Monday, 2 April 2012

ಮತ್ತೊಂದು ಕಥೆ.


ಪ್ರೀತಿಯೆಂಬುದು....

            ನಡುರಾತ್ರಿಗಿನ್ನೊಂದು ಐದು ನಿಮಿಷ ಬಾಕಿಯಿರಬಹುದು. ರಾಮಕೃಷ್ಣ ಕುಮಟೆಯಿಂದ ಹೊನ್ನಾವರಕ್ಕೆ ಹೊರಟ ಯಾವುದೋ ಎಕ್ಸ್ ಪ್ರೆಸ್ ಬಸ್ಸು ಹತ್ತಿ ಡ್ರೈವರನ ಹತ್ತಿರ ಕೇಳಿಕೊಂಡು ರಾಮತೀರ್ಥದಲ್ಲೇ ಇಳಿದು ಭಸಭಸನೆ ನಡೆಯಲು ಶುರುಮಾಡಿ ಆಗಲೆ ಮುಕ್ಕಾಲು ಗಂಟೆಯ ಮೇಲಾಗಿತ್ತು. ಮನೆ ಇನ್ನೇನು ಒಂದು ಕಿಲೋಮೀಟರ್ ಬಾಕಿ ಇರಬಹುದಷ್ಟೆ. ಇವತ್ತು ಗೆದ್ದದ್ದೆಷ್ಟು, ಬೇರೆಬೇರೆ ಖರ್ಚಾದಮೇಲೆ ಉಳಿದದ್ದೆಷ್ಟು ಎಂದು ನೋಟುಗಳನ್ನು ಕಿಸೆಯಿಂದ ತೆಗೆದು ಕತ್ತಲೆಯಲ್ಲೇ ಐದನೇ ಬಾರಿ ಲೆಕ್ಕಾಚಾರ ಮಾಡಿದ. ಹೀಗೆ ವಾರಕ್ಕೆರಡುಮೂರು ದಿನ ಕುಮಟೆಯ ಕ್ಲಬ್ಬಿಗೆ ಇಸ್ಪೀಟಾಡಲು ಹೋಗುತ್ತಿದ್ದ ರಾಮಕೃಷ್ಣ ಇವತ್ತಂತೂ ಭಾರೀ ಲಾಭದ ಮೇಲೇ ಇದ್ದ. ಹೆಚ್ಚುಕಮ್ಮಿ ಒಂದೂವರೆ ಸಾವಿರ ರೂಪಾಯಿ. ಹೊಗುವಾಗ ಕೈಲಿದ್ದದ್ದು ಇನ್ನೂರು. ಅಷ್ಟಷ್ಟು ದಿವಸಕ್ಕೊಮ್ಮೆ ಲುಕ್ಸಾನು ಅನುಭವಿಸಿದರೂ ಇತ್ತೀಚೆಗೆ ಹೆಚ್ಚಾಗಿ ಆಟ ಕೈಗೆ ಹತ್ತುತ್ತಿದ್ದರಿಂದಾಗಿಯೇ ನಮ್ಮ ರಾಮಕೃಷ್ಣ ರಾಮಕೃಷ್ಣ ಹೋಗಲಾಗಿ ಕ್ಲಬ್ಬಿನಲ್ಲೆಲ್ಲ ಆರ್ ಕೆ ಹೆಗಡೆಯವರಾಗಿ ಪ್ರಸಿದ್ಧನಾಗತೊಡಗಿದ್ದು ಮತ್ತು ತಿಂಗಳಿಗೊಂದಾವರ್ತಿ ವಾರಕ್ಕೆರಡು ಸರ್ತಿಯಾಗಿದ್ದು.
