Saturday 7 July 2012

ಮತ್ತೊಂದು ಲೇಖನ

ಈ ಲೇಖನ ಜೂನ್ 20ರಂದು ವಿಜಯವಾಣಿ ದಿನಪತ್ರಿಕೆಯ ಅದೇ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಯಿತು.ನೆನಪೊಂದೆ ಉಳಿಯುವುದು

                ಅಂತೂ ಸಿ.ಇ.ಟಿ ಪರೀಕ್ಷೆಯನ್ನು ಒಳ್ಳೆಯದು ಅನ್ನಬಹುದಾದಂತಹ ಒಂದು ರ್‍ಯಾಂಕಿನೊಂದಿಗೆ  ಪಾಸು ಮಾಡಿ ಕೌನ್ಸೆಲಿಂಗಿನಲ್ಲಿ ಆರ್.ಎನ್.ಎಸ್ ಎಂಜಿನಿಯರಿಂಗ್ ಕಾಲೇಜನ್ನೇ ಬೇಕೆಂದು ಆಯ್ದುಕೊಂಡು ಕಾಲೇಜಿನ ಜೊತೆಗೆ ಹಾಸ್ಟೆಲಿಗೂ ಅಡ್ಮಿಷನ್ ಮಾಡಿಸಿಯೇಬಿಟ್ಟೆ. ಸುಮಾರು ಒಂದು ವಾರದ ನಂತರ ಕಾಲೇಜು ಶುರುವಾಗಲಿತ್ತು. ಇನ್ನು ಹೀಗೆ ಫ್ರೀಯಾಗಿ ಇರಲು ಆಗುವುದೇ ಇಲ್ಲವೆಂಬಂತೆ ಊರಲ್ಲಿ ಮಜಾ ಮಾಡಿ ಸರಿಯಾಗಿ ಕಾಲೇಜು ಶುರುವಾಗುವ ದಿನ ಬೆಳಿಗ್ಗೆ ಎರಡನೇ ಬಾರಿ ಬೆಂಗಳೂರಿಗೆ ಕಾಲಿಟ್ಟಿದ್ದೆ. ಅಂದು ತಾರೀಖು ೧೬ನೇ ಸೆಪ್ಟೆಂಬರ್ ೨೦೦೮.
                ಮೆಜೆಸ್ಟಿಕ್ಕಿನಿಂದ ಒಂದು ಗಂಟೆ ಬಿ.ಎಂ.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸಿ ಎಂಟೂವರೆಗೆ ಹೆಗಲ ಮೇಲೊಂದು, ಕೈಲೆರಡು ಮಣಭಾರದ ಬ್ಯಾಗುಗಳನ್ನು ಹಿಡಿದು ಹಾಸ್ಟೆಲ್ ತಲುಪಿದೆ. "ತಗೊಳಪ್ಪ ಕೀ, ರೂಮ್ ನಂಬರ್ ೨೫" ಎನ್ನುತ್ತ ದಾರಿ ತೋರಿಸಿದರು ವಾರ್ಡನ್. ರೂಮಿನ ಹತ್ತಿರ ಬಂದು ನೋಡುತ್ತೇನೆ, ಬಾಗಿಲು ತೆರೆದೇ ಇದೆ. ರೂಮ್ ಮೇಟ್ಸ್ ಆಗಲೇ ಬಂದುಬಿಟ್ಟಿದ್ದಾರೆ ಎಂಬ ಅರಿವಾಯಿತು. ಒಳಬರುತ್ತಲೇ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಳ್ಳುತ್ತಿದ್ದವನೊಬ್ಬ "ಬಾರಪ್ಪಾ! ಯಾವ ಬ್ರಾಂಚ್? ಯಾವೂರು? ರ್‍ಯಾಂಕ್ ಎಷ್ಟು?" ಎಂದು ಪ್ರಶ್ನೆಗಳ ಮಳೆಗರೆದ. ಖಾಲಿ ಇದ್ದ ಮಂಚವೊಂದರ ಅಡಿಯಲ್ಲಿ ಬ್ಯಾಗುಗಳನ್ನು ಸರಿಸಿಡುತ್ತಾ ನಾನು ಅವನ ಪ್ರಶ್ನೆಗಳನ್ನೆಲ್ಲ ಒಂದೊಂದಾಗಿ ಉತ್ತರಿಸಿ "ನಿಮ್ಮ ಹೆಸರೇನು?" ಎಂದು ಕೇಳಿದೆ. "ವಿನೋದ್. ನಿಂದು?" ಆತ ಕೇಳಿದ. "ವಾಗೀಶ. ನಿಮ್ಮದು ಯಾವೂರು?" ಈ ಸಂಭಾಷಣೆ ಯಾವಾಗ ಮುಗಿಯುವುದೋ ಎಂಬ ಭಾವದಲ್ಲಿ ಕೇಳಿದೆ. "ನಾವು, ನೀವು ಅನ್ನಬೇಕಿಲ್ಲ, ರೂಮ್ ಮೇಟ್ಸ್ ಆದಮೇಲೆ ಅವೆಲ್ಲ ಯಾಕೆ? ಬಾಗಲಕೋಟೆ ನಂದು." ನನಗೀಗ ಸ್ವಲ್ಪ ಧೈರ್ಯ ಬಂತು. "ಕ್ಲಾಸುಗಳು ಶುರುವಾಗೋ ಹೊತ್ತಾಯಿತು. ನಾನು ಹೊರಡುತ್ತೇನೆ. ಕೆಳಗೆ ಮೆಸ್ ಇದೆ, ತಿಂಡಿ ಮಾಡು" ಎನ್ನುತ್ತ ಹೊರನಡೆದ ನನ್ನ ರೂಮ್ ಮೇಟ್ ವಿನೋದ.
                ಶಾಸ್ತ್ರಕ್ಕೆಂಬಂತೆ ಸ್ನಾನ ಮಾಡಿ ತಿಂಡಿ ಮುಗಿಸಿ ಬ್ಯಾಗು ಹೆಗಲಿಗೇರಿಸಿಕೊಂಡು ಓಡೋಡುತ್ತ ಕ್ಲಾಸ್ ರೂಮ್ ತಲುಪುವಷ್ಟರಲ್ಲಾಗಲೇ ಯಾರೋ ಕಲಿಸುತ್ತಿದ್ದರು ಒಳಗೆ. ನನ್ನಷ್ಟಕ್ಕೆ ನಾನು "ಎಕ್ಸ್ ಕ್ಯೂಸ್ ಮಿ ಸರ್" ಎಂದು ಅವರು ಅನುಮತಿ ನೀಡುವ ಮೊದಲೇ ಸೀದ ಹೋಗಿ ಕೊನೇ ಬೆಂಚಿನಲ್ಲಿ ಕುಳಿತೆ. ನನಗೆ ಇಂಗ್ಲೀಷಿನಲ್ಲಿ ಮಾತನಾಡಲು ಬರುವುದಿಲ್ಲ, ಪಕ್ಕ ಕುಳಿತವನು ಅಕಸ್ಮಾತ್ ಇಂಗ್ಲೀಷಿನಲ್ಲೇ ಮಾತಾಡಿದರೆ ಏನು ಮಾಡುವುದೆಂಬ ಅಳುಕಿತ್ತು. ಅದೃಷ್ಟವಶಾತ್ ಆತ ಉಡುಪಿ ಕಡೆಯವನಾಗಿದ್ದ. ಹಾಗಾಗಿ ಉತ್ತರ ಕನ್ನಡದವನಾದ ನನಗೆ ಕನ್ನಡ ಮಾತಾಡುವಲ್ಲಿಯೂ ಅನುಕೂಲವಾಯಿತು. ಆ ಪೀರಿಯಡ್ ಹಾಗೇ ಮುಗಿದು ಮತ್ತೊಬ್ಬ ಲೆಕ್ಚರರ್ ಒಳಬಂದು ಕಲಿಸಲಾರಂಭಿಸಿದರು. ನಾನು ಕಿಸೆಯಲ್ಲಿ ಒಮ್ಮೆ ಕೈಯಾಡಿಸಿದೆ. ಒಂದು ಚ್ಯೂಯಿಂಗ್ ಗಮ್ ಸಿಕ್ಕಿತು. ಅದನ್ನು ಬಾಯಲ್ಲಿಟ್ಟು ಅಗಿಯುತ್ತ ಬಲಗೈಯಲ್ಲಿ ಪೆನ್ನನ್ನು ಆಡಿಸುತ್ತಾ ಹಾಯಾಗಿ ಕಿಟಕಿಯಾಚೆ ನೋಡುತ್ತ ಕುಳಿತಿದ್ದೆ. "ಪರ್ಸನ್ ಸಿಟ್ಟಿಂಗ್ ಇನ್ ದ ಲಾಸ್ಟ್ ಬೆಂಚ್, ಕ್ಯಾನ್ ಯು ಪ್ಲೀಸ್ ಗೆಟ್ ಅಪ್?", ನಾನು ಥಟ್ಟನೆ ಎದ್ದುನಿಂತ ರಭಸಕ್ಕೆ ಕೈಯಲ್ಲಿದ್ದ ಪೆನ್ ಕೆಳಗೆ ಬಿದ್ದು ಆವರಿಸಿದ್ದ ನಿಶ್ಶಬ್ದವನ್ನು ಕಲಕಿತು. "ಬಾಯಲ್ಲಿರುವುದನ್ನು ಈಗಲೇ ಉಗಿದು ಬಾ." ಆಜ್ನಾಪಿಸಿದರು ಲೆಕ್ಚರರ್. ಕ್ಷಣವೂ ತಡಮಾಡದೆ ಹೊರಗೋಡಿದೆ. ಆದರೆ ರೆಸ್ಟ್ ರೂಮ್ ಹುಡುಕಿ ಚ್ಯೂಯಿಂಗ್ ಗಮ್ ಉಗಿದು ಬಾಯಿ ತೊಳೆದುಕೊಂಡು ಕ್ಲಾಸಿಗೆ ವಾಪಸ್ ಬರುವಷ್ಟರಲ್ಲಿ ನಮ್ಮ ಸರ್ರು ಹಾಜರಿ ತೆಗೆದುಕೊಂಡು ಹೋಗಿಯೇಬಿಟ್ಟಿದ್ದರು. ಮುಂದಿನ ಎರಡು ಪೀರಿಯಡ್ಡುಗಳು ಮತ್ತೇನೂ ಅವಘಡಗಳು ಘಟಿಸದೆ ಹಾಗೆಯೇ ಕಳೆದವು.
