಯಾಗಿ ಇರಲು ಆಗುವುದೇ ಇಲ್ಲವೆಂಬಂತೆ ಊರಲ್ಲಿ ಮಜಾ ಮಾಡಿ ಸರಿಯಾಗಿ ಕಾಲೇಜು ಶುರುವಾಗುವ ದಿನ ಬೆಳಿಗ್ಗೆ ಎರಡನೇ ಬಾರಿ ಬೆಂಗಳೂರಿಗೆ ಕಾಲಿಟ್ಟಿದ್ದೆ. ಅಂದು ತಾರೀಖು ೧೬ನೇ ಸೆಪ್ಟೆಂಬರ್ ೨೦೦೮.
                ಮೆಜೆಸ್ಟಿಕ್ಕಿನಿಂದ ಒಂದು ಗಂಟೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸಿ ಎಂಟೂವರೆಗೆ ಹೆಗಲ ಮೇಲೊಂದು, ಕೈಲೆರಡು ಮಣಭಾರದ ಬ್ಯಾಗುಗಳನ್ನು ಹಿಡಿದು ಹಾಸ್ಟೆಲ್ ತಲುಪಿದೆ. "ತಗೊಳಪ್ಪ ಕೀ, ರೂಮ್ ನಂಬರ್ ೨೫" ಎನ್ನುತ್ತ ದಾರಿ ತೋರಿಸಿದರು ವಾರ್ಡನ್. ರೂಮಿನ ಹತ್ತಿರ ಬಂದು ನೋಡುತ್ತೇನೆ, ಬಾಗಿಲು ತೆರೆದೇ ಇದೆ. ರೂಮ್ ಮೇಟ್ಸ್ ಆಗಲೇ ಬಂದುಬಿಟ್ಟಿದ್ದಾರೆ ಎಂಬ ಅರಿವಾಯಿತು. ಒಳಬರುತ್ತಲೇ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿದ್ದವನೊಬ್ಬ "ಬಾರಪ್ಪಾ! ಯಾವ ಬ್ರಾಂಚ್? ಯಾವೂರು? ರ್‍ಯಾಂಕ್ ಎಷ್ಟು?" ಎಂದು ಪ್ರಶ್ನೆಗಳ ಮಳೆಗರೆದ. ಖಾಲಿ ಇದ್ದ ಮಂಚವೊಂದರ ಅಡಿಯಲ್ಲಿ ಬ್ಯಾಗುಗಳನ್ನು ಸರಿಸಿಡುತ್ತಾ ನಾನು ಅವನ ಪ್ರಶ್ನೆಗಳನ್ನೆಲ್ಲ ಒಂದೊಂದಾಗಿ ಉತ್ತರಿಸಿ "ನಿಮ್ಮ ಹೆಸರೇನು?" ಎಂದು ಕೇಳಿದೆ. "ವಿನೋದ್. ನಿಂದು?" ಆತ ಕೇಳಿದ. "ವಾಗೀಶ. ನಿಮ್ಮದು ಯಾವೂರು?" ಈ ಸಂಭಾಷಣೆ ಯಾವಾಗ ಮುಗಿಯುವುದೋ ಎಂಬ ಭಾವದಲ್ಲಿ ಕೇಳಿದೆ. "ನಾವು, ನೀವು ಅನ್ನಬೇಕಿಲ್ಲ, ರೂಮ್ ಮೇಟ್ಸ್ ಆದಮೇಲೆ ಅವೆಲ್ಲ ಯಾಕೆ? ಬಾಗಲಕೋಟೆ ನಂದು." ನನಗೀಗ ಸ್ವಲ್ಪ ಧೈರ್ಯ ಬಂತು. "ಕ್ಲಾಸುಗಳು ಶುರುವಾಗೋ ಹೊತ್ತಾಯಿತು. ನಾನು ಹೊರಡುತ್ತೇನೆ. ಕೆಳಗೆ ಮೆಸ್ ಇದೆ, ತಿಂಡಿ ಮಾಡು" ಎನ್ನುತ್ತ ಹೊರನಡೆದ ನನ್ನ ರೂಮ್ ಮೇಟ್ ವಿನೋದ.
                ಶಾಸ್ತ್ರಕ್ಕೆಂಬಂತೆ ಸ್ನಾನ ಮಾಡಿ ತಿಂಡಿ ಮುಗಿಸಿ ಬ್ಯಾಗು ಹೆಗಲಿಗೇರಿಸಿಕೊಂಡು ಓಡೋಡುತ್ತ ಕ್ಲಾಸ್ ರೂಮ್ ತಲುಪುವಷ್ಟರಲ್ಲಾಗಲೇ ಯಾರೋ ಕಲಿಸುತ್ತಿದ್ದರು ಒಳಗೆ. ನನ್ನಷ್ಟಕ್ಕೆ ನಾನು "ಎಕ್ಸ್ ಕ್ಯೂಸ್ ಮಿ ಸರ್" ಎಂದು ಅವರು ಅನುಮತಿ ನೀಡುವ ಮೊದಲೇ ಸೀದ ಹೋಗಿ ಕೊನೇ ಬೆಂಚಿನಲ್ಲಿ ಕುಳಿತೆ. ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುವುದಿಲ್ಲ, ಪಕ್ಕ ಕುಳಿತವನು ಅಕಸ್ಮಾತ್ ಇಂಗ್ಲೀಷಿನಲ್ಲೇ ಮಾತಾಡಿದರೆ ಏನು ಮಾಡುವುದೆಂಬ ಅಳುಕಿತ್ತು. ಅದೃಷ್ಟವಶಾತ್ ಆತ ಉಡುಪಿ ಕಡೆಯವನಾಗಿದ್ದ. ಹಾಗಾಗಿ ಉತ್ತರ ಕನ್ನಡದವನಾದ ನನಗೆ ಕನ್ನಡ ಮಾತಾಡುವಲ್ಲಿಯೂ ಅನುಕೂಲವಾಯಿತು. ಆ ಪೀರಿಯಡ್ ಹಾಗೇ ಮುಗಿದು ಮತ್ತೊಬ್ಬ ಲೆಕ್ಚರರ್ ಒಳಬಂದು ಕಲಿಸಲಾರಂಭಿಸಿದರು. ನಾನು ಕಿಸೆಯಲ್ಲಿ ಒಮ್ಮೆ ಕೈಯಾಡಿಸಿದೆ. ಒಂದು ಚ್ಯೂಯಿಂಗ್ ಗಮ್ ಸಿಕ್ಕಿತು. ಅದನ್ನು ಬಾಯಲ್ಲಿಟ್ಟು ಅಗಿಯುತ್ತ ಬಲಗೈಯಲ್ಲಿ ಪೆನ್ನನ್ನು ಆಡಿಸುತ್ತಾ ಹಾಯಾಗಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದೆ. "ಪರ್ಸನ್ ಸಿಟ್ಟಿಂಗ್ ಇನ್ ದ ಲಾಸ್ಟ್ ಬೆಂಚ್, ಕ್ಯಾನ್ ಯು ಪ್ಲೀಸ್ ಗೆಟ್ ಅಪ್?", ನಾನು ಥಟ್ಟನೆ ಎದ್ದುನಿಂತ ರಭಸಕ್ಕೆ ಕೈಯಲ್ಲಿದ್ದ ಪೆನ್ ಕೆಳಗೆ ಬಿದ್ದು ಆವರಿಸಿದ್ದ ನಿಶ್ಶಬ್ದವನ್ನು ಕಲಕಿತು. "ಬಾಯಲ್ಲಿರುವುದನ್ನು ಈಗಲೇ ಉಗಿದು ಬಾ." ಆಜ್ನಾಪಿಸಿದರು ಲೆಕ್ಚರರ್. ಕ್ಷಣವೂ ತಡಮಾಡದೆ ಹೊರಗೋಡಿದೆ. ಆದರೆ ರೆಸ್ಟ್ ರೂಮ್ ಹುಡುಕಿ ಚ್ಯೂಯಿಂಗ್ ಗಮ್ ಉಗಿದು ಬಾಯಿ ತೊಳೆದುಕೊಂಡು ಕ್ಲಾಸಿಗೆ ವಾಪಸ್ ಬರುವಷ್ಟರಲ್ಲಿ ನಮ್ಮ ಸರ್ರು ಹಾಜರಿ ತೆಗೆದುಕೊಂಡು ಹೋಗಿಯೇಬಿಟ್ಟಿದ್ದರು. ಮುಂದಿನ ಎರಡು ಪೀರಿಯಡ್ಡುಗಳು ಮತ್ತೇನೂ ಅವಘಡಗಳು ಘಟಿಸದೆ ಹಾಗೆಯೇ ಕಳೆದವು.
                ಕಾಲೇಜು ಮುಗಿಯುತ್ತಿದ್ದಂತೆಯೇ ಮೈದಾನದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್, ಮುಂತಾದ ವಿವಿಧ ಆಟಗಳಲ್ಲಿ ಹುಡುಗರ ಗುಂಪುಗಳು ನಿರತವಾದವು. ನನಗೆ ಏನನ್ನೂ ಆಡುವ ಮನಸ್ಸಿಲ್ಲವಾಗಿದ್ದುದರಿಂದ ಹುಲ್ಲಿನ ಮೇಲೆ ಸೂರ್ಯಾಸ್ತವಾಗುವುದನ್ನು ನೋಡುತ್ತ ಕುಳಿತೆ. ನಂತರ ವಿನೋದನ ಜೊತೆ ಹೊರಗೆ ಹೋಗಿ ನಿತ್ಯಬಳಕೆಯ ಕೆಲ ವಸ್ತುಗಳನ್ನೂ, ಪುಸ್ತಕ-ನೋಟ್ ಬುಕ್ಕುಗಳನ್ನೂ ಕೊಂಡುಬಂದೆ. ರಾತ್ರಿ ಊಟ ಮುಗಿಸಿದಮೇಲೆ ಹಾಸ್ಟೆಲ್ಲಿನಲ್ಲಿ ನನ್ನದೇ ಬ್ಯಾಚಿನ ಮತ್ತಷ್ಟು ಹುಡುಗರ ಪರಿಚಯವಾಯಿತು. ಅವರಲ್ಲಿ ಕೆಲವರು ನನ್ನ ಜಿಲ್ಲೆಯವರೇ ಇದ್ದುದನ್ನು ತಿಳಿದು ನನಗೆ ಮತ್ತಷ್ಟು ಸಮಾಧಾನವೂ ಆಯಿತು. ಇನ್ನು ಕೆಲವು ದಿನಗಳಲ್ಲಿ ಸೀನಿಯರ್‍ಸ್ ರ್‍ಯಾಗಿಂಗಿಗೆ ಕರೆಯುವವರಿದ್ದಾರೆ ಎಂಬ ಸುದ್ದಿಯನ್ನೂ ಯಾರೋ ಕಿವಿಗೆ ಹಾಕಿದರು. ಆಗ ಸಮಾಧಾನದ ಜೊತೆಗೆ ಸಣ್ಣದಾಗಿ ಹೆದರಿಕೆಯೂ ಶುರುವಾಯಿತು. ಇದಕ್ಕೂ ಮೊದಲು ಹಾಸ್ಟೆಲ್ಲಿನಲ್ಲಿ ಇದ್ದೆನಾದರೂ ಈ ರ್‍ಯಾಗಿಂಗಿನ ಅನುಭವ ಇನ್ನೂ ಆಗಿರಲಿಲ್ಲ. ಹೆದರಿಕೆಯ ಜೊತೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಕುತೂಹಲವೂ ಇತ್ತೆನ್ನಿ. ಕಡೆಯದಾಗಿ ಮಲಗುವ ಮುನ್ನ ಮನೆಗೆ ಕರೆ ಮಾಡಿ ಅಪ್ಪ ಅಮ್ಮನೊಂದಿಗೆ ಮಾತನಾಡುತ್ತ "ಕಾಲೇಜು ಪರವಾಗಿಲ್ಲ, ಆರಿಸಿಕೊಂಡು ತಪ್ಪು ಮಾಡಲಿಲ್ಲ" ಎನ್ನುವಾಗ ಮೊದಲ ದಿನವನ್ನು ಯಶಸ್ವಿಯಾಗಿ ಮುಗಿಸಿದ ಧನ್ಯತಾಭಾವವಿತ್ತು.
                ಎಂಜಿನಿಯರಿಂಗಿನ ನಾಲ್ಕೂ ವರ್ಷಗಳನ್ನು ಮುಗಿಸಿ ಬರೋಬ್ಬರಿ ನಲವತ್ತೈದು ಪರೀಕ್ಷೆಗಳನ್ನು ಬರೆದು ಅವುಗಳಲ್ಲಿ ನಾಲ್ಕರ ಫಲಿತಾಂಶವನ್ನು ಎದುರುನೋಡುತ್ತಿದ್ದೇನೆ. ಆದರೆ ಮೊದಲ ದಿನದ ನೆನಪು ಮನದಲ್ಲಿ ಇನ್ನೂ ಹಚ್ಚ ಹಸಿರು. ಬೀತೆ ಪಲ್ ಫಿರ್ ನಹೀ ಆಯೆಂಗೆ.


ಜಾಗದ ಅಭಾವದಿಂದ ದುರದೃಷ್ಟವಶಾತ್ ಈ ಲೇಖನದ ಮೊದಲ ಅರ್ಧಭಾಗವಷ್ಟೇ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೇನಾಯಿತು? ಬ್ಲಾಗಿನಲ್ಲಿ ಪೂರ್ಣವಾಗಿಯೇ ಪೋಸ್ಟ್ ಮಾಡುವ ಸ್ವಾತಂತ್ರ್ಯವಿದೆಯೆಂದು ನಂಬಿದ್ದೇನೆ. ಓದಿದ್ದಕ್ಕೆ ಧನ್ಯವಾದ. 

Thursday 19 April 2012

ಲೇಖನ

ನಿನ್ನೆ, ಅಂದರೆ ೧೮ನೆ ತಾರೀಖು ಈ ನನ್ನ ಲೇಖನ ವಿಜಯವಾಣಿ ದಿನಪತ್ರಿಕೆಯ  ಪುರವಣಿಯಲ್ಲಿ ಪ್ರಕಟವಾಯಿತು. ನಮ್ಮಲ್ಲಿ ಹಲವರಿಗೆ(ನನಗೂ ಕೂಡ ) ದಿನಪತ್ರಿಕೆ, ಅದೂ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸ ಇರುವುದಿಲ್ಲವಾದ್ದರಿಂದ ಇದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು.

 ವಸತಿ ಶಾಲೆಯ ರಾತ್ರಿ ಜಾತ್ರೆ 

         ಆಗ ನಾನು ಹತ್ತನೇ ಕ್ಲಾಸು. ಓದುತ್ತಿದ್ದುದು ಜಿಲ್ಲೆಗೇ ಪ್ರತಿಷ್ಠಿತವಾದ ನವೋದಯ ಶಾಲೆಯಲ್ಲಿ. ನಮ್ಮ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಮಳಗಿ ಎಂಬ ಗ್ರಾಮದಲ್ಲಿ. ವಸತಿ ಶಾಲೆಯಾದ್ದರಿಂದ ಮಕ್ಕಳ ಜವಾಬ್ದಾರಿ ಶಾಲೆಯ ಆಡಳಿತದ ಮೇಲಿರುತ್ತದೆ. ಸುರಕ್ಷೆಯ ದೃಷ್ಟಿಯಿಂದ ಕಂಪೌಂಡಿನಿಂದಾಚೆ ಸಕಾರಣವಿಲ್ಲದೆ, ಜೊತೆಗೆ ಯಾರೂ ಇಲ್ಲದೆ ಕಾಲಿಡುವುದು ನಿಷಿದ್ಧವಾಗಿತ್ತು. ಇದೊಂದು ನಿಯಮವೆಂದಮೇಲೆ ನಿಯಮವನ್ನು ಉಲ್ಲಂಘಿಸುವುದು ವಿದ್ಯಾರ್ಥಿಗಳಾದ ನಮ್ಮ ಆದ್ಯ ಕರ್ತವ್ಯವೆಂದು ತಿಳಿದುಕೊಂಡಿದ್ದ ಕಾಲ. ಹೀಗಾಗಿ ರೂಲ್ಸ್ ಬ್ರೇಕ್ ಮಾಡಿ ನಮ್ಮ ಸಾಹಸ ಪರಾಕ್ರಮಗಳನ್ನು ಸ್ನೇಹಿತರೆದುರಿಗೆ ಪ್ರದರ್ಶನ ಮಾಡಲು ಯಾವುದಾದರೂ ಒಂದು ಸಣ್ಣ ಅವಕಾಶ ಸಿಗಬಹುದೇನೋ ಎಂದು ಕಾಯುತ್ತಲೇ ಇರುತ್ತಿದ್ದೆವು. 
ಮಳಗಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಶುರುವಾಗಿಬಿಟ್ಟಿದೆ. ಜಾತ್ರೆಗೆ ಮಕ್ಕಳೆಲ್ಲರನ್ನೂ ಶಿಕ್ಷಕರು ಯಾವುದಾದರು ಒಂದು ಸಂಜೆ ಕರೆದುಕೊಂಡು ಹೋಗುತ್ತಿದ್ದರೂ ಹಾಗೆ ಹೋಗಿ ಬರುವುದರಲ್ಲಿ ನಮಗೆ, ಅಂದರೆ ಸೀನಿಯರುಗಳಿಗೆ ಹೊಸತೇನೂ ಇರಲಿಲ್ಲ. ರಾತ್ರಿ ಹನ್ನೆರಡು ದಾಟಿದಮೇಲೆ ಗುಂಪಾಗಿ ಕಂಪೌಂಡು ಹಾರಿ ಕಳ್ಳವಂಟಿಗೆಯಲ್ಲಿ ಹೋಗಿ ಪೇಟೆ ಸುತ್ತಿಬರುವುದರಲ್ಲೇ ಇತ್ತು ಅಸಲೀ ಮಜ. ನನಗೆ ಸರಿಯಾದ ಜೊತೆ ಯಾರೂ ಸಿಗದೇ ಒಂದನೇ ರಾತ್ರಿ ಹಾಗೇ ಕಳೆದುಹೋಯಿತು. ಸುಮ್ಮನಿದ್ದರೆ ಇದು ಆಗುವ ಕೆಲಸವಲ್ಲ ಎಂಬುದನ್ನು ಅರಿತ ನಾನು ಮರುದಿನ ಬೆಳಿಗ್ಗೆಯೇ ಗೆಳೆಯ ಕುಮಾರನ ಬಳಿ ಹೋದೆ ಹಾಗೂ ನನ್ನ ಪ್ಲ್ಯಾನನ್ನ್ನು ಅವನ ಎದುರಿಗಿಟ್ಟೆ. ನಮ್ಮ ಬ್ಯಾಚಿನ ಹುಡುಗರಲ್ಲೆಲ್ಲರಲ್ಲೂ ನನ್ನಂತೆಯೇ ಸೋ ಕಾಲ್ಡ್ ಡೀಸೆಂಟ್ ಬಾಯ್ ಆಗಿದ್ದ ಆತ ಮೊದಮೊದಲು ನಾನಂದುಕೊಂಡತೆಯೆ ಹೆದರಿದ ಹಾಗೂ ಬರಲು ನಿರಾಕರಿಸಿದ. ಆದರೆ ಅಷ್ಟು ಸುಲಭಕ್ಕೆ ನಾನು ಬಿಡುವವನಾ? ಸುಮಾರು ಅರ್ಧ ಗಂಟೆ ಪಂಪ್ ಹೊಡೆದು ಉಬ್ಬಿಸಿದಮೇಲೆ ಅಂತೂ ಇಂತೂ ಆಸಾಮಿ ಒಪ್ಪಿಕೊಂಡ.