            ರಾಮಕೃಷ್ಣನದು ಹೇಳಿಕೊಳ್ಳುವಷ್ಟೇನೂ ಆಸ್ತಿ ಹೊಂದಿರದ ಮಧ್ಯಮ ವರ್ಗದ ಒಂದು ಅವಿಭಾಜ್ಯ ಕುಟುಂಬ. ಅಪ್ಪ ಕಾಲವಾದಮೇಲೆ ತಾನೇ ಪಾಲಿನ ತಕರಾರೆತ್ತಿದರೂ ಅಣ್ಣ ಸುರೇಶನ ಕುತಂತ್ರದಿಂದಾಗಿ ಪಂಚಾಯಿತಿಗೆಯು ಪಾಲುಮಾಡುವ ನಿರ್ಣಯದಲ್ಲದೆ ಕೇವಲ ಸಣ್ಣಮಟ್ಟದ ಚಾಪಾರ್ಟಿಯಾಗಿ ಕೊನೆಗೊಂಡಿದ್ದನ್ನು ಕಂಡು ಬೇಸತ್ತಿದ್ದ. ಎಲ್ಲರೂ ಆದಂತೆ ಮದುವೆಯೊಂದನ್ನಾಗಿ ಎರಡು ಮಕ್ಕಳನ್ನೂ ಮಾಡಿದ್ದ. ಹೆಂಡತಿ ಜಲಜೆ, ಹಿರಿಮಗಳು ಅಖಿಲಾ, ಕಿರಿಯವಳು ನಿಖಿಲಾ. ನಿಜಹೇಳಬೇಕೆಂದರೆ ಪಾಲಿನ ಮಾತೆತ್ತಲು ಕುಮ್ಮಕ್ಕು ಕೊಟ್ಟವಳು ಜಲಜೆಯೇ ಎಂದು ಕೇರಿಯ ಕೆಲವರ ಅನುಮಾನ. ಒಟ್ಟಾರೆ ವಿಷಯವಿಷ್ಟೆ, ಆತನಿಗೆ ತನ್ನದೇ ಆದ ಬೇರೆ ಆದಾಯ ಅಂತ ಒಂದಿರಲಿಲ್ಲ. ಆದ್ದರಿಂದಲೇ ಮೊದಲಿನಿಂದಲೂ ಹೊಸಾಕುಳಿ ತೇರಿನಲ್ಲಿ ಜುಗಾರಿ ಆಡಿ ಇದ್ದ ಅನುಭವವನ್ನು ನಂಬಿಕೊಂಡು ಆತ ರಾತ್ರಿಗಳಲ್ಲಿ ಕುಮಟೆ ಬಸ್ಸು ಹತ್ತಲಾರಂಭಿಸಿದ.
            ರಾಮಕೃಷ್ಣ ಅವನಿಗನ್ನಿಸಿದಂತೆ ಕತ್ತಲಿಗೆ ಅಷ್ಟೇನು ಹೆದರುವವನಲ್ಲ, ಆದರೂ ಮೂರುಸಂಜೆಯ ವೇಳೆ ಮನೆಯಿಂದ ಒಂದು ಸೂಡಿ ಕಟ್ಟಿಕೊಂಡೇ ಹೊರಡುವುದು ಅಭ್ಯಾಸವಾಗಿಬಿಟ್ಟಿತ್ತು. ಸಂತೆಗುಳಿಯಲ್ಲಿ ಬಸ್ಸು ಹತ್ತುವ ಜಾಗದ ಬಳಿಯ ಹಿಂಡಿನ ಬದಿಯಲ್ಲಿ ಬಿಸಾಕಿಟ್ಟ ಅದನ್ನು ವಾಪಸ್ಸು ಬರುವಾಗ ಹೊತ್ತಿಸಿಕೊಂಡು ಬರುತ್ತಿದ್ದ. ಇಂದೂ ಕೂಡ ಹಾಗೆಯೇ ತಂದ ಸೂಡಿಯು ಸಮಾ ಮನೆಯೆದುರು ತಲುಪುವಷ್ಟರಲ್ಲಿ ಆರಿಹೋಗಿತ್ತು. "ಖರ್ಮ ತೀರಿತು ಇದರದ್ದು!" ಎನ್ನುತ್ತ ದಣಪೆ ದಾಟುತ್ತಿದ್ದಂತೆ ಪಕ್ಕದಲ್ಲಿದ್ದ ತೋಟದಲ್ಲಿ ಎಂತದೋ ಓಡಾಡಿದಂತೆ ಸರಭರ ಎಂದು ಸದ್ದಾಯಿತು. "ಸುಟ್ಟ ಹಂದಿಯದ್ದೇ ಕೆಲಸ", ಅಂಗಳ ತಲುಪಿ ಕಾಲಿಗೆ ನೀರುಬಿಟ್ಟುಕೊಳ್ಳುತ್ತ ಈ ಹಂದಿ ಸಮಸ್ಯೆಗೊಂದು ಪರಿಹಾರ ಆಲೋಚಿಸತೊಡಗಿದ. ವಿಪರೀತವಾಗಿತ್ತು ಇತ್ತೀಚೆಗಂತೂ, ಅಡಿಕೆಮರಕ್ಕೆ ಹಬ್ಬಿದ ಎಲೆಬಳ್ಳಿಗಳ ಬೇರುಗಳನ್ನು ಚೂರು ಬಿಡದೆ ಕಿತ್ತುಬಿಸಾಕುತ್ತಿದ್ದವು ಹಂದಿಗಳು. ಹೀಗಾದರೆ ಮಾರುವುದಕ್ಕೆ ಹೋಗಲಿ ಮನೆಯಲ್ಲಿ ಕವಳ ಹಾಕಲಿಕ್ಕೂ ಎಲೆ ಸಿಗುವುದು ಕಷ್ಟವಿತ್ತು.
            ಮಾರನೇ ದಿನ ಬೆಳಿಗ್ಗೆ ರಾಮಕೃಷ್ಣ ತೋಟಕ್ಕೆ ಹೋದವ ಹಾಗೆ ಪಕ್ಕದ ಗೌಡರಕೇರಿಯ ಗಳಿಯಣ್ಣನ ಮನೆಯ ಕಡೆ ನಡೆದ. "ವಡಿದೀರು ಆರಾಮಾ?", ಕೇಳುತ್ತ ಗಳಿಯಣ್ಣ ಬಾಳೆಚೂರಿನಲ್ಲಿ ಅವನ ಹೆಂಡತಿ ತಂದಿಟ್ಟ ಬಾಳೆಹಣ್ಣು ಸಕ್ಕರೆಯನ್ನು ಮುಂದುಮಾಡಿದ. ಅವನಿಗೆ ಗೊತ್ತಿತ್ತು, ಹೆಗಡೇರು ಯಾವುದೇ ಮುಖ್ಯವಾದ ಕೆಲಸವಿಲ್ಲದೆ ತನ್ನ ಮನೆಗೆಲ್ಲ ಬರುವವರಲ್ಲ ಎಂದು. ವಿಷಯವೇನೆಂದು ಕೇಳುವ ಮೊದಲೇ ಮಾತಿಗಿಟ್ಟುಕೊಂಡ ರಾಮಕೃಷ್ಣ, "ಹಂದಿಕಾಟ ಸಿಕ್ಕಾಪಟ್ಟೆ ಆಗಿದೆ ಮಾರಾಯ ಈಗಿತ್ಲಾಗೆ, ಕೋವಿ ವ್ಯವಸ್ಥೆ ಮಾಡಿದರೆ ಬಂದು ಹೊಡೆದುಕೊಡುತ್ತೀಯಾ ಹೇಗೆ?", ಕೇಳಿದ ಬಾಳೆಹಣ್ಣನ್ನು ಸುಲಿಯುತ್ತ. ಗಳಿಯಣ್ಣ "ನೀವು ಕೇಳುವುದು ಹೆಚ್ಚಾ ನಾನು ಬರುವುದಾ? ಇವತ್ತು ರಾತ್ರಿಯೇ ಕೆಲಸ ಮುಗಿಸಿಬಿಡುವ" ಎಂದು ತನ್ನ ಸಮ್ಮತಿ ಸೂಚಿಸಿದ. ಅಲ್ಲಿಗೆ ಹಂದಿಬೇಟೆ ಕಾರ್ಯಕ್ರಮದ ಮೊದಲ ಹಂತ ಮುಗಿದಂತೆ. ಕಮತೀರ ಮನೆಯಲ್ಲಿ ಕೋವಿಯಿದೆ. ಕೋವಿಯೆಂದರೆ ತೋಟಾಕೋವಿಯಲ್ಲ, ಶೆಲ್ಲಿನದು. ಸೈನಿಕರು ಬಳಸುತ್ತಾರಲ್ಲ, ಅಂಥದ್ದು. ಒಂದೇ ಹೊಡೆತ, ಯಾವ ಹಂದಿಯಾದರೂ ಸತ್ತುರುಳಬೇಕು, ಹಾಗಿತ್ತು ಅದರ ಪ್ರಭಾವ. ಹೊಡೆದ ಹಂದಿಯ ಮಾಂಸದಲ್ಲಿ ತನಗೊಂದು ಸಣ್ಣ ಪಾಲು ಹಾಗು ಕೋವಿ ಗುಂಡಿನ ಖರ್ಚು ತನ್ನ ಕೈಮುಟ್ಟುವುದು ಖಾತ್ರಿಯಾದಮೇಲೆ ಮಾತ್ರ ಮಾಲಿಕನಾದ ರಾಮಚಂದ್ರ ಕಮತಿ ಕೋವಿಯನ್ನು ಬಳಸಲು ಬಿಡುವುದು. ಮಧ್ಯಾಹ್ನದ ಊಟ ಮುಗಿಸಿ ಅವನ ಮನೆಗೆ ಹೋಗಿದ್ದ ರಾಮಕೃಷ್ಣ ಸುಮಾರುಹೊತ್ತಿನ ಮಾತುಕತೆಯ ಮೇಲೆ ಕೋವಿಯನ್ನು ಹೊತ್ತುಕೊಂಡೇ ವಾಪಸು ಬಂದಿದ್ದ.