                ಕಾಲೇಜು ಮುಗಿಯುತ್ತಿದ್ದಂತೆಯೇ ಮೈದಾನದಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್, ಮುಂತಾದ ವಿವಿಧ ಆಟಗಳಲ್ಲಿ ಹುಡುಗರ ಗುಂಪುಗಳು ನಿರತವಾದವು. ನನಗೆ ಏನನ್ನೂ ಆಡುವ ಮನಸ್ಸಿಲ್ಲವಾಗಿದ್ದುದರಿಂದ ಹುಲ್ಲಿನ ಮೇಲೆ ಸೂರ್ಯಾಸ್ತವಾಗುವುದನ್ನು ನೋಡುತ್ತ ಕುಳಿತೆ. ನಂತರ ವಿನೋದನ ಜೊತೆ ಹೊರಗೆ ಹೋಗಿ ನಿತ್ಯಬಳಕೆಯ ಕೆಲ ವಸ್ತುಗಳನ್ನೂ, ಪುಸ್ತಕ-ನೋಟ್ ಬುಕ್ಕುಗಳನ್ನೂ ಕೊಂಡುಬಂದೆ. ರಾತ್ರಿ ಊಟ ಮುಗಿಸಿದಮೇಲೆ ಹಾಸ್ಟೆಲ್ಲಿನಲ್ಲಿ ನನ್ನದೇ ಬ್ಯಾಚಿನ ಮತ್ತಷ್ಟು ಹುಡುಗರ ಪರಿಚಯವಾಯಿತು. ಅವರಲ್ಲಿ ಕೆಲವರು ನನ್ನ ಜಿಲ್ಲೆಯವರೇ ಇದ್ದುದನ್ನು ತಿಳಿದು ನನಗೆ ಮತ್ತಷ್ಟು ಸಮಾಧಾನವೂ ಆಯಿತು. ಇನ್ನು ಕೆಲವು ದಿನಗಳಲ್ಲಿ ಸೀನಿಯರ್‍ಸ್ ರ್‍ಯಾಗಿಂಗಿಗೆ ಕರೆಯುವವರಿದ್ದಾರೆ ಎಂಬ ಸುದ್ದಿಯನ್ನೂ ಯಾರೋ ಕಿವಿಗೆ ಹಾಕಿದರು. ಆಗ ಸಮಾಧಾನದ ಜೊತೆಗೆ ಸಣ್ಣದಾಗಿ ಹೆದರಿಕೆಯೂ ಶುರುವಾಯಿತು. ಇದಕ್ಕೂ ಮೊದಲು ಹಾಸ್ಟೆಲ್ಲಿನಲ್ಲಿ ಇದ್ದೆನಾದರೂ ಈ ರ್‍ಯಾಗಿಂಗಿನ ಅನುಭವ ಇನ್ನೂ ಆಗಿರಲಿಲ್ಲ. ಹೆದರಿಕೆಯ ಜೊತೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಕುತೂಹಲವೂ ಇತ್ತೆನ್ನಿ. ಕಡೆಯದಾಗಿ ಮಲಗುವ ಮುನ್ನ ಮನೆಗೆ ಕರೆ ಮಾಡಿ ಅಪ್ಪ ಅಮ್ಮನೊಂದಿಗೆ ಮಾತನಾಡುತ್ತ "ಕಾಲೇಜು ಪರವಾಗಿಲ್ಲ, ಆರಿಸಿಕೊಂಡು ತಪ್ಪು ಮಾಡಲಿಲ್ಲ" ಎನ್ನುವಾಗ ಮೊದಲ ದಿನವನ್ನು ಯಶಸ್ವಿಯಾಗಿ ಮುಗಿಸಿದ ಧನ್ಯತಾಭಾವವಿತ್ತು.
                ಎಂಜಿನಿಯರಿಂಗಿನ ನಾಲ್ಕೂ ವರ್ಷಗಳನ್ನು ಮುಗಿಸಿ ಬರೋಬ್ಬರಿ ನಲವತ್ತೈದು ಪರೀಕ್ಷೆಗಳನ್ನು ಬರೆದು ಅವುಗಳಲ್ಲಿ ನಾಲ್ಕರ ಫಲಿತಾಂಶವನ್ನು ಎದುರುನೋಡುತ್ತಿದ್ದೇನೆ. ಆದರೆ ಮೊದಲ ದಿನದ ನೆನಪು ಮನದಲ್ಲಿ ಇನ್ನೂ ಹಚ್ಚ ಹಸಿರು. ಬೀತೆ ಪಲ್ ಫಿರ್ ನಹೀ ಆಯೆಂಗೆ.


ಜಾಗದ ಅಭಾವದಿಂದ ದುರದೃಷ್ಟವಶಾತ್ ಈ ಲೇಖನದ ಮೊದಲ ಅರ್ಧಭಾಗವಷ್ಟೇ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೇನಾಯಿತು? ಬ್ಲಾಗಿನಲ್ಲಿ ಪೂರ್ಣವಾಗಿಯೇ ಪೋಸ್ಟ್ ಮಾಡುವ ಸ್ವಾತಂತ್ರ್ಯವಿದೆಯೆಂದು ನಂಬಿದ್ದೇನೆ. ಓದಿದ್ದಕ್ಕೆ ಧನ್ಯವಾದ. 

1 comment:

  1. ಯಾವುದೋ ಬ್ಲಾಗನ್ನು ಓದ್ತಾ ಓದ್ತಾ ನಿಮ್ಮ ಬ್ಲಾಗಿಗೂ ಬಂದೆ.
    ನಂಗೂ ನನ್ನ ಕಾಲೇಜಿನ ಮೊದಲ ದಿನದ ನೆನಪಾಯ್ತು.ಅಪರಿಚಿತರಾಗಿ ಬಂದು ಹೊರಡುವಾಗ ಒಂದಷ್ಟು ನೆನಪಿನ ಮೂಟೆಗಳು..ಮೊದ ಮೊದಲು ಎಲ್ಲರೂ ಅಪರಿಚಿತರಂತೆ ಅನಿಸಿದರೂ,ನಂತರ ಹತ್ತಿರವಾಗಿಬಿಡುತ್ತಾರೆ. ಅದರಲ್ಲೂ ನಮ್ಮದೇ ಜಿಲ್ಲೆಯವರು,ನಮ್ ಬದಿಯವ್ರು ಅಂದ್ರಂತೂ ಇನ್ನೂ ಬೇಗ ಕ್ಲೋಸಾಗಿಬಿಡ್ತಾರೆ.ಈ ನೆನಪುಗಳೇ ಹೀಗೆ. ಕಳೆದ ದಿನಗಳನ್ನು ಕಣ್ಮುಂದೆ ಕಟ್ಟಿಬಿಡುತ್ತೆ.ಮನಸ್ಸನ್ನು ತೋಯಿಸುತ್ತೆ.. ಮತ್ತಿನ್ನೆಂದೂ ಆ ದಿನಗಳು ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದೆನಿಸುತ್ತದೆ..

    ಖುಷಿಯಾಯ್ತು ನಿಮ್ಮ ನೆನಪುಗಳನ್ನು ಓದಿ.. ಹೀಗೆ ಬರೀತಾ ಇರಿ. :)

    ReplyDelete