Wednesday 18 February 2015

ಇನ್ನೊಂದಿಷ್ಟು ಕಾಫ್ಕಾ ಕಥೆಗಳು

          ಈಗ ಕೆಲ ತಿಂಗಳ ಹಿಂದೆ ಒಂದಿಷ್ಟು ಚಿಕ್ಕ ಚಿಕ್ಕ ಕಾಫ್ಕಾ ಕಥೆಗಳ ಅನುವಾದ ಮಾಡಿ ಪೋಸ್ಟ್ ಮಾಡಿದ್ದೆ. ಎಷ್ಟು ಜನ ಓದಿದರೋ ಗೊತ್ತಿಲ್ಲ. ಹಿಂದೆ ಓದಿ, ಒಂದೊಮ್ಮೆ ಮತ್ತೂ ಓದಬೇಕು ಎನಿಸಿದಲ್ಲಿ, ಅಥವಾ ಈಗ ಓದಬೇಕು ಎನಿಸಿದಲ್ಲಿ, ಇನ್ನೊಂದಿಷ್ಟು ಇಲ್ಲಿವೆ.ನ್ಯಾಯದೆದುರಲ್ಲಿ

          ನ್ಯಾಯದ ಮನೆಯ ಬಾಗಿಲಲ್ಲಿ ಕಾವಲುಗಾರನೊಬ್ಬ ನಿಂತಿದ್ದಾನೆ. ದೂರದ ಹಳ್ಳಿಗನೊಬ್ಬ ಕಾವಲುಗಾರನಲ್ಲಿಗೆ ಬಂದು ಒಳಪ್ರವೇಶಿಸಲು ಅನುಮತಿ ಕೇಳಿದ. ಆದರೆ ಕಾವಲುಗಾರ ಈ ಕ್ಷಣದಲ್ಲಿ ಪ್ರವೇಶಕ್ಕೆ ಅನುಮತಿಯಿಲ್ಲವೆಂದ. ಹಳ್ಳಿಗ ಒಮ್ಮೆ ಯೋಚಿಸಿ ಸ್ವಲ್ಪ ಸಮಯದ ನಂತರ ಒಳಹೋಗಬಹುದೇ ಎಂದು ಕೇಳಲು ಕಾವಲುಗಾರ ಹೇಳುತ್ತಾನೆ, "ಸಾಧ್ಯತೆಗಳಿವೆ, ಆದರೆ ಈ ಕ್ಷಣದಲ್ಲಿಯಂತೂ ಇಲ್ಲವೇ ಇಲ್ಲ". ದ್ವಾರವನ್ನು ತೆರೆದೇ ಇಟ್ಟು ಕಾವಲುಗಾರನು ಬದಿಯಲ್ಲಿ ಸರಿದು ನಿಲ್ಲಲು ಹಳ್ಳಿಗ ಬಾಗಿಲ ಮೂಲಕ ಇಣುಕಿ ಮನೆಯ ಒಳಾಂಗಾಣದೆಡೆಗೆ ದೃಷ್ಟಿ ಹಾಯಿಸುತ್ತಾನೆ. ಅದನ್ನು ನೋಡಿದ ಕಾವಲುಗಾರನು ನಗುತ್ತ "ನಿನಗೆ ಒಳಹೋಗಲು ಅಷ್ಟು ಇಷ್ಟವಿದ್ದರೆ ನನ್ನ ನಿರಾಕರಣವನ್ನು ಧಿಕ್ಕರಿಸಿ ಹೋಗುವ ಪ್ರಯತ್ನ ಮಾಡು. ನೆನಪಿರಲಿ : ನಾನು ಶಕ್ತಿವಂತ. ಆದರೆ ನಾನು ಕಾವಲುಗಾರರೆಲ್ಲರಲ್ಲೂ ಅತಿ ಕಡಿಮೆ ಶಕ್ತಿವಂತ. ಒಂದೊಂದು ಹಜಾರವನ್ನು ದಾಟಿದಂತೆಯೂ ಹಿಂದಿನವನಿಗಿಂತ ಶಕ್ತಿವಂತನಾದ ಮತ್ತೊಬ್ಬ ಕಾವಲುಗಾರ ಎದುರಾಗುತ್ತಾನೆ. ಮೂರನೆಯ ಕಾವಲುಗಾರನಂತೂ ಎಷ್ಟು ಭಯಂಕರನಾಗಿದ್ದಾನೆಂದರೆ ನಾನೂ ಅವನನ್ನು ಕಣ್ಣೆತ್ತಿ ನೋಡಲಾರೆ". ಹಳ್ಳಿಗ ಇವೆಲ್ಲವನ್ನೂ ನಿರೀಕ್ಷಿಸಿರಲಿಲ್ಲ ; ನ್ಯಾಯವೆಂದರೆ ಎಲ್ಲರ ಕೈಗೆಟಕುವಂತಿರಬೇಕು ಎಂಬುದು ಅವನ ಯೋಚನೆಯಾಗಿತ್ತು. ಆದರೀಗ ದಪ್ಪ ಕೋಟು ಧರಿಸಿದ, ಚೂಪಾದ ಉದ್ದ ಮೂಗಿನ, ಕಪ್ಪನೆಯ ಗಡ್ಡದ ಕಾವಲುಗಾರನನ್ನು ಹತ್ತಿರದಿಂದ ನೋಡಿದ ನಂತರ ಕಾಯುವುದೇ ವಾಸಿಯೆಂದು ನಿರ್ಧರಿಸಿದ. ಕಾವಲುಗಾರ ಹಳ್ಳಿಗನಿಗೆ ಕುಳಿತುಕೊಳ್ಳಲು ಬಾಗಿಲ ಬದಿಯಲ್ಲೇ ಆಸನವೊಂದನ್ನು ಇಟ್ಟುಕೊಟ್ಟ. ಹಳ್ಳಿಗ ಕಾಯುತ್ತ ಕುಳಿತ, ದಿನಗಟ್ಟಲೆ, ವರ್ಷಗಟ್ಟಲೆ. ನಡುನಡುವೆ ಒಳನುಸಿಯಲು ಹಲವು ಬಾರಿ ಪ್ರಯತ್ನವನ್ನೆಸಗಿದ ಕೂಡ, ಕಾವಲುಗಾರನನ್ನು ಪರಿಪರಿಯಾಗಿ ಬೇಡಿಕೊಂಡ. ಕಾವಲುಗಾರ ಒಮ್ಮೊಮ್ಮೆ ಅವನೊಡನೆ ಮಾತನಾಡುತ್ತಾನೆ, ಅವನ ಮನೆ, ಊರಿನ ವಿಚಾರವಾಗಿ. ಆದರೆ ಈ ಪ್ರಶ್ನೆಗಳೆಲ್ಲವೂ ರಾಜರು ಪ್ರಜೆಗಳಲ್ಲಿ ಕೇಳುವ ಪ್ರಶ್ನೆಗಳಂತೆ ಅಸಡ್ಡೆಯಿಂದ ಕೂಡಿರುತ್ತವೆ, ಮತ್ತು ಈ ಮಾತುಕತೆಗಳೆಲ್ಲವೂ ಒಳಹೋಗಲು ನಿರಾಕರಣೆಯೊಂದಿಗೆ ಮುಗಿಯುತ್ತವೆ. ಹಳ್ಳಿಗನು ಯಾತ್ರಾರ್ಥವಾಗಿ ತನ್ನೊಡನೆ ತಂದಿದ್ದ ಎಲ್ಲ ವಸ್ತುಗಳನ್ನೂ ಲಂಚದ ರೂಪದಲ್ಲಿ ಕಾವಲುಗಾರನಿಗೆ ಒಪ್ಪಿಸಿಬಿಡುತ್ತಾನೆ. ಇವೆಲ್ಲವನ್ನೂ ಸ್ವೀಕರಿಸುತ್ತ ಕಾವಲುಗಾರ, "ನೀನು ನನ್ನನ್ನೊಲಿಸಲು ಯಾವುದೋ ಒಂದು ಪ್ರಯತ್ನವನ್ನು ಮಾಡದೆ ಬಿಟ್ಟುಬಿಟ್ಟೆ ಎಂಬ ಭಾವನೆ ನಿನ್ನಲ್ಲಿರದಿರಲಿ ಎಂಬ ದೃಷ್ಟಿಯಿಂದ ಇವೆಲ್ಲವನ್ನೂ ತೆಗೆದುಕೊಳ್ಳುತ್ತಿದ್ದೇನೆ" ಎನ್ನುತ್ತಾನೆ. ವರ್ಷಗಳುರುಳಿದಂತೆ ಹಳ್ಳಿಗ ಮೊದಲನೇ ಕಾವಲುಗಾರನನ್ನೇ ತೀವ್ರವಾಗಿ ಗಮನಿಸುತ್ತ ಉಳಿದವರನ್ನು ಮರೆತೇಬಿಡುತ್ತಾನೆ. ನ್ಯಾಯದ ಹಾದಿಯಲ್ಲಿ ಇವನೊಬ್ಬನೇ ತೊಡರು ಎಂದು ಭಾವಿಸಿಬಿಡುತ್ತಾನೆ. ಮೊದಮೊದಲು ತನ್ನ ದುರದೃಷ್ಟವನ್ನು ಜೋರಾಗಿ ಕೂಗುತ್ತಲೇ ಹಳಿದುಕೊಳ್ಳುತ್ತಿದ್ದವನು ಈಗ ಗೊಣಗುತ್ತಾನೆ ಅಷ್ಟೆ. ಮಕ್ಕಳಂತೆ ಆಡುತ್ತಾನೆ. ವರ್ಷಾನುಗಟ್ಟಲೆ ಕಾವಲುಗಾರನನ್ನು ನೋಡಿ, ಗಮನಿಸಿ, ಪರಿಶೀಲಿಸಿ, ಹಳ್ಳಿಗನಿಗೆ ಅವನ ಕೋಟಿನ ಕಾಲರಿನ ತುಪ್ಪಳದೊಳಗೆ ಅಡಗಿರುವ ಹೇನುಗಳ ಪರಿಚಯವೂ ಆಗಿಬಿಟ್ಟಿದೆ. ಅವನು ಆ ಹೇನುಗಳ ಬಳಿ ಕಾವಲುಗಾರನ ಮನವೊಲಿಸುವಲ್ಲಿ ತನಗೆ ಸಹಾಯ ಮಾಡಿರೆಂದು ಬೇಡಿಕೊಳ್ಳುತ್ತಾನೆ. ಈಗೀಗ ಅವನ ದೃಷ್ಟಿ ಕ್ಷೀಣಿಸುತ್ತಿದೆ, ಜಗತ್ತೇ ಕತ್ತಲೆಯಲ್ಲಿ ಮುಳುಗಿದೆಯೋ ಅಥವಾ ತನ್ನ ಕಣ್ಣುಗಳು ತನಗೆ ಮೋಸ ಮಾಡುತ್ತಿವೆಯೋ ತಿಳಿಯುತ್ತಿಲ್ಲ. ಆದರೂ ಅವನಿಗೆ ನ್ಯಾಯದ ದ್ವಾರದಿಂದ ಹೊಮ್ಮಿರುವ ಪ್ರಖರ ಪ್ರಭೆ ಗೋಚರಿಸುತ್ತಿದೆ. ಅವನು ಇನ್ನು ಬಹಳ ದಿನ ಬದುಕಲಾರ. ಸಾಯುವ ಮೊದಲು, ಅವನ ತಲೆಯಲ್ಲಿ ಇವಿಷ್ಟೂ ವರ್ಷಗಳ ಅನುಭವಗಳು ಸೇರಿ ಕಾವಲುಗಾರನನ್ನು ಇನ್ನೂ ಕೇಳಿರದ ಒಂದು ಪ್ರಶ್ನೆಯಾಗಿ ರೂಪುಗೊಳ್ಳುತ್ತವೆ. ಸೆಟೆದುಕೊಳ್ಳುತ್ತಿರುವ ತನ್ನ ದೇಹದ ಕಾರಣ ಎದ್ದು ಕೂರಲಾಗದೆ ಕಾವಲುಗಾರನನ್ನೇ ತನ್ನ ಬಳಿ ಕರೆಯುತ್ತಾನೆ. ಕಾವಲುಗಾರ ಹತ್ತಿರ ಬಂದು ಬಗ್ಗಿ, "ಈಗೇನು ತಿಳಿಯಬಸುತ್ತೀಯ?" ಎಂದು ಕೇಳಲು ಹಳ್ಳಿಗನು, "ಎಲ್ಲರೂ ನ್ಯಾಯವನ್ನು ತಲುಪಲು ಶ್ರಮಿಸುತ್ತಾರೆ. ಅಂಥದ್ದರಲ್ಲಿ ಇನ್ನುವರೆಗೂ ಒಳಹೋಗಲು ಅನುಮತಿ ಬೇಡಿ ನನ್ನನ್ನು ಬಿಟ್ಟು ಮತ್ತೊಬ್ಬ ಯಾಕೆ ಬಂದಿಲ್ಲ?" ಕಾವಲುಗಾರನಿಗೆ ಹಳ್ಳಿಗನ ಅಂತ್ಯ ಹತ್ತಿರವಾಗಿದೆ ಎಂಬ ಅರಿವಾಗಿ, ಶ್ರವಣಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಅವನ ಕಿವಿಯಲ್ಲಿ ಕೂಗಿ ಹೇಳುತ್ತಾನೆ, "ಬೇರೆ ಯಾರಿಗೂ ಈ ಬಾಗಿಲಲ್ಲಿ ಪ್ರವೇಶವಿಲ್ಲವಾಗಿತ್ತು. ಯಾಕೆಂದರೆ ಈ ಬಾಗಿಲನ್ನು ಕೇವಲ ನಿನಗಾಗಿ ನಿರ್ಮಿತವಾಗಿತ್ತು ಮತ್ತು ನಾನೀಗ ಅದನ್ನು ಮುಚ್ಚಲಿದ್ದೇನೆ"ಹೀಗೊಂದು ರಾಜಸಂದೇಶ

          ಅರಮನೆಯಿಂದ ಬಹುದೂರದಲ್ಲೆಲ್ಲೋ ತುಚ್ಛ ನೆರಳಿನಂತೆ ಅವಿತು ಕುಳಿತಿರುವ ವಿನಮ್ರ ಪ್ರಜೆಯೇ, ಮಹಾರಾಜರು ನಿನಗೊಂದು ಸಂದೇಶವನ್ನು ಕಳುಹಿಸಿದ್ದಾರೆಂದು ಸುದ್ದಿ ಹರಡಿದೆ. ಅವರು ತಮ್ಮ ಮರಣ ಶಯ್ಯೆಯಿಂದ ಕೇವಲ ನಿನಗಾಗಿ ಈ ಸಂದೇಶವನ್ನು ಕಳುಹಿಸಿದ್ದಾರೆ. ಸಂದೇಶಗಾರನನ್ನು ತಮ್ಮ ಹಾಸಿಗೆಯ ಪಕ್ಕ ಮಂಡಿಯೂರಿ ಕೂರಿಸಿ ಸಂದೇಶವನ್ನು ಆತನ ಕಿವಿಯಲ್ಲಿ ಉಸುರಿದ್ದಾರಂತೆ. ಇದರ ಬಗ್ಗೆ ಅವರು ಎಷ್ಟು ಎಚ್ಚರ ವಹಿಸಿದ್ದರಂತೆಂದರೆ ತಾವು ಹೇಳಿದ್ದನ್ನು ಪುನಃ ತಮ್ಮ ಕಿವಿಯಲ್ಲಿ ಹೇಳುವಂತೆ ಆಜ್ಞಾಪಿಸಿದರಂತೆ. ಹೌದು, ಅವರ ಸಾವಿಗೆ ಸಾಕ್ಷಿಯಾಗಿ ನಿಂತಿದ್ದ ಎಲ್ಲರ ಮುಂದೆ. ಅಂತಃಪುರದ ಗೋಡೆಗಳನ್ನು ಒಡೆದು ಸರ್ವರಿಗೂ ವೀಕ್ಷಣೆಯ ಅವಕಾಶ ಕಲ್ಪಿಸಲಾಗಿತ್ತಂತೆ, ರಾಜಕುಮಾರರೆಲ್ಲರೂ ವಿಶಾಲವಾದ ಮೆಟ್ಟಿಲುಗಳ ಮೇಲೆ ನಿಂತಿದ್ದರಂತೆ. ಪ್ರಬಲ, ದಣಿವರಿಯದ ಸಂದೇಶಗಾರ ಕೂಡಲೇ ಪ್ರಯಾಣಕ್ಕೆ ಅಣಿಯಾಗಿ ಹೊರಟಿದ್ದಾನೆ. ಅಗೋ! ಈಗ ಬಲಗೈ, ಈಗ ಎಡಗೈ ಮುನ್ನೂಕುತ್ತ ಜನಸಂದಣಿಯನ್ನು ಸೀಳಿ ಧಾವಿಸಿದ್ದಾನೆ. ದಾರಿಯಲ್ಲಿ ಯಾರಾದರೂ ಅಡ್ಡ ಬಂದರೆ ಆತ ತನ್ನ ಎದೆಯಮೇಲೆ ಮಿನುಗುತ್ತಿರುವ ಸೂರ್ಯನ ಚಿಹ್ನೆಯ ರಾಜಲಾಂಛನವನ್ನು ತೋರಿಸುತ್ತಾನೆ. ಈಗ ಅವನನ್ನು ಯಾರೂ ಏನೂ ಕೇಳರು. ಅವನು ಗಾಳಿಯಲ್ಲಿ ಹಾರಿ ಅರಮನೆಯನ್ನು ದಾಟಿ ಬಂದುಬಿಡುವಂತಿದ್ದರೆ ಈ ಹೊತ್ತಿಗಾಗಲೇ ನಿನ್ನ ಮನೆಯ ಬಾಗಿಲು ತಟ್ಟಿರುತ್ತಿದ್ದನೇನೋ. ಆದರೆ ಅವನ ಶಕ್ತಿ ವ್ಯರ್ಥವಾಗಿ ಕ್ಷಯಿಸುತ್ತಿದೆ. ಇನ್ನೂ ಅವನು ಎಲ್ಲಕ್ಕಿಂತ ಒಳಗಿನ ಅರಮನೆಯ ಕೋಣೆಯೊಂದನ್ನು ದಾಟುತ್ತಿದ್ದಾನೆ ಅಷ್ಟೇ. ಆದರೆ ಅವನು ಅದರಾಚೆ ಬರಲಾರ. ಅಕಸ್ಮಾತ್ ಬಂದರೂ ಏನೂ ಉಪಯೋಗವಿಲ್ಲ, ಆಂಗಣವನ್ನು ದಾಟಬೇಕು. ಅದರಾಚೆಗೆ ಎರಡನೇ ಅರಮನೆ. ಇನ್ನೊಂದು ಬಾರಿ ಮೆಟ್ಟಿಲುಗಳನ್ನು ಇಳಿದು ಅಂಗಳವನ್ನು ದಾಟಬೇಕು. ಮುಂದೆ ಮತ್ತೊಂದು ಅರಮನೆ. ಹೀಗೆ ಸಾವಿರಾರು ವರ್ಷಗಳು ಕಳೆದುಹೋಗಬಹುದು. ಅಂತೂ ಕೊನೆಗೊಮ್ಮೆ ಆತ ಎಲ್ಲಕ್ಕಿಂತ ಹೊರಗಿನ ದ್ವಾರವನ್ನು ಬೇಧಿಸಿ ಹೊರಬಂದನೆಂದುಕೊಳ್ಳಿ - ಅದು ಯಾವತ್ತೂ ಆಗುವ ಕೆಲಸವಲ್ಲ ಎಂಬುದು ನೆನಪಿರಲಿ - ಮುಂದೆ ಭೂಮಿಯ ಕೇಂದ್ರವಾದ, ಜನರಿಂದ ತುಂಬಿ ಸಿಡಿಯುತ್ತಿರುವ ರಾಜಧಾನಿಯಿದೆ. ಅದು ಯಾವನೇ ಆದರೂ, ಸತ್ತವನ ಸಂದೇಶವನ್ನು ಹೊತ್ತವನೇ ಆದರೂ ಇದನ್ನೆಲ್ಲ ಪಾರಾಗಿ ಹೊರಬರಲು ಅವನಿಗೆ ಸಾಧ್ಯವಿಲ್ಲ. ಆದರಿಲ್ಲಿ ನೀನು ಸಂಜೆಯಾಗುತ್ತಿದ್ದಂತೆ ಕಿಟಕಿಯ ಪಕ್ಕ ಕುಳಿತು ಕನಸು ಕಾಣುತ್ತಿದ್ದೀಯ.ಸಂತೋಷರಾಹಿತ್ಯ

          ನವೆಂಬರ್ ತಿಂಗಳ ಒಂದು ಸಂಜೆ. ತಾಳಲಾರದಷ್ಟು ಚಳಿಯಿತ್ತು. ಕೋಣೆಯಲ್ಲಿ ಹಾಸಿದ್ದ ಚಾಪೆಯ ಅಂಚಿನಗುಂಟ ಓಡಿದೆ, ಬೀದಿಯ ಬೆಳಕಿಗಿಂತ ಕಳಗೆ ತಗ್ಗಿ. ಒಳಗೋಡೆಯತ್ತ ತಿರುಗುತ್ತಿದ್ದಂತೆ ಥಟ್ಟನೆ ಏನೋ ಕಂಡಂತಾಗಿ ಜೋರಾಗಿ ಚೀರಿದೆ. ಆದರೆ ನನ್ನ ಧ್ವನಿಯೇ ನನಗೆ ಕೇಳಿತೆ ಹೊರತು ಅದರಿಂದ ಬೇರೇನೂ ಉಪಯೋಗವಾಗಲಿಲ್ಲ. ಮೌನವಾಗಿಯೇ ನನ್ನ ಚೀರು ಅಗಾಧವಾಗಿ ಬೆಳೆಯುತ್ತಿದೆಯೆನಿಸುತ್ತಿರುವಂತೆಯೇ ಕೋಣೆಯ ಬಾಗಿಲು ನನ್ನೆಡೆಗೆ ತೆರೆದುಕೊಂಡಿತು, ಮಿಂಚಿನ ವೇಗದಲ್ಲಿ, ಏಕೆಂದರೆ ಆಗ ವೇಗದ ಅವಶ್ಯಕತೆಯಿತ್ತು. ಕೆಳಗೆ ರಸ್ತೆಯಲ್ಲಿ ಕುದುರೆಗಾಡಿಯು ಕೂಡ ಯುದ್ಧೋತ್ಸಾಹದಲ್ಲೆಂಬಂತೆ ಗಾಳಿಯಲ್ಲಿ ಹಾರಿಯೇ  ಹೊರಟಿವೆಯೆನೋ.
          ಇನ್ನೇನು ದೀಪ ಬೆಳಗಬೇಕು ಎನ್ನುವಷ್ಟರಲ್ಲೇ ಭೂತದಂತೆ ಹುಡುಗಿಯೊಬ್ಬಳು ತೆರೆದ ಬಾಗಿಲಿನಿಂದ ನನ್ನೆಡೆಗೆ ಧಾವಿಸಿದಳು. ಮುಳುಗುತ್ತಿರುವ ಸೂರ್ಯನ ಕಿರಣಗಳ ಪ್ರಭೆಗೊಳಗಾದವಳಂತೆ ಒಮ್ಮೆ ಮುಖವನ್ನು ಮುಚ್ಚಿಕೊಂಡಂತೆ ಮಾಡಿದರೂ ಕೂಡಲೇ ಆಕೆ ಕೂಡಲೇ ತೆರೆದೇ ಇದ್ದ ಕಿಟಕಿಯ ಬದಿ ಹೋಗಿ ನಿಂತಳು, ಮುಖವನ್ನು ಗಾಳಿಗೊಡ್ಡಿ.
          ನಾನು ಅವಳೆಡೆಗೊಮ್ಮೆ ನೋಡಿ "ನಮಸ್ಕಾರ" ಎನ್ನುತ್ತ ಅಂಗಿಯನ್ನು ಮೈಮೇಲೇರಿಸಿ ದೀರ್ಘವಾದ ಉಸಿರನ್ನು ಹೊರಚೆಲ್ಲಿದೆ, ನನ್ನೊಳಗಿನ ಅಸಮಾಧಾನವನ್ನು ಹೊರಹಾಕಲೆಂಬಂತೆ. ಬಾಯಲ್ಲಿ ಏನೋ ಕಹಿಕಹಿ ಎನಿಸಿತು. ಕಣ್ರೆಪ್ಪೆಗಳು ತಂತಾನೆ ಫಡಫಡಿಸಲಾರಂಭಿಸಿದವು. ಆದರೆ ಅವೆಲ್ಲವುಗಳಿಂದ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು.