             ಸೂರ್ಯ ಕಂತಿದ. ಕರೆಂಟಿರುವವರ ಮನೆಯಲ್ಲಿ ಟ್ಯೂಬುಲೈಟುಗಳು ಮತ್ತು ಬಲ್ಬುಗಳೂ, ಇಲ್ಲದವರ ಮನೆಯಲ್ಲಿ ಸೀಮೆಎಣ್ಣೆ ಬುರುಡೆಗಳೂ ಬೆಳಗಿದವು. ಹೇಳಿದ ಸಮಯಕ್ಕೆ ಸರಿಯಾಗಿ ಗಳಿಯಣ್ಣ ರಾಮಕೃಷ್ಣನ ಮನೆಗೆ ಬಂದ. ಅವನ ಊಟ ಅವರ ಮನೆಯಲ್ಲೇ ಆಯಿತು. ವಿಷಯ ಅಷ್ಟುಹೊತ್ತಿಗೆ ಸುರೇಶನಿಗೂ ತಿಳಿದಿತ್ತು. ಸಮ್ಮತಿಯಿಂದೆಂಬಂತೆ ಊಟವಾದಮೇಲೆ ತಾನೇ ಗಳಿಯಣ್ಣನಿಗೆ ಕವಳ ಕೊಡುತ್ತ "ಹೊಡೆದ ಹಂದಿಯನ್ನು ಅಲ್ಲೇ ಮನೆಗೆ ತೆಗೆದುಕೊಂಡು ಹೋಗಿಬಿಡು, ರಗಳೆ ಮುಗಿದುಹೋಗಲಿ" ಎಂದ. "ಹಾಂಗೆ ಆಗಲಿ ವಡೆಯಾ", ಕೋವಿಯನ್ನು ಹೆಗಲಿಗೇರಿಸಿ, ಅಂಡಿನ ಬಳ್ಳಿಗೆ ಕತ್ತಿಯನ್ನು ಸಿಗಿಸಿಕೊಂಡು ಮತ್ತೆರಡು ಕವಳಕ್ಕಾಗುವಷ್ಟು ಎಲೆ ಅಡಿಕೆ ತೆಗೆದುಕೊಂಡು ಅಂಗಳ ದಾಟಿ ಕತ್ತಲೆಯಲ್ಲಿ ಕರಗಿ ನಡೆದ.