ಅಂದು ರಾತ್ರಿ ಹನ್ನೆರಡಕ್ಕೆಲ್ಲ ಸರಿಯಾಗಿ ನಾವಿಬ್ಬರೂ ಕಂಪೌಂಡು ಗೋಡೆಯ ಬಳಿ ಇದ್ದೆವು. ಅದ್ಯಾವುದೋ ಹುಂಬ ಧೈರ್ಯದಲ್ಲಿ ಅವಶ್ಯಕತೆ ಇರುತ್ತದೆಂಬುದು ಗೊತ್ತಿದ್ದೂ ಇಬ್ಬರಲ್ಲಿ ಒಬ್ಬರೂ ಒಂದು ಟಾರ್ಚನ್ನೂ ತಂದಿರಲಿಲ್ಲ. ಕಂಪೌಂಡು ಸಮೀಪಿಸಿದಾಗ ಕತ್ತಲೆಯ ಅರಿವಾಗಿ ಸಣ್ಣ ಹೆದರಿಕೆಯೊಂದು ಶುರುವಾಗಿತ್ತು. ಆದರೂ ಇಲ್ಲಿಯತನಕ ಬಂದಿದ್ದಾಗಿದೆ, ಮತ್ತೆ ಅದನ್ನು ತರಲೆಂದು ವಾಪಸ್ ಹಾಸ್ಟೆಲಿಗೆ ಯಾವನು ಹೋಗುತ್ತಾನೆ? ಹೇಗಾದರೂ ಮುಂದೆ ಬೀದಿ ದೀಪಗಳಿರುತ್ತವೆ ಎಂದು ನಮಗೆ ನಾವೇ ಧೈರ್ಯ ಹೇಳಿಕೊಂಡು ಗೋಡೆ ಹತ್ತಿ ಆಚೆ ಹಾರಿಯೇಬಿಟ್ಟೆವು. ರಪ್ಪೆಂದು ಕೆಳಗೆ ಬಿದ್ದಿದ್ದೇ ತಡ, ಸದ್ದು ಕೇಳಿದ ಅಲ್ಲಿಯೇ ಇದ್ದ ಮನೆಯೊಂದರ ನಾಯಿ ತನಗೆ ಇದ್ದ ಶಕ್ತಿಯನ್ನೆಲ್ಲವನ್ನೂ ಒಗ್ಗೂಡಿಸಿ ಬೊಗಳಲಾರಂಭಿಸಿತು. ಇನ್ನು ತಡಮಾಡಿದರೆ ಮನೆಯ ಯಜಮಾನ ದೊಣ್ಣೆ ಹಿಡಿದು ಹೊರಗೆ ಬಂದಾನು ಎಂದುಕೊಂಡ ನಾವಿಬ್ಬರೂ ಒಂದೇ ಉಸಿರಿಗೆ ಅಲ್ಲಿಂದ ಕಾಲುಕಿತ್ತಿದ್ದೆವು. ಹಾಗೆ ಓಡುತ್ತಲೇ ಸುಮಾರು ಒಂದು ಫರ್ಲಾಂಗ್ ಕ್ರಮಿಸಿದ್ದೆವೇನೋ, ಆಗ ಎದುರಾಗಿತ್ತು ಆಲದಮರ. ತನ್ನ ಅಸಂಖ್ಯ ಬಿಳಲುಗಳನ್ನು ನೆಲದ ಮೇಲೆಲ್ಲ ಹರಿಯಬಿಟ್ಟು ಕತ್ತಲೆಯಲ್ಲಿ ಗುಮ್ಮನಂತೆ ನಿಂತಿದ್ದ ಆ ಮಹಾಗಾತ್ರದ ಆಲದಮರದಲ್ಲಿ ಪ್ರೇತಾತ್ಮಗಳಿರುತ್ತವೆ ಎಂದು ಹಾಸ್ಟೆಲ್ಲಿನಲ್ಲಿ ಯಾರೋ ತಮಾಷೆಗೆ ಹೇಳಿದ್ದು ನೆನಪಾಯಿತು. ಹೇಳಿದ್ದು ತಮಾಷೆಗೆಂಬ ಅರಿವಿದ್ದರೂ ಆ ಕ್ಷಣಕ್ಕೆ ನಾವಿಬ್ಬರೂ ನಿಜವಾಗಿ ಮೈತುಂಬ ಬೆವರಲಾರಂಭಿಸಿಬಿಟ್ಟಿದ್ದೆವು. ದಾರಿಯಲ್ಲಿ ಸ್ವಲ್ಪ ಹಿಂದೆ ಕಳೆದಿದ್ದ ಬೀದಿ ದೀಪದ ಕ್ಷೀಣ ಬೆಳಕು ಅಲ್ಲಿಯೂ ಹರಡಿತ್ತು. ಅದೇ ಬೆಳಕಿನಲ್ಲಿಯೇ ಮರದ ಎದುರಿಗೇ ಇದ್ದ ದಾರಿಯನ್ನೊಮ್ಮೆ ಸರಿಯಾಗಿ ನೋಡಿಕೊಂಡೆವು. ಹಾಗೆಯೇ ಕಣ್ಣುಮುಚ್ಚಿ ಜನಿವಾರವನ್ನು ಕೈಯಲ್ಲಿ ಹಿಡಿದು ಸಟಸಟನೆ ನಡೆಯುತ್ತಲೇ ಇದ್ದವರು ನಿಂತದ್ದು ಕುಮಾರ ಕಲ್ಲೊಂದನ್ನು ಎಡವಿ ಬಿದ್ದು ಕೂಗಿಕೊಂಡಾಗಲೇ. ಪುಣ್ಯಕ್ಕೆ ಅಷ್ಟರಲ್ಲಾಗಲೇ ನಾವು ಆಲದಮರವನ್ನು ದಾಟಿ ಸುಮಾರು ದೂರ ಬಂದಾಗಿತ್ತು  ಮತ್ತು ಕುಮಾರನಿಗೆ ದೊಡ್ಡದೆಂಬಂತಹ ಗಾಯವೇನೂ ಆಗಿರಲಿಲ್ಲ. ಅಲ್ಲಿಯೇ ಸ್ವಲ್ಪ ಹೊತ್ತು ಕೂತು ಸುಧಾರಿಸಿಕೊಂಡಮೇಲೆ ಸಾವಕಾಶ ಮುಖ್ಯರಸ್ತೆ ತಲುಪಿದೆವು.
ಇನ್ನೂ ಒಂದೂವರೆ ಕಿಲೋಮೀಟರ್ ನಡೆಯಬೇಕು ಮಳಗಿ ತಲುಪಲು. ಆದರೆ ರಸ್ತೆ ಬೀದಿ ದೀಪಗಳಿಂದ ಬೆಳಕಾಗಿದ್ದುದರಿಂದ ಹಾಗೂ ನಾವು ಶಾಲೆ ಕಳೆದು ಆಗಲೇ ತುಂಬ ದೂರ ಬಂದಿದ್ದೆವಾದ್ದರಿಂದ ಜಾತ್ರೆ ನಡೆಯುತ್ತಿದ್ದ ಜಾಗ ತಲುಪುವಲ್ಲಿ ನಮಗೆ ಯಾವುದೇ ತೊಂದರೆ, ಹೆದರಿಕೆ ಆಗಲಿಲ್ಲ. ಅಷ್ಟೆಲ್ಲ ಪಾಡು ಪಟ್ಟು ಜಾತ್ರೆಗೆ ಹೋಗಿ ನಾವು ಮಾಡಿದ್ದೇನು? ಏನಾದರೂ ಮಾಡಲಿಕ್ಕೆ ಆ ಅಪರಾತ್ರಿಯಲ್ಲಿ ಇದ್ದದ್ದಾದರೂ ಏನು? ಒಂದು ಮೂಲೆಯ ಟೆಂಟಿನಲ್ಲಿ ನಾಟಕ ನಡೆಯುತ್ತಿತ್ತು, ಟಿಕೇಟು ತೆಗೆದುಕೊಂಡು ಕೂತು ಬೆಳಗಿನತನಕ ನೋಡುವ ಸ್ಥಿತಿಯಲ್ಲಿ, ವ್ಯವಧಾನದೊಡನೆ ನಾವಿರಲಿಲ್ಲ. ಅಲ್ಲಲ್ಲಿ ಗುಂಪುಗಳಲ್ಲಿ ಜನ ಜುಗಾರಿ ಆಡುತ್ತಿದ್ದರು. ಹತ್ತಿರ ಹೋಗಿ ನೋಡಿದರೆ ನಮ್ಮ ಶಾಲೆಯ ಜವಾನನೊಬ್ಬನೂ ಜೋರು ಆಟದಲ್ಲಿ ನಿರತನಾಗಿದ್ದಾನೆ. ರಾತ್ರಿಯಲ್ಲೂ ಬಾಗಿಲು ತೆರೆದಿದ್ದ ಮಿಠಾಯಿ ಅಂಗಡಿಯೊಂದರಲ್ಲಿ ಏನನ್ನೋ ಕೊಂಡು ತಿಂದೆವು ಮತ್ತು ಹಾಸ್ಟೆಲ್ಲಿನಲ್ಲಿ ತಿನ್ನಲೆಂದು ಮತ್ತಿಷ್ಟು ಕಟ್ಟಿಸಿಕೊಂಡೆವು. ಉತ್ಸಾಹ ಬಾಕಿ ಇತ್ತಾದ್ದರಿಂದ ಇನ್ನೂ ಅರ್ಧಗಂಟೆ ಎಲ್ಲೆಲ್ಲೋ ತಿರುಗುತ್ತಿದ್ದೆವು. ಹಾಗೆ ತಿರುಗುತ್ತಿದ್ದಾಗಲೇ ನಮ್ಮಂತೆಯೇ ಹಾಸ್ಟೆಲ್ಲಿನಿಂದ ಬೇರೆಬೇರೆ ಗುಂಪಿನ ಜೊತೆ ಭೇಟಿಯೂ ಆಯಿತು. ಎಲ್ಲ ಗುಂಪಿನವರ ಮುಖದಲ್ಲೂ ನನ್ನನ್ನು ಮತ್ತು ಕುಮಾರನನ್ನು ಕಂಡು ಏನೋ ಅನಿರೀಕ್ಷಿತವಾದುದನ್ನು ಕಂಡ ಭಾವನೆ ಪ್ರಕಟವಾಗುತ್ತಿತ್ತು. ವಾಚು ನೋಡಿದರೆ ಗಂಟೆಯ ಮುಳ್ಳು ಆಗಲೇ ಮೂರರ ಕಡೆ ಮುಖಮಾಡಿದೆ. ಇನ್ನು ತಡಮಾಡಿದರೆ ಆಪತ್ತು ಖಚಿತ ಎಂದುಕೊಳ್ಳುತ್ತ ಶಾಲೆಯ ದಾರಿ ಹಿಡಿದೆವು ನಾವಿಬ್ಬರೂ.
ಅದೇಕೋ ಹಿಂತಿರುಗಿ ಬರಬೇಕಾದರೆ ಅದೇ ಆಲದಮರವನ್ನು ದಾಟಿ ಬಂದರು ಒಂದು ಚೂರೂ ಹೆದರಿಕೆಯಾಗಲೇ ಇಲ್ಲ. ಇಪ್ಪತ್ತು ನಿಮಿಷ ಕಳೆಯುವುದರೊಳಗೆ ಮತ್ತೆ ಕಂಪೌಂಡ್ ಗೋಡೆಯ ಬಳಿ ತಲುಪಿಯಾಗಿತ್ತು ನಾವು. ಇನ್ನೇನು ಹತ್ತಿ ಹಾರುವುದೊಂದೇ ಬಾಕಿ. ನಾನೇ ಮೊದಲು ಹತ್ತುತ್ತೇನೆಂದು ಹತ್ತಿ ಗೋಡೆಯ ಮೇಲೆ ನಿಂತಿದ್ದಾಗಲೇ ಸರಿಯಾಗಿ ನನ್ನ ಮುಖದ ಮೇಲೆ ಪ್ರಖರವಾದ ಟಾರ್ಚ್ ಬೆಳಕು ಬಿದ್ದಿತು. ಆಯಿತು, ನಮ್ಮ ಕಥೆಯಿನ್ನು ಮುಗಿಯಿತು. ಈ ಟಾರ್ಚ್ ಬೆಳಕು ಬಿಟ್ಟಿದ್ದು ಯಾರೋ ಗೂರ್ಖಾನೇ ಎಂಬುದು ಖಚಿತವಾದೊಡನೆಯೇ ನಾನು ಒಳಹಾರಿ ಎದ್ದು ಬಿದ್ದು ಓಡಲಾರಂಭಿಸಿದೆ. ಕುಮಾರ ಗೋಡೆ ಹತ್ತಲೇ ಇಲ್ಲ. ಆಗ ಕೇಳಿಸಿತು, "ನಿಲ್ಲಲೇ! ಹಂಗ್ಯಾಕೆ ಓಡ್ತೀ?" ಥಟ್ಟನೆ ಆ ಧ್ವನಿ ಯಾರದೆಂದು ಗೊತ್ತಾಗಿಹೋಯಿತು ನನಗೆ. ಅವನೇ, ರಮಾಕಾಂತ. ನನ್ನ ಮತ್ತೊಬ್ಬ ಗೆಳೆಯನಾಗಿದ್ದ ಆತ ಬೇರೊಂದು ದಾರಿಯಲ್ಲಿ ಅವನ ಗುಂಪಿನವರೊಡನೆ ಸರಿಯಾಗಿ ನಾವು ಬಂದ ಹೊತ್ತಿಗೇ ವಾಪಸ್ ಬಂದಿದ್ದ ಹಾಗೂ ನನ್ನನ್ನು ಕಂಡು ಮುಖದ ಮೇಲೆ ಬೆಳಕು ಬಿಟ್ಟಿದ್ದ. ಅಬ್ಬ! ನನಗೆ ಹೋದ ಜೀವ ಬಂದಂತಾಯಿತು. ರಮಾಕಾಂತ ಸಣ್ಣದಾಗಿ ಕುಹಕ ನಗುತ್ತಿದ್ದ. ಕುಮಾರ ಇದೆಲ್ಲ ನಡೆಯುತ್ತಿದ್ದಾಗಲೇ ಮೆಲ್ಲನೆ ಒಳಬಂದಿದ್ದ.
