Friday 25 April 2014

ಒಂದಿಷ್ಟು ಕಾಫ್ಕಾ ಕಥೆಗಳು

          ಜರ್ಮನ್ ಕಥೆಗಾರನಾದ Franz Kafka ಎಂಬೀತ Existentialism ಎಂಬ ಸಿದ್ಧಾಂತವನ್ನು ತಳಹದಿಯಾಗಿಟ್ಟುಕೊಂಡು ತನ್ನ ಅಲ್ಪ ಜೀವಾವಧಿಯಲ್ಲೇ ಹಲವು ಅತ್ಯುತ್ತಮವಾದ ಕಥೆ, ಕಾದಂಬರಿಗಳನ್ನು ರಚಿಸಿ ಜಗತ್ಪ್ರಸಿದ್ಧನಾದ. ದೈನಂದಿನ ಆರ್ಡಿನರಿ ಬದುಕಿನಿಂದಾಚೆ ಹಾರಲು ತುಡಿಯುವ ಮನಸ್ಸಿನ ಕಲಸಿಹೋದ ಕನಸುಗಳ ರಾಶಿಯಂತೆ ಗೋಚರಿಸುವ ಈತನ ಕೃತಿಗಳು ಮೇಲ್ನೋಟಕ್ಕೆ ಹುಚ್ಚನೊಬ್ಬನ ಹಲಬರಿಕೆಯಂತೆ ಕಾಣುತ್ತವೆ. ಆದರೆ ಕೆದಕಿ ನೋಡಿದಾಗ ಮತ್ತೆ ಮತ್ತೆ ಯೋಚನೆಗೆ ಹಚ್ಚುವಂತಹ, ನಿಗೂಢ ಲೋಕವೊಂದರೊಳಕ್ಕೆ ಕರೆದೊಯ್ಯುವ ಭಾವನೆಗಳನ್ನು ಇವು ಉದ್ದೀಪಿಸುತ್ತವೆ.
         ಯಶವಂತ ಚಿತ್ತಾಲರನ್ನು ನಾನು ಒದಲಾರಂಭಿಸಿದ್ದು ಇತ್ತೀಚಿಗೆ. 'ಅಪರಿಚಿತರು' ಮೊದಲಾಗಿ ಚಿತ್ತಾಲರ ಹಲವು ಕಥೆಗಳಲ್ಲಿ ಕಾಫ್ಕಾನ ಛಾಯೆ ದಟ್ಟವಾಗಿ ಎದ್ದು ಕಾಣುತ್ತವೆ. ತನ್ನ ಕಥಾರಚನೆಯಲ್ಲಿ ಕಾಫ್ಕಾನ ಪ್ರಭಾವ ಇದೆ ಎಂದು ಒಂದು ಅವರೇ ಹೇಳಿಕೊಂಡಿದ್ದಾರೆ ಕೂಡ. ಇದನ್ನೋದಿದ ನಾನು ಕುತೂಹಲ ಕೆರಳಿ ಕಾಫ್ಕಾನನ್ನು ಓದುವ ಪ್ರಯತ್ನ ಮಾಡುತ್ತಿದ್ದೇನೆ. ಹಾಗೂ ಅವನ ಕೆಲ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸುವ ಸಾಹಸವನ್ನೂ ಮಾಡಿದ್ದೇನೆ. Read at your own risk...
ಮರಗಳು

          ನಾವು ಹಿಮದಲ್ಲಿ ಬಿದ್ದಿರುವ ಮರದ ದಿಮ್ಮಿಗಳಂತೆ. ಒಂದು ಚಿಕ್ಕ ದೂಡುವಿಕೆಯಿಂದ ಅವುಗಳನ್ನು ಉರುಳಿಸಿಬಿಡಬಲ್ಲೆವೆಂದು ತೋರುತ್ತದೆ. ಆದರೆ ಹಾಗೆ ಮಾಡಲಾರೆವು. ಯಾಕೆಂದರೆ ಅವು ಅಲ್ಲೇ ಬೇರು ಬಿಟ್ಟಿವೆ. ಆದರೆ ನೋಡಿ, ಅದೂ ಕೇವಲ ಒಂದು ತೋರಿಕೆಯಷ್ಟೆ.