            ರಾತ್ರಿ ಏನು ನಡೆಯಿತೋ ದೇವರಿಗೇ ಗೊತ್ತು, ಬೆಳಗಾಗುವಷ್ಟರಲ್ಲಿ ಗಳಿಯಣ್ಣನ ಹೆಣ ಹಳ್ಳದ ಬದಿಯಲ್ಲಿ ಅನಾಥವಾಗಿ ಬಿದ್ದಿತ್ತು. ಕೋವಿಯಿಂದ ಹಾರಿದ ಗುಂಡಿನ ಕುರುಹಾಗಿ ಶೆಲ್ಲಿನ ಮೇಲಿನ ಸಿಪ್ಪೆ ಹೆಣದ ಪಕ್ಕದಲ್ಲಿ ಬಿದ್ದಿತ್ತು. ಆದರೆ ಹಂದಿಯ ಸುಳಿವಿಲ್ಲ, ತೋಟದಲ್ಲೆಲ್ಲೂ ಹಂದಿಯ ಹೆಜ್ಜೆಗುರುತೂ ಇಲ್ಲ. ಹಾಗಾದರೆ ಗಳಿಯಣ್ಣ ತನಗೆ ತಾನೇ ಗುಂಡಿಟ್ಟುಕೊಂಡನೇ? ಇಲ್ಲ, ಅವನ ಮೈಮೇಲೆ ಯಾವುದೇ ಗಾಯವಾದಹಾಗಿಲ್ಲ. ಆಗಿದ್ದು ಆಗಿಯಾಯಿತು, ಸತ್ತವನು ಹಿಂದಿರುಗಿ ಬರಲಾರ. ಅವನ ಹೆಂಡತಿ ಹುಚ್ಚು ಹಿಡಿದವಳಂತೆ ರೋದಿಸಿದ್ದಳು, ಮಗಳು ಭುವನೆಯನ್ನುದ್ದೇಶಿಸಿ "ಹೋದನಲ್ಲೇ, ನಿನ್ನಪ್ಪ ಹೇಳುವವನೊಬ್ಬ ಹೋದನಲ್ಲೇ" ಎಂದು ಪದೇಪದೇ ಕಿರುಚುತ್ತ. ಅಪ್ಪ ಹೋಗಿದ್ದಕ್ಕೆ ಆಕೆಗೆ ಅಷ್ಟೇನೂ ದುಃಖವಾಗಿರಲಿಲ್ಲ, ಆದರೂ ಅಳದೇಹೋದರೆ ಅವ್ವಿಗೆ ದುಃಖವಾಗಬಹುದೆಂದು ಹೆದರಿ ನಾಲ್ಕು ಹನಿ ಕಣ್ಣೀರನ್ನು ತಾನೂ ಚೆಲ್ಲಿದ್ದಳು. ಒಟ್ಟಾರೆ ಸಾವಿನ ಹೊಣೆಗಾರ ಪಾಪದ ರಾಮಕೃಷ್ಣನಾದ. ಸಹಜವಾಗಿ ಕನಿಕರವೂ ಉಕ್ಕಿತ್ತು ಅವನಿಗೆ. ಸುರೇಶನೂ ಒಪ್ಪಿಕೊಂಡಮೇಲೆ ಧನಸಹಾಯ ಅಂತ ಎಷ್ಟೋ ಒಂದಿಷ್ಟು ದುಡ್ಡೂ ಕೊಟ್ಟಾಯಿತು. ಗಳಿಯಣ್ಣ ಸತ್ತ ಮೇಲೆ ಸಂಸಾರದ ಸ್ಥಿತಿಗತಿ ಹೇಗಿದೆ ಎಂದು ನೋಡಿಕೊಂಡು ಬರಲು ಹಾಗು ಸ್ವಲ್ಪ ಸಾಂತ್ವನದ ಮಾತಾಡಿಬರಲು ಸುರೇಶನ ಮಗ ಲಕ್ಷ್ಮೀನಾರಾಯಣ ಅಷ್ಟಷ್ಟು ದಿನಕ್ಕೊಮ್ಮೆ ಹೋಗಿಬರುವುದೆಂದು ಮನೆಯಲ್ಲಿ ಆಗ್ರಹವಾಗಿದ್ದು ಈ ಕೆಲಸ ಆತನಿಗೆ ಮೊದಮೊದಲು ಬೇಜಾರು ತರಿಸಿದ್ದರೂ ಈಗೀಗ ಅವರ ಮನೆಗೆ ಹೋಗದಿದ್ದರೆ ಬೇಜಾರು ಬರುವಂತಾಗಿತ್ತು. ಇದಕ್ಕೆಲ್ಲ ಕಾರಣ ಅವನ ಮತ್ತು ಭುವನೆಯ ನಡುವೆ ಹುಟ್ಟಿಕೊಂಡ ಪ್ರೇಮವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಪ್ರೇಮ ಕರುಣೆಯಿಂದ ಹುಟ್ಟಿತೇ ಅಥವ ಬೇರೆ ಯಾವುದರಿಂದಲಾದರೂ ಇರಬಹುದೇ ಎಂದು ಲಕ್ಷ್ಮೀನಾರಾಯಣ ತಲೆಕೆಡಿಸಿಕೊಂಡವನಲ್ಲ. ಹೊನ್ನಾವರದ ಟಾಕೀಸಿನಲ್ಲಿ ನೋಡಿದ ಪಿಕ್ಚರುಗಳಲ್ಲಿನಂತೆಯೇ ಆಕೆಯನ್ನು ಪವಿತ್ರವಾಗಿ ಪ್ರೇಮಿಸಿದ್ದನಷ್ಟೆ.