ಎಲ್ಲ ನಡೆದು ಸುಮಾರು ಏಳು ವರ್ಷವಾಗಿದ್ದರೂ ಮೊನ್ನೆಮೊನ್ನೆ ನಡೆದಂತೆ ನೆನಪುಗಳು ಹಸಿರಾಗೇ ಇವೆ ಮತ್ತು ಹಾಗೇ ಇರುತ್ತವೆ ಕೂಡ. ನಾವು ಮಾಡಿದ ಕೆಲಸ ಅಂದು ನಮಗೆ ಹೆಮ್ಮೆಯ ವಿಷಯವೇ ಆಗಿತ್ತಾದರೂ ಮುಂದಿನ ವರ್ಷಗಳಲ್ಲಿ ನಾನು ಮಾಡಿದ್ದು ತಪ್ಪೆಂಬ ಅರಿವಾಗಿದೆ. ಆದರೆ ತಪ್ಪುಗಳನ್ನೇ ಮಾಡದ, ರೂಲ್ಸುಗಳನ್ನೇ ಬ್ರೇಕ್ ಮಾಡದ ಜೀವನವಾದರೂ ಅದೆಂಥ ಜೀವನ?  

Sunday 15 April 2012

ಕವನ

ಬರೆಯಲು ಶುರುಮಾಡಿದ ಮೇಲೆ ಕಥೆ ಬೇರೆ ಅಲ್ಲ ಕವನ ಬೇರೆ ಅಲ್ಲ ಎಂಬುದು ನನ್ನ ಅಭಿಪ್ರಾಯ. ಇತ್ತೀಚಿಗೆ ರಚಿಸಿದ ಕವನವೊಂದು ನಿಮ್ಮ ಮುಂದಿದೆ.


ನೀ ಹೋದ ನಂತರದ ನಾನು 


ಅದೋ,
ಕಿಟಕಿಯಾಚೆಯಿಂದ ಕೇಳಿದೆ
ಒಳಬಂದು ತೊಯ್ಯಿಸಲೇ ಎಂದು
ಕಾಯಿಸಿ ಸುರಿದ ಮೊದಲ ಮಳೆ
ಮುಸುಕು ತೆಗೆದೆದ್ದ ಭಾವನೆಗಳೆಲ್ಲ
ಈಗ ವೇಷಕಟ್ಟಿ ಮೂರ್ತ
ಸ್ವಗತದಲ್ಲೆ ಸಂಭಾಷಿಸಿ
ನನ್ನಿಡಲೇಕೆ ದೂರ?
ನಿನ್ನ ಮೌನವನ್ನೂ
ಆಲಿಸಬಲ್ಲೆ ನಾನು


ನೀನಿಟ್ಟ ಹೆಜ್ಜೆಯಡಿಯ ಮರಳಲ್ಲಿ
ಮನೆಯೊಂದ ಕಟ್ಟಿ
ಬದುಕಲು ಕರೆದಿದ್ದೆ ನಿನ್ನ
ಆದರೆ ನೀ ಬರುವ ಮೊದಲೇ
ಮತ್ತೆ ಮಳೆ ಬಂದುಬಿಟ್ಟಿತು

ಮನದ ಮರೆಯಲಿ ಅವಿತೆ
ಕಣ್ಣು ರಚಿಸಿದ ಕವಿತೆ
ನಿನ್ನೆದುರು ಓದುವಷ್ಟರಲ್ಲಿ
ತಾನೇ ಕಣ್ಣೀರಾಗಿ ಧರೆಗಿಳಿಯಿತು

ನನ್ನ ಬಾಗಿಲಾಚೆಯ
ನನ್ನದಲ್ಲದ ಜಗತ್ತು
ನಿನ್ನದೂ ಅಲ್ಲವೆಂಬ ಸತ್ಯ
ಹುಡುಗೀ,
ನಿನಗೇಕೆ ತಿಳಿಯಲಿಲ್ಲ?