ತಿರಸ್ಕಾರ

          ನಾನು ಸುಂದರ ಹುಡುಗಿ ಒಬ್ಬಳನ್ನು ಕಂಡು ಆಕೆಯ ಬಳಿ "ನನ್ನ ಜೊತೆಯಾಗುವೆಯ?" ಎಂದು ಕೇಳಿದಾಗ ಆಕೆ ಹೀಗೆಂದು ಉತ್ತರಿಸುತ್ತಾಳೆ:
          "ಶಾಂತ, ದಯಾಮಯಿ ಕಣ್ಣುಗಳನ್ನುಳ್ಳ, ಸುಂದರವಾದ ಮೈಯುಳ್ಳ ರಾಜನೇನು ನೀನಲ್ಲ. ಸಪ್ತಸಾಗರಗಳನ್ನು ನೀನು ನನಗೋಸ್ಕರ ದಾಟಿ ಬಂದಿಲ್ಲ. ಹೀಗಿರುವಾಗ ನನ್ನಂತಹ ಸುಂದರವಾದ ಹುಡುಗಿಯೊಬ್ಬಳು ನಿನ್ನನ್ನು ಯಾಕೆ ಒಪ್ಪಿಕೊಳ್ಳಬೇಕು?"
          "ಯಾವುದೇ ಒಂದು ಮಾರ್ಗವನ್ನಾಗಲೀ, ಒಂದೇ ಬಾರಿಯಲ್ಲಿ ಕ್ರಮಿಸುವುದು ಅಸಾಧ್ಯವೆಂಬುದು ನಿನಗೆ ತಿಳಿದಿಲ್ಲ. ನಿನ್ನನ್ನು ಹಿಂಬದಿಯಿಂದ ಬಳಸಿ ಹಿಡಿದು, ಕಿವಿಯಲ್ಲೇನೋ ಪಿಸುದನಿಯಲ್ಲಿ ಮಾತಾಡುತ್ತ ನಿನ್ನೊಡನೆ ಯಾವ ಗಂಡೂ ಬರುತ್ತಿಲ್ಲ. ನಿನ್ನ ಸ್ತನಗಳು ರವಿಕೆಯೊಳಗೆ ಸಂಯಮದಿಂದಿದ್ದರೂ ನಿನ್ನ ತೊಡೆ ಮತ್ತು ಸೊಂಟಗಳು ನಿನ್ನ ಮಾತನ್ನು ಕೇಳುತ್ತಿಲ್ಲ. ಕಾಲಕ್ಕೆ ತಕ್ಕುದಾದ ಉಡುಗೆಯನ್ನು ಧರಿಸದೆ ನೀನು ಆಪತ್ತನ್ನು ಆಹ್ವಾನಿಸಿಯೂ ನಗುತ್ತಲಿರುವೆ."
          "ಹೌದು, ನಾವಿಬ್ಬರೂ ಸರಿಯಾಗಿಯೇ ಇದ್ದೇವೆ. ಆದರೆ ಅದನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಸುತ್ತ ಕೂರುವ ಬದಲು ನಮ್ಮ ದಾರಿ ನಾವ್ಯಾಕೆ ಹಿಡಿಯಬಾರದು?"
ವ್ಯಾಪಾರಿ

          ಕೆಲವರಾದರೂ ನನಗೋಸ್ಕರ ದುಃಖಿಸಿರಬಹುದು, ಆದರೆ ನನ್ನ ಅರಿವಿಗದು ಬಂದಿಲ್ಲ. ನನ್ನ ಸಣ್ಣ ವ್ಯಾಪಾರವು ಈಗಾಗಲೇ ನೋವಿನಿಂದ ತಲೆ ಸಿಡಿದುಹೋಗುವಷ್ಟು ಆಲೋಚನೆಗಳನ್ನು ನನ್ನಲ್ಲಿ ತುಂಬಿದೆ. ಸುಖ ಮಾತ್ರ ಒಂದಿನಿತೂ ಇಲ್ಲ. ಯಾಕೆಂದರೆ ನನ್ನದು ಸಣ್ಣ ವ್ಯಾಪಾರ.
          ವ್ಯಾಪಾರಕ್ಕೆಂದು ಸರಕನ್ನು ಸಿದ್ಧಪಡಿಸುತ್ತ ನಾನು ತಾಸುಗಟ್ಟಲೆ ಕಳೆಯುತ್ತೇನೆ. ಕೆಲಸಗಾರರನ್ನು ಎಚ್ಚರಿಸುತ್ತ, ಮುಂದಿನ ವರ್ಷ ಜನ ಯಾವ ರೀತಿಯ ಉಡುಪು ಧರಿಸಬಹುದೆಂದು ಆಲೋಚಿಸುತ್ತ. ನನ್ನ ಪರಿಚಯದ ಜನರಲ್ಲ, ನಾಡಿನ ಯಾವುದೋ ಮೂಲೆಯ ರೈತಾಪಿ ಜನರು.
          ನನಗೆ ಪರಿಚಯವಿರದವರ ಬಳಿ ನನ್ನ ಹಣವಿರುತ್ತದೆ. ಅವರು ಯಾವ ಕೆಲಸ ಮಾಡುವರು, ಅವರ ಶಕುನಗಳು ಹೇಗಿವೆ ಎಂಬುದು ನನಗೆ ತಿಳಿದಿಲ್ಲ. ತಿಳಿದೀತಾದರೂ ಹೇಗೆ? ಅವರು ಭೂರಿ ಭೋಜನವನ್ನು ಸವಿಯುತ್ತಿರಬಹುದು. ಅಥವಾ ಖುಷಿಯಿಂದ ವಿದೇಶಕ್ಕೆ ಪ್ರಯಾಣಿಸುತ್ತಿರಬಹುದು.
          ದಿನದ ವ್ಯಾಪಾರವನ್ನು ಮುಗಿಸಿ ಅಂಗಡಿಯ ಕದ ಮುಚ್ಚುವಾಗ ಈ ವ್ಯಾಪಾರವು ನನ್ನೆದುರಿಗಿಡುವ ಎಂದಿಗೂ ಮುಗಿಯದ ಬೇಡಿಕೆಗಳ ಯಾದಿ ಕಣ್ಣೆದುರಿಗೆ ನಿಲ್ಲುತ್ತದೆ. ಹಾಗೂ ಬೆಳಿಗ್ಗೆ ನಾನೇ ಹೊಡೆದೋಡಿಸಿದ್ದ ಉತ್ಸಾಹ ಅಲೆಯಂತೆ ಹಿಂದಿರುಗಿ ನನ್ನನ್ನು ಗುರಿಯಿಲ್ಲದೆ ಕರೆದೊಯ್ಯುತ್ತದೆ.
          ಆದರೆ ಈ ಉದ್ವೇಗದಿಂದ ಯಾವುದೇ ಉಪಯೋಗವಿಲ್ಲ. ನನ್ನ ಕೊಳಕಾದ, ಬೆವರಾದ ಮುಖವನ್ನು ಹೊತ್ತು, ಕಲೆಯಾದ, ಧೂಳು ಕೂತ ಉಡುಪಿನಲ್ಲಿ, ಕೊಳಕು ಟೋಪಿಯನ್ನು ಧರಿಸಿ, ಹರಿದುಹೋದ ಚಪ್ಪಲಿಯನ್ನು ಮೆಟ್ಟಿ ನಾನು ಮನೆಯತ್ತ ನಡೆಯುತ್ತೇನೆ, ಅಲೆಯೊಂದರೊಡನೆ ತೇಲಿ ಹೋದಂತೆ ಆಚೀಚೆ ಕೈಯಾಡಿಸುತ್ತ. ದಾರಿಯಲ್ಲಿ ಚಿಕ್ಕ ಮಕ್ಕಳ್ಯಾರಾದರೂ ಸಿಕ್ಕರೆ ಅವರ ತಲೆ ನೇವರಿಸುತ್ತೇನೆ.
          ಆದರೆ ದಾರಿ ಚಿಕ್ಕದು. ಬಹುಬೇಗ ನನ್ನ ಮನೆಯಿರುವ ಕಟ್ಟಡ ತಲುಪಿಬಿಡುತ್ತೇನೆ. ಲಿಫ್ಟಿನ ಬಾಗಿಲು ಸರಿಸಿ ಒಳಗಡಿಯಿಡುತ್ತೇನೆ.
          ಧಿಡೀರನೆ ನಾನು ಒಬ್ಬಂಟಿಯೆಂಬ ಯೋಚನೆ ನನ್ನ ತಲೆಯಲ್ಲಿ ಸುಳಿಯುತ್ತದೆ. ಮೆಟ್ಟಿಲು ಹತ್ತಿ ಮೇಲಕ್ಕೇರುವ ಉಳಿದವರು ಏದುಸಿರು ಬಿಡುತ್ತ ಸಾವರಿಸಿಕೊಳ್ಳಲು ಯಾವುದಾದರೊಂದು ಮನೆಯ ಮುಂದೆ ನಿಂತು, ನೀರು ಕುಡಿದು, ಮಾತನಾಡಿ ಮುಂದುವರಿದು ಹಲವು ಗಾಜಿನ ಬಾಗಿಲುಗಳನ್ನು ದಾಟಿ ತಮ್ಮ ತಮ್ಮ ಮನೆಯೊಳ ಹೊಕ್ಕು ತಾವೂ ಒಬ್ಬಂಟಿಗಳೆಂಬ ಅರಿವಿಗೊಳಗಾಗುತ್ತಾರೆ.
           ಲಿಫ್ಟಿನೊಳಗೆ ನಾನೊಬ್ಬ ಮಾತ್ರ ಇದ್ದೇನೆ. ಮೆಲ್ಲಗೆ ಲಿಫ್ಟು ಚಲಿಸಲಾರಂಭಿಸಿದಂತೆ ಗಾಜಿನ ಕಿಟಕಿಯೊಳಗಿನಿಂದ ಹೊರಗೆ ದೃಷ್ಟಿ ಬೀರುತ್ತ ಹೇಳುತ್ತೇನೆ :
          "ಸಾಕು ಸುಮ್ಮನಿರು ಈಗ. ಆ ಮರದ ನೆರಳಿನಲ್ಲಿ, ಅಥವಾ ಕಿಟಕಿಯ ಪರದೆಯ ಹಿಂದೆ, ಅಥವಾ ಕೈದೋಟದಲ್ಲಿನ ಹೂಕುಂಡದಲ್ಲಿ ನೀನು ಮಾಡಬಯಸುವುದಾದರೋ ಏನು?"
          ಮನಸಿನೊಳಗೆ ನಾನು ಇದನ್ನು ಹೇಳಿಕೊಳ್ಳುತ್ತಿರುವಾಗಲೇ ಕಿಟಕಿಯ ಗಾಜಿನಾಚೆ ಕೆಳಸರಿದ ಮೆಟ್ಟಿಲಿನ ಸಾಲು ಹರಿವ ನೀರಿನಂತೆ ತೋರುತ್ತದೆ.
          "ಹಾರು ಹಾಗಾದರೆ, ನಾನು ಹಿಂದೆಂದೂ ನೋಡಿರದ ನಿನ್ನ ರೆಕ್ಕೆಗಳನ್ನು ಬಿಚ್ಚು. ಬಹುದೂರ ಎಲ್ಲಾದರೂ ಹಾರಿಹೋಗು, ಅದೇ ನಿನ್ನಿಚ್ಛೆಯಾದರೆ..."
          "ಅದೋ ನೋಡು. ಮೆರವಣಿಗೆ. ಮೂರು ದಿಕ್ಕುಗಳಿಂದ ಬರುತ್ತಿದ್ದಾರೆ ಜನ. ಹಾಗೇ ಒಂದು ಕಡೆ ಸಂಧಿಸಿದ ಈ ಮೆರವಣಿಗೆಗಳು ಸದ್ದಿಲ್ಲದೇ ಸರಿದು ಹೋಗಿವೆ. ಅದೋ! ಅಲ್ಲೊಬ್ಬಳು ಸುಂದರ ಹೆಣ್ಣಿದ್ದಾಳೆ. ಅವಳೆಡೆಗೆ ಕೈಬೀಸಿ ಒಮ್ಮೆ ನಗು."
"ಮರದ ಸೇತುವೆಯಲ್ಲಿ ಹೊಳೆಯನ್ನು ದಾಟು. ಈಜುತ್ತಿರುವ ಮಕ್ಕಳೆಡೆಗೊಮ್ಮೆ ನೋಡಿ ತಲೆದೂಗು. ಅದೇನದು... ದೂರದಲ್ಲಿ? ಸಾವಿರ ಯೋಧರನ್ನು ತುಂಬಿಕೊಂಡ ಯುದ್ಧನೌಕೆಯೇ?!"
          "ಮುಂದೆ ನಡೆಯುತ್ತಿರುವ ಕುಬ್ಜನನ್ನು ಹಿಂಬಾಲಿಸು. ಜನನಿಬಿಡ ಮೂಲೆಯೊಂದರಲ್ಲಿ ಅವನನ್ನು ದೋಚು. ಮತ್ತು ಶಕ್ತಿಹೀನನಾದ ಕುಬ್ಜನು ದುಃಖದಿಂದ ಹೋಗುತ್ತಿರುವುದನ್ನು ಜೇಬಿನಲ್ಲಿ ಕೈಹಾಕಿ ನಿಂತು ನೋಡು."
          "ಕುದುರೆಗಳ ಖುರಪುಟದ ಸದ್ದು ಕೇಳುತ್ತಿದೆ. ನಿನ್ನನ್ನು ಹುಡುಕಿಕೊಂಡು ಪೊಲೀಸರು ಬರುತ್ತಿರಬೇಕು. ಬರಲಿ. ನೀನು ಮರೆಯಲ್ಲಿ ನಿಂತಿದ್ದೀಯ. ಖಾಲಿ ಬೀದಿಗಳನ್ನು ನೋಡಿ ಖೇದಗೊಂಡ ಪೊಲೀಸರು ಈಗ ವಾಪಸ್ಸು ಹೋಗುತ್ತಿದ್ದಾರೆ."
          ಈಗ ನಾನು ಲಿಫ್ಟಿನಿಂದ ಹೊರಬಂದು ಮನೆಯ ಕರೆಗಂಟೆಯನ್ನು ಒತ್ತಬೇಕು. ಕೆಲಸದಾಕೆ ಬಾಗಿಲು ತೆರೆಯುತ್ತಾಳೆ.
ದಾರಿಹೋಕರು

          ನೀವು ಹೀಗೇ ಒಂದು ರಾತ್ರಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರ ಎಂದುಕೊಳ್ಳಿ. ಆಗ ನಿಮ್ಮೆದುರಿಗಿನ ಏರನ್ನು ಇಳಿದು ಯಾವನೋ ಒಬ್ಬ ನಿಮ್ಮ ಕಡೆಗೇ ಓಡೋಡಿ ಬರುತ್ತಿರುವುದು ಶುಭ್ರವಾಗಿ ಬೆಳಗಿದ ಚಂದ್ರನ ಬೆಳಕಿನಲ್ಲಿ ನಿಮಗೆ ಕಾಣುತ್ತದೆ. ಆಗ ನೀವು ಅವನನ್ನು ತಡೆದು ನಿಲ್ಲಿಸುವುದಿಲ್ಲ, ಬೇಕಾದರೆ ಅವನು ಎಷ್ಟೇ ದಯನೀಯ ಸ್ಥಿತಿಯಲ್ಲಿರಲಿ, ಬೇಕಾದರೆ ಇನ್ಯಾರೋ ಒಬ್ಬ ಅಟ್ಟಿಸಿಕೊಂಡು ಬರುತ್ತಿರುವುದರಿಂದ ಆತ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿರಲಿ. ಬದಲಾಗಿ ಅವನನ್ನು ಹಾಗೆಯೇ ಓಡಲು ಬಿಡುತ್ತೀರಿ.
          ಯಾಕೆಂದರೆ ಈಗ ರಾತ್ರಿಯ ಸಮಯ. ರಸ್ತೆ ಏರುಪೇರಾಗಿದೆ. ಮೇಲಾಗಿ ಅವರಿಬ್ಬರೂ ಕೇವಲ ತಮಾಷೆಗಾಗಿ ಹೀಗೆ ಓಡುತ್ತಿರಬಹುದು, ಅಥವಾ ಅವರಿಬ್ಬರೂ ಸೇರಿ ಮೂರನೆಯವನನ್ನು ಅಟ್ಟಿಸಿಕೊಂಡು ಹೋಗುತ್ತಿರಬಹುದು, ಅಥವಾ ಮುಂದೆ ಇರುವವನನ್ನು ಹಿಂದಿನವ ಕೊಲ್ಲಲೆಂದು ಹೊರಟಿರಬಹುದು, ನಾನ್ಯಾಕೆ ಮಧ್ಯ ಹೋಗಿ ಸಿಕ್ಕಿಬೀಳಲಿ? ಬಹುಶಃ ಅವರಿಬ್ಬರಿಗೂ ಯಾವ ಸಂಬಂಧವೂ ಇಲ್ಲದೆ, ತಮ್ಮ ಪಾಡಿಗೆ ತಾವು ಮನೆ ಸೇರಿ ಮಲಗಲೆಂದು ಓಡುತ್ತಿರಬಹುದು. ಅವರು ನಿಶಾಚರಿಗಳಿರಬಹುದು, ಅವರ ಬಳಿ ಆಯುಧವಿರಬಹುದು.
          ಅದೆಲ್ಲ ಇರಲಿ. ನಿಮಗೆ ಜಾಸ್ತಿ ಸುಸ್ತಾದಂತಿದೆಯಲ್ಲವೇ? ನೀವು ಇಂದು ಬಹಳ ಕುಡಿದಿರೋ ಏನೋ? ಅಬ್ಬ! ಅವರಿಬ್ಬರೂ ಈಗ ನಿಮ್ಮ ಕಣ್ಣಿಗೆ ಕಾಣದಷ್ಟು ದೂರವಾಗಿದ್ದಾರೆ. ಸಮಾಧಾನ ನಿಮಗೀಗ.
ಬಸ್ಸಿನೊಳಗೆ

          ನಾನು ಬಸ್ಸಿನ ಹಿಂಭಾಗದಲ್ಲಿ ನಿಂತಿದ್ದೇನೆ. ಕಾಲ್ಗಳನ್ನು ಎಲ್ಲಿಟ್ಟಿದ್ದೇನೆ ಎಂಬುದರ ಖಾತ್ರಿ ನನಗಿಲ್ಲ. ನಾನು ಯಾವ ದಿಕ್ಕಿನಲ್ಲಿ ಹೊರಟಿದ್ದೇನೆ ಎಂದೂ ನನಗೆ ಸೂಚಿಸುತ್ತಿಲ್ಲ. ಮೇಲಿನಿಂದ ಜೋತಾಡುತ್ತಿರುವ ಈ ಹಗ್ಗದ ಈ ಚೂರನ್ನು ಹಿಡಿದು ನಿಂತಿರುವ ನಾನು ಸುರಕ್ಷಿತನೆಂದು ನನಗನ್ನಿಸುತ್ತಿಲ್ಲ. ಬಸ್ಸಿಗೆ ದಾರಿ ಮಾಡಿಕೊಟ್ಟು ಆಚೀಚೆ ಸರಿಯುತ್ತಿರುವ ಜನರಿಗೋ, ಅಥವಾ ಕಿಟಕಿಯ ಗಾಜಿನಿನದಾಚೆ ಎವೆಯಿಕ್ಕದೆ ನೋಡುತ್ತಿರುವ ಜನರಿಗೋ ರಕ್ಷಣೆ ಕೊಡಬಲ್ಲೆನೆಂದೂ ನಾನು ಹೇಳಲಾರೆ. ಅವರು ನನ್ನಿಂದ ರಕ್ಷಣೆಯನ್ನು ಬಯಸಿಯೂ ಇಲ್ಲ, ಆ ವಿಷಯ ಬೇರೆ.
          ಬಸ್ಸು ಮುಂದಿನ ನಿಲ್ದಾಣ ತಲುಪುತ್ತಲೇ ಹುಡುಗಿಯೋರ್ವಳು ಇಳಿಯಲು ತಯಾರಾಗಿ ಬಾಗಿಲ ಬಳಿ ಬರುತ್ತಿದ್ದಾಳೆ. ಅವಳನ್ನು ನೋಡುತ್ತಲೇ 'ಮೊದಲೆಲ್ಲೋ ಈಕೆಯನ್ನು ನೋಡಿದ್ದೇನೆ, ಈಕೆಯ ಮೈದಡವಿದ್ದೇನೆ' ಎಂಬ ಆಲೋಚನೆ ನನ್ನ ತಲೆಯಲ್ಲಿ ಸುಳಿಯುತ್ತಿದೆ. ಅವಳು ಕಪ್ಪು ಬಣ್ಣದ ದಿರಿಸಿನಲ್ಲಿದ್ದಾಳೆ. ಅವಳ ಲಂಗದ ನೆರಿಗೆಗಳು ಅಲ್ಲಾಡುತ್ತಿಲ್ಲ, ಬಿಳಿ ಕಾಲರಿನ ಆಕೆಯ ರವಿಕೆ ಬಿಗಿಯಾಗಿದೆ. ಎಡಗೈಯಲ್ಲಿ ಬಸ್ಸಿನ ಬಾಗಿಲನ್ನು ಹಿಡಿದು, ಬಲಗೈಯಲ್ಲಿನ ಛತ್ರಿಯನ್ನು ಮೆಟ್ಟಿಲಿನ ಮೇಲೆ ಊರಿದ್ದಾಳೆ. ಕಂದು ಬಣ್ಣದ ಮುಖದ ಅವಳ ಮೂಗು ಬದಿಯಲ್ಲಿ ಸೆಟೆದುಕೊಂಡು ತುದಿಯಲ್ಲಿ ಅಗಲವಾಗಿಯೂ, ಗೋಳವಾಗಿಯೂ ಇದೆ. ಅವಳ ಕೂದಲು ಕೂಡ ಕಂದು ಬಣ್ಣದ್ದೇ, ಹಣೆಯ ಬದಿಯಲ್ಲಿ ಮುಂಗುರುಳು ಹಾರಿದೆ. ಅವಳ ಕಿವಿಗಳು ಚಿಕ್ಕವೇ ಆದರೂ ನಾನೀಗ ಆಕೆಗೆ ಬಹಳ ಸಮೀಪದಲ್ಲಿ ನಿಂತಿರುವುದರಿಂದ ಕಿವಿಯ ಸುರುಳಿಯೂ, ಬುಡದಲ್ಲಿನ ನೆರಳೂ ಕಾಣಿಸುತ್ತಿದೆ.
          ಆಗ ನನ್ನನು ನಾನು ಕೇಳಿಕೊಳ್ಳುತ್ತೇನೆ : ಅವಳ್ಯಾಕೆ ಇನ್ನೂ ಸುಮ್ಮನೆ ನಿಂತಿದ್ದಾಳೆ? ಅವಳಿಗ್ಯಾಕೆ ತನ್ನ ಕುರಿತು ಆಶ್ಚರ್ಯವಾಗುತ್ತಿಲ್ಲ?