            ಈ ನಮ್ಮ ಲಕ್ಷ್ಮೀನಾರಾಯಣನೂ ಮತ್ತು ಭುವನೆಯೂ ಎರಡನೆ ವರ್ಷದ ಪೀಯೂಸಿ. ಅರೆಅಂಗಡಿ ಜ್ಯೂನಿಯರ್ ಕಾಲೇಜಿನಲ್ಲಿ ಒಟ್ಟಿಗೇ ಓದುತ್ತಿದ್ದರು. ಗಳಿಯಣ್ಣ ಅವನ ಜಾತಿಯ ಉಳಿದವರಿಗೆ ಹೋಲಿಸಿದರೆ ಬೆಳವಣಿಗೆಯ ಹಾದಿಯಲ್ಲಿ ಸ್ವಲ್ಪ ಮುಂದಿದ್ದ. ಕಲಿತು ತನ್ನ ಮಗಳು ಏನು ಮಾಡಬೇಕೆಂಬ ಅರಿವು ಆತನಿಗೆ ಬಾರದೆ ಇದ್ದರೂ ಒಡೆಯರ ಮನೆ ಮಕ್ಕಳು ಕಾಲೇಜಿಗೆ ಹೋಗುವುದನ್ನು ನೋಡಿ ಪ್ರೇರಿತಗೊಂಡಿದ್ದ. ಆದರೆ ತನ್ನ ಕನಸು ಸಾಕಾರಗೊಳ್ಳುವುದೋ ಇಲ್ಲವೋ ನೋಡಲು ನಿಲ್ಲಲಿಲ್ಲ ಅಷ್ಟೆ. ಭುವನೆ ಸುರೂಪಿಯಲ್ಲದಿದ್ದರೂ ಕುರೂಪಿಯಂತೂ ಅಲ್ಲವಾಗಿದ್ದಳು. ಅಷ್ಟಕ್ಕೂ ಪ್ರೀತಿ ಯಾರಿಗಾದರೂ ಯಾರಮೇಲಾದರೂ ಯಾವಾಗಲಾದರೂ ಮೂಡಬಹುದು. ಅವನು ಬೆಳಿಗ್ಗೆ ಕಾಲೇಜಿಗೆ ಬರಬೇಕಾದರೆ ಬೇಣದಲ್ಲಿ ಕಾಸಿನಮರ ಹತ್ತಿ ಸೀತಾದಂಡೆಯನ್ನು ಕೊಯ್ದು ಅವಳಿಗೆ ತರುತ್ತಿದ್ದ. ಎರಡು ಪೀರಿಯಡ್ಡುಗಳು ಮುಗಿದಮೇಲೆ ಬಿಡುವ ವಿರಾಮದ ಸಮಯದಲ್ಲಿ ಅದು ಭುವನೆಯ ಮುಡಿಯಲ್ಲಿ ಕುಳಿತು ಅವಳ ಕಣ್ಣಿನೊಂದಿಗೆ ನಗುತ್ತಿತ್ತು. ಒಂದೊಂದು ದಿನ ಲಕ್ಷ್ಮೀನಾರಾಯಣ ಆಕೆಯನ್ನು ಸೈಕಲ್ ಮೇಲೆ ಡಬಲ್ ಮಾಡಿ ಸಂತೆಗುಳಿಯ ತನಕ ಕರೆದೊಯ್ಯುವುದೂ ಉಂಟು.