           ಆ ಹುಡುಗಿ ಅಲ್ಲೇ ನಿಂತಿದ್ದಳು, ಕಿಟಕಿಯಿಂದಾಚೆ ದೃಷ್ಟಿ ಬೀರಿ, ಕಿಟಕಿಗೆ ಕೂಡಿದ ಗೋಡೆಯ ಮೇಲೆ ಬಲಗೈಯನಿಟ್ಟು ಅದರ ಮೇಲೆ ತನ್ನ ತಲೆಯನ್ನು ಒರಗಿಸಿದ್ದಳು. ಆಕೆಯ ಕೆನ್ನೆ ಗುಲಾಬಿ ರಂಗಿನಲ್ಲಿ ಹೊಳೆದಿತ್ತು. ಸುಣ್ಣ ಬಳಿದ ಗೋಡೆಯ ಒರಟು ಮೈ ಆಕೆಯ ಬೆರಳ ತುದಿಯನ್ನು ತರಚಿತ್ತು. ನಾನು ಕೇಳಿದೆ, "ನೀನು ಹುಡುಕುತ್ತಿರುವುದು ನನ್ನನ್ನೇ ಹೌದೇನು? ಯಾವುದೇ ಪ್ರಮಾದವೇನು ಇಲ್ಲ ತಾನೇ? ಯಾಕೆಂದರೆ ಈ ದೊಡ್ಡ ಕಟ್ಟಡದಲ್ಲಿ ಹುಡುಕುವಲ್ಲಿ ತಪ್ಪುಗಳಾಗುವುದು ಸಹಜ. ನನ್ನನ್ನು 'ಇಂಥವನು' ಎಂದು ಕರೆಯುತ್ತಾರೆ ಮತ್ತು ನಾನು ಮೂರನೇ ಮಹಡಿಯಲ್ಲಿ ವಾಸಿಸುತ್ತೇನೆ. ಈಗ ಹೇಳು, ನೀನು ನನ್ನನ್ನೇ ಹುಡುಕುತ್ತಿರುವುದೇನು?"
"ಶ್... ಶ್..." ಆ ಹುಡುಗಿ ನನ್ನತ್ತ ತಿರುಗಿ ಹೇಳಿದಳು, "ಸುಮ್ಮನಿರು, ಅಂಥದ್ದೇನೂ ಇಲ್ಲ"
"ಹಾಗಾದರೆ ಇನ್ನೂ ಒಳಗೆ ಬಾ. ನಾನು ಬಾಗಿಲು ಸರಿಸುತ್ತೇನೆ"
"ನಾನು ಆಗಲೇ ಬಾಗಿಲು ಹಾಕಿದ್ದೇನೆ. ತಲೆಬಿಸಿ ಬೇಡ. ಆರಾಮಾಗಿ ಇರು"
"ತಲೆಬಿಸಿ ಎಂದಲ್ಲ. ಇದೇ ಆವಾರದಲ್ಲಿ ತುಂಬ ಜನ ವಾಸಿಸುತ್ತಾರೆ. ಹೌದು, ಅವರೆಲ್ಲರೂ ನನಗೆ ಗೊತ್ತು. ಹೆಚ್ಚಿನವರು ಕೆಲಸದಿಂದ ಹಿಂದಿರುಗುವ ಸಮಯವಾಗಿದೆ. ನನ್ನ ಕೋಣೆಯಿಂದ ಮಾತುಗಳು ಕೇಳಿಸಿದರೆ ಯಾರಾದರೂ ಬಾಗಿಲು ತೆರೆದು ಒಳಬಂದು ನೋಡಲೂಬಹುದು. ಅವರು ಹಾಗೇ. ದಿನದ ಕೆಲಸ ಮುಗಿದ ಮೇಲೆ ಯಾರ ಮಾತನ್ನೂ ಕೇಳಿ ನಡೆದುಕೊಳ್ಳಬೇಕೆಂಬ ಯೋಚನೆ ಅವರಲ್ಲಿ ಇರುವುದಿಲ್ಲ. ಇವೆಲ್ಲವೂ ನಿನಗೂ ಚೆನ್ನಾಗಿ ಗೊತ್ತು. ದಯವಿಟ್ಟು ಬಾಗಿಲು ಹಾಕಲು ಬಿಡು ನನ್ನ"
"ಅದರಿಂದ ಏನಾಗುತ್ತದೆ? ಇದೇ ಕಟ್ಟಡದ ಜನರೇ ಬಂದರೂ ನನಗೇನೂ ತೊಂದರೆಯಿಲ್ಲ. ಮೇಲಾಗಿ ಮೊದಲೇ ಹೇಳಿದಂತೆ ನಾನು ಬಾಗಿಲನ್ನು ಆಗಲೇ ಹಾಕಿದ್ದೇನೆ. ನಿನಗೊಬ್ಬನಿಗೇ ಬಾಗಿಲು ಹಾಕಲು ಬರುವುದೆಂದು ಅಂದುಕೊಂಡಿರುವೆಯೇನು? ಚಿಲಕವನ್ನೂ ಹಾಕಿದ್ದೇನೆ"
"ಒಳ್ಳೆಯದು ಬಿಡು. ಇನ್ನೂ ಹೆಚ್ಚಿನದೇನನ್ನೂ ಕೇಳುವುದಿಲ್ಲ. ಚಿಲಕ ಹಾಕುವ ಅವಶ್ಯಕತೆ ಇಲ್ಲವಾಗಿತ್ತು. ಈಗ ಹೇಳು. ನೀನು ನನ್ನ ಅತಿಥಿ. ನನ್ನನ್ನು ನೀನು ಸಂಪೂರ್ಣವಾಗಿ ನಂಬಬಹುದು. ನಿನ್ನದೇ ಮನೆಯೆಂದು ತಿಳಿ, ಹೆದರಬೇಡ. ಇರು ಅಥವಾ ಹೊರಡು ಎನ್ನುವ ಒತ್ತಾಯವಿಲ್ಲ. ಇದನ್ನೆಲ್ಲ ನಾನು ನಿನಗೆ ಹೇಳಬೇಕೇ? ಅಷ್ಟೂ ಪರಿಚಯವಿಲ್ಲವೇ ನಮ್ಮಲ್ಲಿ?"
"ಇಲ್ಲ. ನೀನು ಅದನ್ನೆಲ್ಲ ಹೇಳಬೇಕಿಲ್ಲ. ಈಗ ಹೇಳಿದ್ದನ್ನು ಹೇಳಬೇಕಾಗಿಯೂ ಇರಲಿಲ್ಲವಾಗಿತ್ತು. ನಾನು ಯಕಶ್ಚಿತ್ ಹುಡುಗಿಯಷ್ಟೇ. ನನಗೆ ಇಷ್ಟೊಂದು ಆದರವೇಕೆ?"
"ಹಾಗಲ್ಲ. ಹೌದು, ನೀನು ಹುಡುಗಿಯೇ. ಆದರೆ ಅಷ್ಟು ಚಿಕ್ಕ ಹುಡುಗಿಯೇನೂ ಅಲ್ಲ. ನೀನು ದೊಡ್ದವಳೇ. ಒಂದೊಮ್ಮೆ ಯುವತಿಯಾಗಿದ್ದರೆ ಹೀಗೆ ನನ್ನೊಡನೆ ಒಂದು ಕೋಣೆಯಲ್ಲಿ ಸುಮ್ಮನೆ ಬಂಧಿತಳಾಗುವ ಧೈರ್ಯ ಮಾಡುತ್ತಿರಲಿಲ್ಲವಾಗಿದ್ದೆ"
"ಅದರ ಬಗ್ಗೆ ಚಿಂತಿತನಾಗುವ ಅವಶ್ಯಕತೆಯಿಲ್ಲ. ನಾನು ಹೇಳುತ್ತಿರುವುದೇನೆಂದರೆ : ನಿನ್ನ ಬಗ್ಗೆ ತಿಳಿದಿರುವುದರಿಂದ ನನಗೆ ಲಾಭವೇನಿಲ್ಲ. ಅದರಿಂದ ನಿನಗೆ ನನ್ನೊಡನೆ ಮಾತನಾಡುವುದು ಸುಲಭವಾಗಬಹುದಷ್ಟೆ. ಅಷ್ಟಾಗಿಯೂ ನೀನು ನನಗೆ ಆದರ ತೋರಿಸುತ್ತಿದ್ದೀಯ. ಬೇಡ. ಬೇಡಿಕೊಳ್ಳುತ್ತೇನೆ, ಬೇಡ. ನನಗೆ ನಿನ್ನ ಬಗ್ಗೆ ಅಷ್ಟು ಸಂಪೂರ್ಣವಾಗಿಯೂ ಗೊತ್ತಿಲ್ಲ, ಅದೂ ಈ ಕತ್ತಲೆಯಲ್ಲಂತೂ ಇಲ್ಲವೇ ಇಲ್ಲ. ದೀಪ ಹೊತ್ತಿಸಿದರೆ ಚೆನ್ನಾಗಿರುತ್ತಿತ್ತೇನೋ. ಬೇಡ ಬಿಡು. ಯಾವುದಕ್ಕೂ ನೀನು ನನ್ನನ್ನು ಬೆದರಿಸುತ್ತಿದ್ದೀಯ ಎಂಬುದನ್ನು ನನ್ನ ಮನಸಿನಲ್ಲಿಟ್ಟುಕೊಳ್ಳುತ್ತೇನೆ"
"ಏನು? ನಾನು ನಿನ್ನನ್ನು ಬೆದರಿಸಬೇಕಾಗಿತ್ತೆ? ನೋಡು, ನೀನೂ ಕೊನೆಗೂ ಬಂದಿರುವಿಯೆಂದು ನಾನೆಷ್ಟು ಖುಷಿಗೊಂಡಿರುವೆ. 'ಕೊನೆಗೂ' ಎಂದು ಯಾಕೆ ಹೇಳುತ್ತಿದ್ದೇನೆಂದರೆ ಈಗಲೇ ಬಹಳಷ್ಟು ವಿಳಂಬವಾಗಿದೆ ಮತ್ತು ನೀನು ಯಾಕೆ ಇಷ್ಟು ತಡಮಾಡಿ ಬಂದಿರುವಿಯೆಂದು ನನಗೆ ತಿಳಿಯುತ್ತಿಲ್ಲ. ನಿನ್ನನ್ನು ಕಂಡ ಖುಷಿಯಲ್ಲಿ ನಾನು ಏನೇನೋ ಹಲುಬುತ್ತಿದ್ದೇನೆ, ಸರಿ. ಅದು ನಿನ್ನ ಹೆದರಿಕೆಗೆ ಕಾರಣವಾಗಿರಲೂಬಹುದು. ಆದರೆ ಜಗಳ ಬೇಡ, ದಯವಿಟ್ಟು. ಆ ತರಹದ ಯೋಚನೆಯಾದರೂ ನಿನ್ನ ತಲೆಯಲ್ಲಿ ಹೇಗೆ ಹುಟ್ಟುತ್ತದೆ? ನನ್ನಲ್ಲೇಕೆ ಅಷ್ಟು ಕಠೋರತನ? ಯಾಕೆ ಈ ಸುಂದರ ಕ್ಷಣವನ್ನು ಹಾಳುಗೆಡವಲು ಹವಣಿಸುತ್ತೀಯ? ಒಬ್ಬ ಆಗಂತುಕ ನಿನಗಿಂತ ಎಷ್ಟೋ ವಾಸಿಯೆನಿಸುತ್ತದೆ"
"ನಾನಿದನ್ನು ಒಪ್ಪುತ್ತೇನೆ. ಈ ವಿಷಯದಲ್ಲೇನೂ ಹೊಸತಿಲ್ಲ. ಯಾವುದೇ ಆಗಂತುಕನೂ ಸಹಜವಾಗಿ ನಿನಗೆ ಇಷ್ಟು ಹತ್ತಿರ ಬರಲಾರ. ನಿನಗದು ಗೊತ್ತಿದ್ದೂ ಈ ಗೋಳೇಕೆ? ಇದೇ ರೀತಿ ಅಸಂಬದ್ಧವಾಗಿ ಮಾತಾಡುತ್ತಿದ್ದರೆ ನಾನು ಹೊರಟುಹೋಗುತ್ತೇನೆ"
"ಏನು? ಹೀಗೆಲ್ಲ ಮಾತಾಡುವಷ್ಟು ಅಧಿಕಪ್ರಸಂಗಿಯೇ ನೀನು? ಉದ್ದಟತನವಾಯಿತು ಇದು. ನನ್ನ ಕೋಣೆಯಲ್ಲಿ ನೀನಿರುವುದು ಎಂಬ ನೆನಪಿರಲಿ. ನೀನು ಹುಚ್ಚಿಯಂತೆ ಬೆರಳುಜ್ಜುತ್ತಿರುವುದು ನನ್ನ ಗೋಡೆಯ ಮೇಲೆ ಎನ್ನುವುದು ನೆನಪಿರಲಿ. ನನ್ನ ಕೋಣೆ, ನನ್ನ ಗೋಡೆ! ನೀನು ಹೇಳುತ್ತಿರುವುದೇನು? ನನ್ನೊಡನೆ ಹೀಗೆ ಮಾತಾಡಲು ನಿನ್ನ ಸ್ವಭಾವ ಪ್ರೇರೇಪಿಸುತ್ತದೆಯೇ? ತಗೋ, ನನ್ನದೂ ಅದೇ ಸ್ವಭಾವ. ಈಗ ನನ್ನ ಸ್ವಭಾವವು ಸ್ನೇಹವನ್ನು ಬಯಸಿದರೆ ನಿನ್ನದೂ ಅಂತೆಯೇ ಇರಬೇಕು"
"ಇದು ಸ್ನೇಹ ಬಯಸುವವರು ಮಾತಾಡುವ ಪರಿಯೇ?"
"ನಾನು ಈ ಹಿಂದಿನದರ ಬಗ್ಗೆ ಮಾತಾಡುತ್ತಿದ್ದೇನೆ"
"ಈ ಮುಂದೆ ನನಗೆನಾಗಬಹುದು ಎಂದು ನಿನಗೆ ಗೊತ್ತಿದೆಯೇ?"
"ನನಗೇನೂ ಗೊತ್ತಿಲ್ಲ"
          ನಾನು ಹಾಸಿಗೆಯ ಬಳಿ ಹೋಗಿ ಪಕ್ಕದಲ್ಲಿರುವ ಟೇಬಲ್ಲಿನ ಮೇಲೆ ಮೋಂಬತ್ತಿಯೊಂದನ್ನು ಹೊತ್ತಿಸಿಟ್ಟೆ. ಆಗ ನನ್ನ ಕೋಣೆಯಲ್ಲಿ ವಿದ್ಯುದ್ದೀಪವಾಗಲೀ ಗ್ಯಾಸ್ ಲೈಟ್ ಆಗಲೀ ಇರಲಿಲ್ಲವಾಗಿತ್ತು. ನಂತರ ಬೇಸರ ಎನ್ನಿಸುವವರೆಗೂ ಅಲ್ಲಿಯೇ ಕೂತೆ. ಹಾಗೆಯೇ ಎದ್ದು ನಿಂತು ಕೋಟೇರಿಸಿ ಟೋಪಿ ಧರಿಸಿ ಮೋಂಬತ್ತಿಯನ್ನಾರಿಸಿದೆ. ಮುಂದೆ ಹೆಜ್ಜೆಯಿಡುತ್ತಿದ್ದಂತೆ ಕುರ್ಚಿಯೊಂದಕ್ಕೆ ಕಾಲೆಡವಿದೆ.
ಮೆಟ್ಟಿಲಿಳಿಯುತ್ತಿರುವಾಗ ನನ್ನದೇ ಮಹಡಿಯಲ್ಲಿರುವ ಇನ್ನೊಬ್ಬನನ್ನು ಭೇಟಿಯಾದೆ.
"ಆಗಲೇ ಇನ್ನೊಮ್ಮೆ ಹೊರಗೆ ಹೊರಟಿರುವೆಯಾ? ಅಯೋಗ್ಯ!" ನನ್ನನ್ನು ಅಡ್ಡಗಟ್ಟಿ ಕೇಳಿದ ಅವನು.
"ಏನು ಮಾಡಲಿ?" ನಾನೆಂದೆ, "ನನ್ನ ಕೋಣೆಯಲ್ಲಿ ದೆವ್ವವೊಂದು ಬಂದು ಸೇರಿಕೊಂಡಿದೆ"
"ನೀನಿದನ್ನು ನಿನ್ನ ಅನ್ನದಲ್ಲಿ ಕೂದಲು ಕಂಡಷ್ಟೇ ಸರಾಗವಾಗಿ ಹೇಳುತ್ತಿರುವೆಯಲ್ಲ"
"ತಮಾಷೆ ಮಾಡಬೇಡ. ದೆವ್ವವೆಂದರೆ ದೆವ್ವ"
"ನಿಜ. ಆದರೆ ದೆವ್ವಗಳಲ್ಲಿ ನಂಬಿಕೆ ಇಲ್ಲದಿದ್ದರೆ ಏನು ಮಾಡುವುದು?"
"ನಾನು ನಂಬುತ್ತೇನೆ ಎಂದುಕೊಂಡಿರುವಿಯೇನು? ಆದರೆ ನಂಬದೆ ಇರುವುದರಿಂದಲೂ ಯಾವುದೇ ಉಪಯೋಗವಾಗುತ್ತಿಲ್ಲ"
"ಯಾಕಾಗುವುದಿಲ್ಲ? ಅಕಸ್ಮಾತ್ ದೆವ್ವವೇ ಬಂದರೂ ಹೆದರಿಕೊಳ್ಳಲಾರೆ ಎಂಬುದಿದ್ದರಾಯಿತು"
"ಅಯ್ಯೋ! ಆ ಭಯವಿಲ್ಲ. ನಿಜವಾದ ಭಯವಿರುವುದು ದೆವ್ವ ಯಾವ ಕಾರಣದಿಂದಾಗಿ ಬಂತೆಂಬುದರ ಬಗ್ಗೆ. ಆ ಭಯ ಹೋಗುವುದಿಲ್ಲ. ನನ್ನಲ್ಲೇ ಮನೆ ಮಾಡಿ ಕೂತುಬಿಟ್ಟಿದೆ" ಏನೋ ಒಂದು ರೀತಿಯ ಮಾನಸಿಕ ಒತ್ತಡಕ್ಕೊಳಗಾಗಿ ಜೇಬುಗಳನ್ನೆಲ್ಲ ತಡಕಾಡತೊಡಗಿದೆ.
"ನಿನಗೆ ದೆವ್ವ ಇರುವುದರ ಬಗ್ಗೆ ಭಯ ಇಲ್ಲವಾಗಿತ್ತಾದ್ದರಿಂದ ಆಗಲೇ ಅದರ ಬಳಿಯೇ ಯಾಕೆ ಬಂದೆಯೆಂದು ಕೇಳಿಬಿಡಬಹುದಿತ್ತು"
"ನೀನು ಮೊದಲೆಂದೂ ದೆವ್ವಗಳ ಜೊತೆ ಮಾತಾಡಿಲ್ಲ, ನಿನಗೆ ಗೊತ್ತಿಲ್ಲ. ದೆವ್ವಗಳು ಯಾವತ್ತೂ ನೇರವಾಗಿ ಉತ್ತರಿಸುವುದಿಲ್ಲ. ಇವುಗಳಿಗೆಲ್ಲ ತಮ್ಮ ಅಸ್ತಿತ್ವದ ಬಗ್ಗೆ ನಮಗಿರುವುದಕ್ಕಿಂತ ಹೆಚ್ಚು ಸಂಶಯವಿದ್ದಂತಿದೆ, ಪಾಪದವು"
"ಆದರೂ ಅವು ನಮ್ಮನ್ನು ಇಷ್ಟಪಡುವಂತೆ ಮಾಡಬಹುದು ಎಂದು ಕೇಳಿದ್ದೇನೆ"
"ಸರಿಯಾಗಿಯೇ ಕೇಳಿದ್ದೀಯ. ನಿಜವೇ. ಆದರೆ ಹಾಗೆ ಯಾರಾದರೂ ಮಾಡಬಹುದೇ?"
"ಯಾಕೆ ಮಾಡುವುದಿಲ್ಲ? ಒಂದೊಮ್ಮೆ ಅದೊಂದು ಹೆಣ್ಣು ದೆವ್ವ ಎಂದುಕೋ" ಹೇಳಿದ ಅವನು, ಒಂದು ಹೆಜ್ಜೆ ಮೇಲಕ್ಕಿಡುತ್ತ.
"ಆಹಾ!" ನಾನೆಂದೆ, "ಆದರೆ ಅದರಿಂದಲೂ ಏನೂ ಉಪಯೋಗವಿಲ್ಲ"
          ನನ್ನ ತಲೆಯಲ್ಲಿ ಬೇರೇನೋ ಆಲೋಚನೆಗಳು ಸುಳಿಯತೊಡಗಿದವು. ತಲೆಯೆತ್ತಿ ನೋಡುವಷ್ಟರಲ್ಲಿ ಅವನಾಗಲೇ ತುಂಬ ಮೇಲೆ ಹೋಗಿಬಿಟ್ಟಿದ್ದ, ಕರೆದರೆ ಸರಿಯಾಗಿ ಕೇಳದಷ್ಟು. "ಎಲ್ಲಾ ಒಂದೇ" ಕೂಗಿದೆ, "ನೀನು ನನ್ನ ದೆವ್ವವನ್ನು ಕದ್ದು ಒಯ್ದೆಯೆಂದರೆ ನನ್ನ ನಿನ್ನ ನಡುವಿನ ಎಲ್ಲವೂ ಮುಗಿಯಿತೆಂದೇ ಅರ್ಥ, ಶಾಶ್ವತವಾಗಿ"
"ನಾನು ತಮಾಷೆ ಮಾಡುತ್ತಿದ್ದೆ ಅಷ್ಟೇ" ಎಂದು ಅವನು ಬಗ್ಗಿಸಿದ ತಲೆಯನ್ನು ಮೇಲಕ್ಕೆತ್ತಿ ನಡೆದ.
"ಪರವಾಗಿಲ್ಲ" ಎಂದೆ ನಾನು. ಈ ಸಮಯದಲ್ಲಿ ಸುಮ್ಮನೆ ನಡೆದಾಡಲು ಹೋಗಬಹುದು ಎನ್ನಿಸಿತು. ಆದರೆ ನನ್ನ ಹತಾಶೆಯು ಹೇಳಿದಂತೆ ಮತ್ತೆ ಕೋಣೆಗೆ ಹೋಗಿ ಮಲಗಲೆಂದು ಮೆಟ್ಟಿಲು ಹತ್ತತೊಡಗಿದೆ.ಅವಿವಾಹಿತನ ದುರ್ದೈವ

          ಅವಿವಾಹಿತರಾಗಿಯೇ ಉಳಿದು ಜೀವನ ಸಾಗಿಸುವುದು ತುಂಬ ಭಯಾನಕವಾದುದು. ಒಂದು ಸಂಜೆ ಜೊತೆಯಲ್ಲಿ ಕಳೆಯಲೂ ಯಾರಾದರೂ ಒಬ್ಬಳನ್ನು ಬೇಡಿಕೊಳ್ಳುತ್ತಲೂ ನಮ್ಮ ಗೌರವವನ್ನು ಕಾಯ್ದುಕೊಳ್ಳಬೇಕು. ಹೀಗೇ ಮುದುಕರಾಗುತ್ತೇವೆ. ಖಾಲಿ ಕೋಣೆಯ ಮೂಲೆಯ ಹಾಸಿಗೆಯೊಂದರ ಮೇಲೆ ಕುಳಿತು ವಾರಗಟ್ಟಲೆ ನಿಸ್ತೇಜವಾಗಿ ದೃಷ್ಟಿ ಬೀರುತ್ತಿರುತ್ತೇವೆ. ಪಕ್ಕದ ಮನೆಯವರಿಗೆ 'ಶುಭ ರಾತ್ರಿ' ಹಾರೈಸುತ್ತೇವೆ. ಹೆಂಡತಿಯ ಹಿಂದೆ ಮೆಟ್ಟಿಲು ಹತ್ತುತ್ತ  ಓಡುವ ಅದೃಷ್ಟ ಸಿಗುವುದಿಲ್ಲ. ಕೋಣೆಗೆ ಒಂದೇ ಅಡ್ಡ ಬಾಗಿಲಿರುತ್ತದೆ, ಪಕ್ಕದ ಮನೆಗೆ ಹೋಗಲು. ನಮ್ಮ ಊಟವನ್ನು ನಾವೇ ಹೋಟೆಲಿನಿಂದ ತರಬೇಕಾಗುತ್ತದೆ. ಬೇರೆಯವರ ಮಕ್ಕಳನ್ನು ನೋಡಿ ಮೆಚ್ಚಿಕೊಳ್ಳಬೇಕು, ಯೌವ್ವನದ ದಿನಗಳಲ್ಲಿ ನೋಡಿದ ಅವಿವಾಹಿತರನ್ನು ನೆನಪು ಮಾಡಿಕೊಳ್ಳುತ್ತ ಅವರು ಹೇಳುವಂತೆ "ನನಗೆ ಮಕ್ಕಳಿಲ್ಲ" ಎಂದು ಹೇಳುವ ಅಧಿಕಾರವೂ ಇರುವುದಿಲ್ಲ.
          ಇದು ಹೀಗೇ ಇರುತ್ತದೆ. ವಾಸ್ತವತೆಯಲ್ಲಿ ನಾವಿರುತ್ತೇವೆ ಅಷ್ಟೇ. ಇಂದಿಗೂ, ಎಂದಿಗೂ. ನಮ್ಮ ಸ್ಥೂಲ ದೇಹವನ್ನೂ, ದೇಹದ ಮೇಲೆ ಒಂದು ತಲೆಯನ್ನೂ, ತಲೆಯಲ್ಲಿ ಕೆರೆದುಕೊಳ್ಳಲು ಒಂದು ಹಣೆಯನ್ನೂ ಹೊತ್ತುಕೊಂಡು.

No comments:

Post a Comment