            ಹೀಗೆ ಪ್ರೀತಿಸಿ ಮುಂದೇನು ಮಾಡುತ್ತೇನೆಂಬ ಭವಿಷ್ಯದ ಆಲೋಚನೆ ಲಕ್ಷ್ಮೀನಾರಾಯಣನನ್ನು ಯಾವತ್ತೂ ಬಾಧಿಸಿದ್ದಿಲ್ಲ, ಸುಮ್ಮನೆ ಆತ ಆಕೆಯನ್ನೂ ಆಕೆ ಆತನನ್ನೂ ಉದ್ದಕ್ಕೆ ಪ್ರೀತಿಸಿಕೊಂಡು ಬಂದಿದ್ದರು. ಎಲ್ಲವೂ ಸಾಂಗವಾಗಿ ನಡೆದಿರಲು ಒಂದು ದಿನ ಲಕ್ಷ್ಮೀನಾರಾಯಣ ಸೀತಾದಂಡೆ ಕೊಯ್ಯುತ್ತಿರಬೇಕಾದರೆ ಅಲ್ಲೇ ಪಕ್ಕದಲ್ಲಿ ಸೊಪ್ಪು ಕೊಯ್ಯುತ್ತಿದ್ದ ಚಿಕ್ಕಪ್ಪ ರಾಮಕೃಷ್ಣ ಅದನ್ನು ನೋಡಿಬಿಟ್ಟ. ಸಣ್ಣವನಿರುವಾಗಿಂದಲೂ ನಾರಾಯಣನಿಗೆ ಅಪ್ಪಚ್ಚಿಯ ಜೊತೆ ಸಲಿಗೆ ಹೆಚ್ಚು. ಆದರೂ ಪ್ರೀತಿಯ ವಿಷಯವನ್ನದೇಕೋ ಮುಚ್ಚಿಟ್ಟಿದ್ದ. ಏನೂ ಕೇಳದಿದ್ದರೆ ಸಾಕಪ್ಪ ದೇವರೇ ಎಂದುಕೊಳ್ಳುತ್ತಿರುವಷ್ಟರಲ್ಲೇ "ಹುಡುಗಿ ಯಾರೋ ಕುಮಾರಕಂಠೀರವ?", ಕೇಳಿಯೇಬಿಟ್ಟ ಅಪ್ಪಚ್ಚಿ. ಇನ್ನು ಬೇರೆ ದಾರಿಯಿಲ್ಲವೆಂದುಕೊಂಡ ಉದಯೋನ್ಮುಖ ಪ್ರೇಮಿ ವೃತ್ತಾಂತವನ್ನು ಸವಿವರವಾಗಿ ಬಿಚ್ಚಿಟ್ಟ. "ಥತ್! ಎಂಥ ಕೆಲಸ ಮಾಡಿಕೊಂಡೆಯೋ... ತಡೆ ಸ್ವಲ್ಪ ಆಲೋಚನೆ ಮಾಡಿ ಇದಕ್ಕೊಂದು ಪರಿಹಾರ ಹುಡುಕುವಾ. ಈಗ ಬೇಡ, ಸಂಜೆ ಮಾತಾಡುವಾ" ಎಂದು ರಾಮಕೃಷ್ಣ ಅವನನ್ನು ಮನೆಗೊಯ್ಯಲೆಂದು ತಾನು ಕೊಯ್ದ ಉದ್ದ ದಂಡೆಯೊಂದನ್ನೂ ಅವನಿಗೇ ಕೊಟ್ಟುಕಳುಹಿಸಿದ.
            ಆ ಕ್ಷಣದಿಂದ ರಾಮಕೃಷ್ಣನಿಗೆ ಒಂದೇ ಆಲೋಚನೆಯಾಯಿತು. ಅಣ್ಣನಂತೂ ಇದಕ್ಕೆ ಒಪ್ಪುವವನಲ್ಲ, ವಿಷಯ ಗೊತ್ತಾದರೆ ದುರಂತವಾಗುತ್ತದೆ. ಜಾತಿ ಸಮಸ್ಯೆ ಇದ್ದದ್ದೇ, ಅದನ್ನು ನಿವಾರಿಸುವುದೂ ಆಗದ ಮಾತು. ಹಾಗೆಂದು ಹುಟ್ಟಿರುವ ಪ್ರೀತಿಯನ್ನು ಸಾಯಿಸಬಾರದು. ಕೂತಲ್ಲಿ ನಿಂತಲ್ಲಿ, ಉಣ್ಣುವಾಗ ಮಧ್ಯಾಹ್ನ ಮಲಗುವಾಗ, ಒಟ್ಟಿನಲ್ಲಿ ಅವನು ಹಣೆಯ ಮೇಲಿನ ಚಿಂತೆಯ ಗೆರೆಯೆರಡನ್ನು ಮಾಯಗೊಡಲೇ ಇಲ್ಲ. ಸಂಜೆಯಾಯಿತು. ನಾರಾಯಣ ಭುವನೆಯನ್ನು ಸೈಕಲ್ಲಿನಮೇಲೆ ಇವತ್ತು ಅವಳ ಮನೆಮೇಲಿನವರೆಗೂ ಬಿಟ್ಟುಬಂದಿದ್ದ. ಅದೇಕೋ ಪ್ರೀತಿ ಹೆಚ್ಚಾದಂತೆ ಭುವನೆಗೆ ಅನ್ನಿಸಿದ್ದರೂ ಒಳ್ಳೆಯದೇ ಆಯಿತೆಂದು ನಕ್ಕಿದ್ದಳು, ಅವಳು ಏಕೆ ನಕ್ಕಳೆಂದು ತಿಳಿದಂತೆ ಅವನು ನಕ್ಕಿದ್ದ.
            ರಾತ್ರಿ ಊಟವಾದಮೇಲೆ ತೋಟಕಾಯುವ ನೆಪದಿಂದ ಮನೆ ಹೊರಬಿದ್ದ ಚಿಕ್ಕಪ್ಪ ಮಗ ಇಬ್ಬರೂ ಮೋಳ ತಲುಪಿದ್ದರು. ಹೊರಟಾಗಿನಿಂದಲೂ ಇಬ್ಬರ ನಡುವೆ ಮಾತೇ ಇರಲಿಲ್ಲ. ರಾಮಕೃಷ್ಣ ಇನ್ನೂ ಆಲೋಚನೆಯಲ್ಲೇ ಎಂಬಂತೆ ಇದ್ದ. ಅಪ್ಪಚ್ಚಿಯ ಬಾಯಿಂದ ಒಂದಾದರೂ ಮಾತು ಹೊರಬೀಳಬಹುದೆಂದು ಕಾದು ಕಾದು ಸುಸ್ತಾದ ನಾರಾಯಣ ಕಡೆಗೂ ನಿದ್ರೆಗೆ ಶರಣಾಗಿದ್ದ. ಗಂಟೆ ಎಷ್ಟಾಗಿತ್ತೋ ಏನೋ, ತಲೆಯ ಹಿಂದೆ ಕೈಯಿಟ್ಟು ಅಡ್ಡಾಗಿದ್ದ ರಾಮಕೃಷ್ಣ ಫಕ್ಕನೆ ಎದ್ದುಕೂತು ನಾರಾಯಣನನ್ನು ತಟ್ಟತೊಡಗಿದ, "ಎದ್ದು ಸಾಯೋ, ನಿನಗೆ ಒಳ್ಳೇದಾಗಲಿ ಹೇಳಿ ನಾನು ತಲೆಬಿಸಿ ಮಾಡಿಕೊಂಡು ಕೂತಿದ್ದರೆ ವರಗುತ್ತಿರುವ ಚಂದ ನೋಡು!". ನಾರಾಯಣ ಎದ್ದುಕೂತು ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ವಿಷಯವೇನೆಂಬಂತೆ ನೋಡಿದ. "ನೀ ಎಂತ ಮಾಡುವುದು ಬೇಡ, ಸುಮ್ಮನೆ ಪ್ರೀತಿಯನ್ನು ಮುಂದುವರಿಸು... ನಾನಿದ್ದೀನೆ". ನಾರಾಯಣ, "........" ರಾಮಕೃಷ್ಣ, " ಹೆದರಬೇಡ, ಇನ್ನೊಂದೆರಡು ವರ್ಷವಾದಮೇಲೆ ಮನೆಬಿಟ್ಟು ಓಡಿಹೋಗಿಬಿಡಿ. ದುಡ್ಡು ಎಷ್ಟು ಬೇಕು ನನ್ನನ್ನು ಕೇಳು. ಈಗೀಗ ಆಟ ಕೈಗೆ ಹತ್ತುತ್ತಿದೆ. ಇಸ್ಪೀಟಿನಲ್ಲಿ ಬಂದ ದುಡ್ಡನ್ನೆಲ್ಲ ನಿನ್ನ ಲೆಕ್ಕಕ್ಕೆ ಬ್ಯಾಂಕಿನಲ್ಲಿಡುತ್ತೇನೆ, ಹೆದರಬೇಡ"

2 comments: