Friday, 18 October 2013

ಕಥೆಯೊಂದು ಮೊಳೆತು....



ಕಾಯಿ
"ಇಲ್ಲಿ ಅಶ್ಲೀಲ ಶಬ್ದಗಳನ್ನು ಬರೆಯಬಾರದು" ಬಸ್ ನಿಲ್ದಾಣದ ಹೆಸರು ಮಳೆ, ಬಿಸಿಲು, ಗಾಳಿಗೆ ಸಿಕ್ಕಿ ಎಂದೋ ಅಳಿಸಿಹೋಗಿ ಒಳಗೋಡೆಯ ಮೇಲೆ ದೊಡ್ಡದಾಗಿ ಕಪ್ಪಕ್ಷರಗಳಲ್ಲಿ ಬರೆದ ಈ ವಾಕ್ಯವಷ್ಟೆ ತೋರುತ್ತಿತ್ತು. ಅದಕ್ಕೆ ಪ್ರತ್ಯುತ್ತರವೆಂಬಂತೆ ಹಲವು ಉದಯೋನ್ಮುಖ ಪ್ರೇಮಿಗಳು ಬಣ್ಣದ ಕಲ್ಲಿನಿಂದ ಬರೆದ ವಾಕ್ಯಗಳೂ ಗೋಡೆಯನ್ನು ಅಲಂಕರಿಸಿದ್ದವು. ಆದರೆ ಈ ದಾರಿಯಲ್ಲಿ ತಿರುಗಾಡುವ ಎಲ್ಲರಿಗೂ ಅದು ಚಾಂದ್ರಾಣಿ ನಿಲ್ದಾಣವೆಂಬುದು ತಿಳಿದಿದೆ. ಚಂದಾವರ ಟೆಂಪೋದ ಕೊನೆಯ ಸಾಲಿನ ಕಿಟಕಿ ಪಕ್ಕದ ಸೀಟಿನಲ್ಲಿ ತನ್ನನ್ನು ತಾನು ತುರುಕಿಕೊಂಡು ಕುಳಿತಿದ್ದ ಕುಟ್ಣಪ್ಪ ನಾಯ್ಕ ಟೆಂಪೋ ಅಲ್ಲಿ ನಿಲ್ಲುತ್ತಲೆ ಆ ಗೋಡೆಯನ್ನೊಮ್ಮೆ ಪರಿಶೀಲಿಸಿದ. ದಿನವೂ ಇದೇ ದಾರಿಯಲ್ಲಿ ಕಾಲೇಜಿಗೆ ಹೋಗುವ ಹಾಗೂ ಚಾಂದ್ರಾಣಿಯಲ್ಲಿ ಬಹಳಷ್ಟು ಸ್ನೇಹಿತರನ್ನಿಟ್ಟುಕೊಂಡಿರುವ ತನ್ನ ಮಗ ಮಹೇಶನೂ ಈ ಗೋಡೆಯ ಮೇಲೆ ತನ್ನ ಪ್ರತಿಭೆಯನ್ನು ತೋರಿದ್ದಾನೋ ಎಂಬುದು ಆತನ ಅನುಮಾನವಾಗಿತ್ತು. ಅಂಥದ್ದೇನೂ ಕಣ್ಣಿಗೆ ಬೀಳದೆ "ಛೆ, ನನ್ನ ಮಗ ಇಂತ ಕೆಲಸವನ್ನೆಲ್ಲ ಮಾಡುವವನಲ್ಲ. ನನಗ್ಯಾಕೆ ಹೀಗೆಲ್ಲ ಅನ್ನಿಸುತ್ತದೆ?" ಎಂದು ತನಗೆ ತಾನೆ ಸಮಾಧಾನ ಹೇಳಿಕೊಂಡ. ಟೆಂಪೋ ಮುಂದಕ್ಕೋಡಿತು. ಸ್ವಲ್ಪವೇ ಮುಂದಕ್ಕೆ ಶಿಲೆಯನ್ನು ಕುಟ್ಟಿ ಪುಡಿಮಾಡುವ ಜಲ್ಲಿ ಮಷೀನೊಂದು ಎದುರಾಗುತ್ತದೆ. ಅದು ತನ್ನ ಅವಾಜು ನಿಲ್ಲಿಸಿ ಹಾಳುಬಿದ್ದು ಎಷ್ಟೋ ಕಾಲವಾಯಿತು. ಆದರೆ ಕುಟ್ಣಪ್ಪನಿಗೆ ಅದೇಕೋ ಪ್ರತೀ ಬಾರಿ ಆ ಜಾಗದಿಂದ ಹಾಯ್ದಾಗಲೂ "ಈ ಮಿಶನ್ನು ಕೆಲಸ ಮಾಡಬೇಕಾಗಿತ್ತು, ಫ್ಯಾಕ್ಟರಿ ನಡೆಯಬೇಕಾಗಿತ್ತು" ಅನಿಸುತ್ತದೆ. ಇಂದೂ ಕೂಡ ಹಾಗೇ ಅಂದುಕೊಂಡ.
            ಭಾಸ್ಕೇರಿ ಹೊಳೆಯ ಬದಿಯಲ್ಲಿರುವ ದೊಡ್ಡಹಿತ್ತಲಿನವ ಈ ಕುಟ್ಣಪ್ಪ ನಾಯ್ಕ. ತೆಂಗಿನಕಾಯಿ, ಅಡಿಕೆಗೊನೆ, ಮುಂತಾದವುಗಳನ್ನು ಕೊಯ್ಯುವ ಮರಕಸುಬು ಹುಟ್ಟಿನಿಂದ ಬಂದಿಲ್ಲವಾಗಿತ್ತಾದರೂ ನೋಡುವವರಿಗೆ ಇವನೇನು ಮರದ ಮೇಲೇ ಹುಟ್ಟಿದ್ದನೋ ಅನಿಸುವಷ್ಟು ಸಲೀಸು. ಹಗಲಿನಲ್ಲಿ ಒಡೆಯರು ಕರೆದು ಕೊಯ್ಲಿನ ಕೆಲಸಕ್ಕೆ ಹೋದರೆ ರಾತ್ರಿ ಕರೆಯದಿದ್ದರೂ ಕೆಲಸಕ್ಕೆ ಹೋಗುತ್ತಾನೆ. ಆದರೆ ರಾತ್ರಿ ಹೋಗುವುದು ಅಪರೂಪಕ್ಕೊಮ್ಮೆ ಅಷ್ಟೆ. ಕಳ್ಳತನವನ್ನಾದರೂ ಒಂದು ಆತ್ಮಸಾಕ್ಷಿಯೊಂದಿಗೆ ಮಾಡಬೇಕೆಂಬುದು ತನ್ನ ಅರಿವಿಗೆ ಬಾರದೆ ಅವನು ಪಾಲಿಸಿಕೊಂದು ಬಂದ ಸಿದ್ಧಾಂತ. ಸಿಕ್ಕಿಬೀಳುತ್ತೇನೆಂಬ ಭಯವೂ ಸ್ವಲ್ಪ ಇತ್ತೆನ್ನಿ. ಇಬ್ಬರು ಗಂಡುಮಕ್ಕಳು. ಹಿರಿಯವನಾದ ಮಹೇಶ ಹೊನ್ನಾವರದ ಐಟಿಐ ಕಾಲೇಜಿಗೆ ಮೂರು ವರ್ಷ ಹೋಗಿಬಂದುಮುಗಿಸಿ ಮನೆಯಲ್ಲಿ ಕೂತಿದ್ದಾನೆ. ಕಿರಿಯ ದಿನೇಶ ಸಂತೆಗುಳಿ ಶಾಲೆಯಲ್ಲಿ ಐದನೇ ತರಗತಿ.
            ಮಗ ಮಹೇಶನಿಗೆ ಕೇವಲ ತನ್ನ ಮಾರ್ಕ್ಸ್ ಕಾರ್ಡು ತೋರಿಸುವುದರಿಂದ ಕೆಲಸ ಸಿಗುವುದಿಲ್ಲ ಎಂಬುದು ಅರಿವಾಗಿತ್ತು. ಸಾಕಷ್ಟು ತಿರುಗಾಡಿ ಚಪ್ಪಲಿ ಸವೆಸಿದ ನಂತರ ಒಂದು ದಿನ ಮೂವತ್ತು ಸಾವಿರ ರೂಪಾಯಿ ಕೊಟ್ಟಲ್ಲಿ ಕೆಲಸ ಗ್ಯಾರಂಟಿ ಎಂದು ಕಾರವಾರದ ಯಾವುದೋ ಏಜನ್ಸಿಯವರು ಹೇಳಿದ್ದರು. ಮಾಡಲು ಕೆಲಸವಿಲ್ಲದೆ ಮನೆಯಲ್ಲಿ ಪುಕ್ಸಟ್ಟೆ ತಿನ್ನುತ್ತಾ ಕೂತ ಮಗನನ್ನು ನೋಡಿ ನೋಡಿ ಸಿಟ್ಟೋ, ಕನಿಕರವೋ, ಏನೋ ಒಂದು ಬಂದು ಸೀದ ಹೊನ್ನಾವರಕ್ಕೆ ಹೋಗಿ ಶೆಟ್ಟರ ಗಿರವಿ ಅಂಗಡಿಯಲ್ಲಿ ತನ್ನ ಹೇಂಡತಿಯ ಆಪರ್ಧನವಾದ ಕೆಲವೇ ಕೆಲವು ಒಡವೆಗಳನ್ನು ಒತ್ತೆಯಿಟ್ಟು ದುಡ್ಡು ತೆಗೆದುಕೊಂಡ ಕುಟ್ಣಪ್ಪ ಈ ಟೆಂಪೊವನ್ನು ಹತ್ತಿದ್ದ. ಆದರೆ ಸುಡುಗಾಡು ಸರ, ಬಳೆ ಜೋಡಿಗೆ ಸಿಕ್ಕಿದ್ದೆಷ್ಟು? ಬರೀ ಇಪ್ಪತ್ತು ಸಾವಿರ.  ಇನ್ನೂ ಹತ್ತು ಸಾವಿರ ಒಟ್ಟುಮಾಡಬೇಕಿತ್ತು. ಪಕ್ಕದ ಮನೆಯ ರಾಮನಾಯ್ಕನನ್ನು ಕೇಳುವುದು. ಹೇಗಾದರೂ ಅವನ ಮಗ ಗೋವಾದಲ್ಲಿ ಯಾವುದೋ ಕೆಲಸ ಮಾಡುತ್ತಿದ್ದಾನೆ. ಅದಕ್ಕೂ ಮೊದಲು ದಾರಿಯಲ್ಲೇ ಸಿಗುವ ಒಡೆಯ ಶಂಕರ ಹೆಗಡೇರ ಬಳಿಯೊಮ್ಮೆ ಕೇಳಿಬಿಡೋಣ ಎಂದುಕೊಂಡಿದ್ದ.
            ಮಳೆನೀರಿಗೆ ಜಂಗು ಹಿಡಿಯಬಾರದೆಂದು ಕೆಂಪು, ನೀಲಿ ಆಯಿಲ್ ಪೇಂಟು ಬಳಿಸಿಕೊಂಡು ನಿಂತಿದ್ದ ಕಬ್ಬಿಣದ ಗೇಟನ್ನು ಕುಟ್ಣಪ್ಪ ತಳ್ಳುತ್ತಿದ್ದಂತೆ ಹೆಗಡೇರ ಮನೆ ನಾಯಿ ದೊಡ್ಡ ಸ್ವರದಲ್ಲಿ ಬೊಗಳಲಾರಂಭಿಸಿತು. ಮನೆಮುಂದಿನ ತೋಟಕ್ಕೆ ಕವಳದ ಎಲೆ ಕೊಯ್ಯಲೆಂದು ಬಂದಿದ್ದ ಶಂಕರ ಹೆಗಡೆ ಗೇಟಿನತ್ತ ದೃಷ್ಟಿ ಹಾಯಿಸಿ "ಅರೆ! ಕುಟ್ಣಪ್ಪ. ಏನು ಇತ್ಲಾಗೆ ಬಂದಿದ್ದು? ಕಾಯಿ ಕೊಯ್ಯ್ಲಿಕ್ಕೇನು ಹೇಳಿಕಳಿಸಿದಹಾಗೆ ಇಲ್ಲವಲ್ಲ?" ಕೇಳಿದರು. "ಇಲ್ರ ವಡೆಯ. ಬೇರೆ ಕೆಲಸ ಇತ್ತು, ಅದ್ಕೆ ಬಂದೆ" ಗೇಟಿನ ಚಿಲಕವನ್ನೆಳೆಯುತ್ತ ಹೇಳಿದ ಕುಟ್ಣಪ್ಪ. "ಓಹೋ, ಬಾ ಬಾ. ಸಮಾ ಟೈಮಿಗೆ ಬಂದಿದ್ದೀಯ. ನಿನಗೂ ಒಂದು ಚಾ ಮಾಡಿಸಿಬಿಡುವ" ಎಂದು "ಇವಳೇ, ಕುಟ್ಣಪ್ಪ ಬಂದಿದ್ದಾನೆ. ಅವನಿಗೂ ಒಂದು ಚಾ." ಹೆಂಡತಿಯನ್ನು ಕೂಗಿ ಹೇಳಿದರು ಹೆಗಡೇರು. ಅದು ಇದು ಊರಮೇಲಿನ ಸುದ್ದಿಯೊಂದಿಗೆ ಚಹಾಸೇವನೆಯಾಗಿ ಇಬ್ಬರ ಬಾಯಲ್ಲೂ ಒಂದೊಂದು ಕವಳ ಬಿದ್ದಾದನಂತರ ವಿಷಯಕ್ಕೆ ಬಂದ ಕುಟ್ನಪ್ಪ "ಸ್ವಲ್ಪ ದುಡ್ಡು ಬೇಕಾಗಿತ್ತಲ್ರ ವಡೆಯ" ಎಂದ. ಹೆಗಡೇರು ಕೇಳಿದರು, "ಸ್ವಲ್ಪ ಅಂದರೆ ಎಷ್ಟು? ನಿನಗೆ ಕೊಡಲಿಕ್ಕಾಗುವುದಿಲ್ಲ ಹೇಳಲಿಕ್ಕಾಗುವುದಿಲ್ಲ". "ಸ್ವಲ್ಪ ಎಂದರೆ ಸ್ವಲ್ಪ ಹೆಚ್ಚೇ ಬೇಕು. ಒಂದು ಹತ್ತು ಸಾವಿರ" ಸುತ್ತಿ ಬಳಸದೆ ನೇರವಾಗಿ ಹೇಳಿಬಿಟ್ಟ ಕುಟ್ಣಪ್ಪ. "ಥೋ! ಅಷ್ಟೆಲ್ಲ ಎಲಿಂದ ತರೂದೋ ಈಗ? ಕಷ್ಟಕ್ಕೆ ಬಂತಲ್ಲ" ಕಪಾಟಿನೊಳಗೆ ಇದ್ದರೂ ಅಷ್ಟೊಂದು ಹಣವನ್ನು ಕೆಲಸದವನೊಬ್ಬನಿಗೆ ಕೊಡಲು ಒಮ್ಮೆ ಹಿಂದೇಟು ಹಾಕಿದರು. ಆದರೆ ಅವರಿಗೆ ಕುಟ್ಣಪ್ಪ ಹಿಡಿದ ಪಟ್ಟನ್ನು ಅಷ್ಟು ಸುಲಭವಾಗಿ ಬಿಡುವ ಆಸಾಮಿಯಲ್ಲವೆಂಬುದು ಗೊತ್ತಿತ್ತು. ಹಾಗೇ ಕುಟ್ಣಪ್ಪನೊಬ್ಬನೇ ತಮಗೆ ಬೇಕಾದ ಸಮಯದಲ್ಲಿ ಇಲ್ಲವೆನ್ನದೆ ಕೆಲಸಕ್ಕೆ ಬಂದವನು ಎಂಬ ಅರಿವೂ ಇತ್ತು. ಕೆಲಹೊತ್ತು ಆಲೋಚಿಸಿದವರಂತೆ ನಟಿಸಿ "ತಿಂಗಳೊಳಗೆ ವಾಪಸ್ ಮಾಡಬೇಕು ಹಾಂ?" ಎನ್ನುತ್ತ ಕೋಣೆಯ ಒಳಹೊಕ್ಕರು.
            ದುಡ್ಡಿನ ವ್ಯವಸ್ಥೆಯಾಗಿಬಿಟ್ಟಿತು. ಇನ್ನು ಮಗನನ್ನು ಕಾರವಾರಕ್ಕೆ ಕಳಿಸುವುದೊಂದೇ ಬಾಕಿ. ಮಗ ಅನ್ನುವವನು ಹೆತ್ತವರನ್ನು ಸಾಕಲು ಯೋಗ್ಯನೋ ಎಂಬುದು ತಿಳಿದುಬಿಡುತ್ತದೆ ಎಂದೆಲ್ಲ ಯೋಚಿಸುತ್ತ ಕುಟ್ಣಪ್ಪ ರಸ್ತೆಯಲ್ಲಿ ನಡೆದುಬರುತ್ತಿದ್ದಾಗಲೇ ಉಮೇಶ ಭಟ್ಟರು ಎದುರಾದರು. ಅವನನ್ನು ಕಂಡದ್ದೇ ಅಂದರು, "ನಾಳೆ ಒಂದೇ ದಿನ ಬಂದು ನಮ್ಮನೆ ಕಾಯಿ ಕೊಯ್ಲು ಮುಗಿಸಿಕೊಟ್ಟು ಹೋಗು ಮಾರಾಯಾ". ಕುಟ್ಣಪ್ಪನಿಗೆ ಗೊತ್ತಿದೆ, ಭಟ್ಟರು ಪೂರ್ತಿ ಕೂಲಿ ದುಡ್ಡನ್ನು ಯಾವತ್ತೂ ಕೊಟ್ಟವರಲ್ಲ. ಏನೋ ಒಂದು ಕಾರಣ ಹೇಳಿ ಸಾಗಹಾಕಿಬಿಡುತ್ತಾರೆ. ದಿನಕಳೆದಂತೆ ಅದು ತನಗೂ ಮರೆತುಹೋಗುತ್ತದೆ. ಆದರೂ ಹೋಗದೆ ಬೇರೆ ಉಪಾಯವಿಲ್ಲ. ಏಕೆಂದರೆ ನಾಳೆ ಬೇರೆ ಎಲ್ಲೂ ಕರೆಯವಿಲ್ಲ. "ಆಯ್ತು ಭಟ್ಟರೆ, ಕೊಯ್ದುಕೊಡುವ. ನಾಳೆ ಒಂದೇ ದಿನ." ಎನ್ನುತ್ತ ಹೆಗಡೇರ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಕವಳವನ್ನು ಬಾಯಲ್ಲಿಟ್ಟ.
            ಎಂದೂ ಇಷ್ಟವಾಗದ ತನ್ನ ಹೆಂಡತಿಯ ಅಡಿಗೆ ಅದೇಕೋ ಕುಟ್ಣಪ್ಪನಿಗೆ ಇಂದು ಇಷ್ಟವಾಯಿತು. ಅದೂ ರಾತ್ರಿ ಊಟಕ್ಕೆಂದು ಬೇರೆ ಮಾಡಿದ್ದಲ್ಲ, ಮಧ್ಯಾಹ್ನದ ತಂಗಳೇ. ಎರಡು, ಮೂರನೇ ಸಲ ಅನ್ನ ಹಾಕಿಸಿಕೊಂಡು ಉಣ್ಣುತ್ತಿರುವ ತನ್ನ ಗಂಡನನ್ನು ನೋಡಿ ಸಾವಿತ್ರಿಗೆ ಕಾರಣ ತಿಳಿಯದಿದ್ದರೂ, ಯಾಕೆಂದು ಕೇಳುವ ಧೈರ್ಯ ಬಾರದೆ ಇದ್ದರೂ ಖುಷಿಯಾಯಿತು. ಎಲ್ಲೋ ಊರ ಮೇಲೆ ತಿರುಗಲು ಹೋಗಿದ್ದ ಮಹೇಶ ಎಷ್ಟೋ ರಾತ್ರಿ ಬಂದಾಗಲೂ ಅಪ್ಪ, ಹೋಗಲಿ ಅಮ್ಮನೂ ಎನೋ ಹೇಳದೆ ಇದ್ದುದನ್ನು ಕಂಡು ಆಶ್ಚರ್ಯಗೊಂಡ. ನಿಶ್ಶಬ್ದವಾಗಿ ಊಟ ಮುಗಿಸಿ ತಾಟು ತೊಳೆದಿಟ್ಟು ಹಸೆ ಬಿಚ್ಚಲು ತಯಾರಾಗುತ್ತಿದ್ದಾಗಲೇ ಪಕ್ಕದಲ್ಲಿಯೇ ಮಲಗಿದ್ದ ಕುಟ್ಣಪ್ಪ ಕಣ್ಣು ಮುಚ್ಚಿಯೇ "ದುಡ್ಡಿನ ವ್ಯವಸ್ಥೆ ಆಗಿದೆ. ನಾಳೆಗೇ ಹೊರಡುವ ತಯಾರಿ ಮಾಡಿಕೊ" ಅಂದ. ತಾನು ಹೋಗುವುದು ಇನ್ನೂ ತನಗೇ ಖಾತ್ರಿಯಾಗಿರದೆ ಇದ್ದ ಮಹೇಶ ಅಪ್ಪನ ಮಾತನ್ನು ಕೇಳಿ ಗಹನವಾದ ಆಲೋಚನೆಯಲ್ಲಿ ಬಿದ್ದ. ಹಾಗೆ ಯೋಚಿಸುತ್ತಲೇ ನಿದ್ದೆ ಹೋಗಿಯೂಬಿಟ್ಟ.  
            ಕುಟ್ಣಪ್ಪ ಅಂದುಕೊಂಡಂತೆಯೇ ಆಯಿತು. ಮರಕ್ಕೆ ಹದಿಮೂರರಂತೆ ಒಟ್ಟೂ ಇಪ್ಪತ್ತು ಮರಗಳಿಗೆ ಇನ್ನೂರ ಅರವತ್ತು ರೂಪಾಯಿ ಕೊಡಬೇಕಾಗಿದ್ದ ಉಮೇಶ ಭಟ್ಟರು ಕೊನೆಯಲ್ಲಿ ಅವನ ಕೈಗಿತ್ತದ್ದು ಇನ್ನೂರು ಅಷ್ಟೇ. ದುಡ್ಡೆಲ್ಲ ಬ್ಯಾಂಕಿನಲ್ಲಿದೆ, ಮುಂದಿನ ಬಾರಿ ಹೋದಾಗ ತಂದಿಡುತ್ತೇನೆ. ಒಂದೆರಡು ವಾರ ಬಿಟ್ಟು ಬಾ. ಇನ್ನೊಂದು ಸಣ್ಣ ಕೊಯಿಲಿದೆ, ಅದನ್ನೂ ಮುಗಿಸಿಕೊಟ್ಟುಬಿಡು. ಎಲ್ಲ ಸೇರಿಸಿ ಕೊಡುತ್ತೇನೆ ಎಂಬ ಅಶ್ವಾಸನೆಯೊಂದಿಗೆ ಕೈತೊಳೆದುಕೊಂಡುಬಿಟ್ಟರು. ಹೀಗೆ ಆಗುತ್ತದೆಂಬ ಅರಿವು ಮೊದಲೇ ಇದ್ದ ಕುಟ್ಣಪ್ಪ ಪಾಲಿಗೆ ಸಿಕ್ಕಿದ್ದು ಪಂಚಾಮೃತವೆಂದುಕೊಳ್ಳುತ್ತ ಎಳನೀರಿನ ಬೊಂಡವೊಂದನ್ನು ಹಿಡಿದು ಮನೆಯತ್ತ ನಡೆದ. ಅವನು ನಿರ್ಧರಿಸಿಬಿಟ್ಟಿದ್ದ, ಈ ಭಟ್ಟರ ಕಪಟಕ್ಕೆ ಪ್ರತಿಯಾಗಿ ಆ ಬಾರಿ ಏನಾದರೂ ಮಾಡಲೇಬೇಕೆಂದು. ಮತ್ತೇನಿಲ್ಲ, ಇವತ್ತು ರಾತ್ರಿ ಅವರದೇ ಮತ್ತೊಂದು ತೋಟಕ್ಕೆ ಹೋಗಿ ಬೆಳೆದ ತೆಂಗಿನಕಾಯಿ, ಅಡಿಕೆಗೊನೆಗಳನ್ನೆಲ್ಲ ಇಳಿಸಿಕೊಂಡು ಬಂದುಬಿಡುವುದು. ಭಟ್ಟರಿಗೆ ಗೊತ್ತಾಗಲಿಕ್ಕಂತೂ ಶಕ್ಯವಿಲ್ಲ. ಬಾಯಿ ಬಾಯಿ ಬಡಿದುಕೊಳ್ಳಲಿ.
            ರಾತ್ರಿ ಊಟ ಮುಗಿಸಿ ಒಂದೆರಡು ತಾಸು ಮಲಗಿದನಷ್ಟೆ. ಹನ್ನೆರಡು ಗಂಟೆಯಾಗುತ್ತಲೇ ಥಟ್ಟನೆ ಎದ್ದವನೇ ಅಂಡುಕೊಕ್ಕೆಗೆ ಕತ್ತಿಯನ್ನು ಸಿಗಿಸಿಕೊಂಡು ಚೂಳಿಯೊಂದನ್ನು ಕೈಯಲ್ಲಿ ಹಿಡಿದು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟೇಬಿಟ್ಟ.
            ಸರಿಯಾಗಿ ಒಂದು ನಾಲ್ಕು ಮರ ಹತ್ತಿ ಇಳಿದಿದ್ದನೋ ಇಲ್ಲವೋ, ಭಟ್ಟರ ತೋಟದ ಪಕ್ಕದ ಹಾದಿಯಲ್ಲಿ ಯಾರೋ ಇಬ್ಬರು ಸೂಡಿ ಹಿಡಿದುಕೊಂಡು ಬರುತ್ತಿರುವುದು ಕಾಣಿಸಿತು. ಅವರು ಯಾರು, ಆ ದಾರಿಯಲ್ಲೇಕೆ ಬಂದರು, ಎಂಬುದನ್ನೆಲ್ಲ ಯೋಚಿಸುವ ಗೊಡವೆಗೆ ಹೋಗದೆ ಕ್ಷಣಾರ್ಧದದಲ್ಲಿ ಮರವೊಂದರ ಹಿಂದೆ ಸರಿದು ಕತ್ತಲಲ್ಲಿ ಕತ್ತಲಾದ. ಆದರೆ ದುರದೃಷ್ಟವಶಾತ್ ತಪ್ಪೊಂದು ಆಗಿಬಿಟ್ಟಿತ್ತು. ಚೂಳಿಯನ್ನು ಅಲ್ಲೇ, ಕೊಯ್ಯುತ್ತಿದ್ದ ಮರದಡಿಯಲ್ಲೇ ಬಿಟ್ಟುಬಿಟ್ಟಿದ್ದ. ದಾರಿಯಲ್ಲಿ ಬರುತ್ತಿದ್ದವರು ಮತ್ಯಾರೂ ಅಲ್ಲ, ಉಮೇಶ ಭಟ್ಟರೇ. ಬೇರೆ ಯಾವುದೋ ಊರಿಗೆ ಪರಾನ್ನಕ್ಕೆಂದು ಹೋದವರು ಬರಲು ತಡವಾಗಿ ಈ ಹೊತ್ತಿನಲ್ಲಿ ಮನೆಯ ದಾರಿ ಹಿಡಿದಿದ್ದರು. ಜೊತೆಯಲ್ಲಿ ಅವರನ್ನು ಕರೆದುಕೊಂಡು ಬರಲು ಹೋಗಿದ್ದ ಅವರ ಮಗನೂ ಇದ್ದ. ಚೂಳಿಯು ದಾರಿಯಲ್ಲಿ ಹೋಗುತ್ತಿರುವವರ ಕಣ್ಣಿಗೆ ಬೀಳದಿರಲಿ ಎಂದು ಇಷ್ಟದೈವ ಲಕ್ಷ್ಮೀನಾರಾಯಣನಲ್ಲಿ ಕುಟ್ಣಪ್ಪ ಮನಸಾರೆ ಮಾಡಿಕೊಂಡ ಪ್ರಾರ್ಥನೆ ಫಲ ಕೊಡಲೇ ಇಲ್ಲ. ತಮ್ಮ ತೋಟದಲ್ಲಿ ಈ ಅಪರಾತ್ರಿಯಲ್ಲಿ ಚೂಳಿಯನ್ನು ನೋಡಿದ ಉಮೇಶ ಭಟ್ಟರಿಗೆ ಇದು ಯಾರೋ ಕಳ್ಳತನ ಮಾಡಲು ಬಂದವರದೇ ಎಂದು ಗ್ರಹಿಸಲು ಬಹಳ ಹೊತ್ತು ಹಿಡಿಯಲಿಲ್ಲ. ಓಡಿಹೋಗಲು ದಾರಿಯೇ ಕಾಣದೆ ಕುಟ್ಣಪ್ಪ ಸಿಕ್ಕಿಯೂಬಿದ್ದುಬಿಟ್ಟ. ಬಾಯಿಗೆ ಬಂದಿದ್ದು, ಬಾರದೆ ಇದ್ದುದು, ಎಲ್ಲ ಬೈಗುಳಗಳ ಮಳೆಗರೆದ ಭಟ್ಟರು ತಮ್ಮ ಮಗನೆಡೆ ಒಮ್ಮೆ ನೋಡಿದರು. ಅಪ್ಪನ ಆವೇಶವನ್ನು ನೋಡಿ ಹುರುಪೇರಿದ ಗಣಪತಿ ಕುಟ್ನಪ್ಪನ ಮುಖ-ಮುಸುಡಿ ನೋಡದೆ ಸರಿಯಾಗಿ ನಾಲ್ಕು ಬಿಟ್ಟ. "ಮತ್ತೊಂದು ಬಾರಿ ನನ್ನ ತೋಟದ ಕಡೆ ಮುಖ ಮಾಡಿ ಮಲಗಿದರೂ ಕೊಟ್ಟು ಕೊಂದುಬಿಡುತ್ತೇನೆ ಹುಶಾರ್!" ಭುಸುಗುಡುತ್ತ ಕುಟ್ಣಪ್ಪ ಕೊಯ್ದಿಟ್ಟಿದ್ದ ಕಾಯಿಗಳನ್ನು ಚೂಳಿ ಸಮೇತ ತಮ್ಮ ಮಗನ ತಲೆಯ ಮೇಲೆ ಹೊರಿಸಿದರು ಭಟ್ಟರು.
"ಬೇಕಾಗಿತ್ತು, ನನಗೆ ಇದೆಲ್ಲ ಬೇಕಾಗಿತ್ತು. ಅಲ್ಲ ಈ ಭಟ್ಟರು ಹೀಗೆ ಎಂದು ಮೊದಲೇ ಗೊತ್ತಿದ್ದರೂ ಅವರ ಕಾಯಿ ಕೊಯ್ಯಲಿಕ್ಕೆ ಒಪ್ಪಿಕೊಂಡಿದ್ದಾದರೂ ಯಾಕೆ ನಾನು? ನಂತರ ಪಗಾರು ಪೂರ ಕೊಡಲಿಲ್ಲ ಅಂತ ಕದಿಯುವುದಕ್ಕೆ ಹೋಗಿದ್ದು ಸೊಕ್ಕು ತಲೆಗೇರಿಯೇ ಅಲ್ಲವಾ?" ಕುಟ್ಣಪ್ಪನಿಗೆ ತನ್ನನ್ನು ತಾನೂ ಎಷ್ಟು ಬಯ್ದುಕೊಂಡರೂ ಸಮಾಧಾನವೇ ಆಗುತ್ತಿಲ್ಲ. ಬಿಡುವವರಲ್ಲ ಭಟ್ಟರು. ನಾಳೆ ಬೆಳಗಾಗುತ್ತಲೇ ಇಡೀ ಊರಿಗೆ ಡಂಗೂರ ಸಾರುತ್ತಾರೆ. ಇನ್ನು ಯಾರ ಮನೆಯಲ್ಲೂ ತನ್ನನ್ನು ಕೆಲಸಕ್ಕೆ ಕರೆಯುವುದು ಸಂಶಯವೇ. ಒಂದು ವೇಳೆ ಕರೆದರೂ ತಾನು ಹೋಗುವುದಾದರೂ ಯಾವ ಮುಖವನ್ನು ಹೊತ್ತುಕೊಂಡು? ಹೀಗೆಲ್ಲ ಯೋಚಿಸುತ್ತ ಮಲಗಿದ ಕುಟ್ಣಪ್ಪನ ಬಳಿ ರಾತ್ರಿ ಕಳೆದು ಬೆಳಗಾದರೂ ನಿದ್ರೆ ಸುಳಿಯಲಿಲ್ಲ. ಬೆಳಿಗ್ಗೆ ಎದ್ದ ಸಾವಿತ್ರಿ ಸೊಪ್ಪಿಗೆ ಹೋಗಲೆಂದು ಚೂಳಿಯನ್ನು ಹುಡುಕಿ ಹುಡುಕಿ ಸಾಕಾಗಿ ಕುಟ್ಣಪ್ಪನನ್ನು ಕೇಳಲು ಅವನೂ ಸ್ವಲ್ಪ ಹುಡುಕಿದಂತೆ ನಾಟಕವಾಡಿ "ಥತ್, ಇತ್ತೀಚೆಗೆ ಏನೆಂದರೆ ಏನನ್ನಾದರೂ ಕದ್ದುಬಿಡುತ್ತಾರೆ. ಬಡ್ಡಿಮಕ್ಕಳು" ಎಂದು ಯಾರಿಗೋ ಬಯ್ಯುವ ನೆಪದಲ್ಲಿ ಮತ್ತೊಮ್ಮೆ ತನ್ನನ್ನು ತಾನೇ ಬಯ್ದುಕೊಂಡ. ಸೊಪ್ಪು ಕೊಯ್ಯುವ ಕೆಲಸಕ್ಕೆ ತನ್ನದಿವತ್ತು ರಜೆ ಎಂದು ಪಕ್ಕದ ಮನೆಯಾಕೆಯ ಹತ್ತಿರ ಹೇಳಿ ಕಳುಹಿಸಿದ ಸಾವಿತ್ರಿ ಬೆಳಗಿನ ತಿಂಡಿಗೆ ಅಣಿಮಾಡಿದಳು. ತಿಂಡಿ ಮುಗಿಯುತ್ತಲೇ ಲಗುಬಗೆಯಿಂದ ಮಗನ ಕೈಯಲ್ಲಿ ದುಡ್ಡನ್ನಿಟ್ಟು ಕಾರವಾರಕ್ಕೆಂದು ಕಳುಹಿಸಿದ ಕುಟ್ಣಪ್ಪ ನಿನ್ನೆ ರಾತ್ರಿಯ ಪ್ರಸಂಗವನ್ನು ಮಾತ್ರ ಯಾರಲ್ಲಿಯೂ ಹೇಳಲು ಹೋಗಲಿಲ್ಲ. ಉಮೇಶ ಭಟ್ಟರು ಯಾವ ರೀತಿ ಪ್ರಚಾರ ಮಾಡಿದ್ದರೆಂದರೆ ಮಧ್ಯಾಹ್ನದ ಹೊತ್ತಿಗೆ ರಾಮನಾಯ್ಕನೇ ಬಂದು ಆ ವಿಷಯದ ಬಗ್ಗೆ ಕುಹಕವಾಡುವಂತಾಗಿತ್ತು. ಅಷ್ಟಕ್ಕೂ ರಾಮನಾಯ್ಕನೇನು ಸಂಭಾವಿತನೆಂದಲ್ಲ. ಒಂದು ಕಾಲದಲ್ಲಿ ಕುಟ್ಣಪ್ಪನಿಗೆ ಸಾಥು ಕೊಟ್ಟವನೇ. ಆದರೆ ಸದ್ಯಕ್ಕೆ ಅದ್ಯಾವುದೂ ಗಣ್ಯವಾಗುವುದಿಲ್ಲ. ಸಿಕ್ಕಿಬಿದ್ದು ಪೆಟ್ಟುತಿಂದವನು ಕುಟ್ಣಪ್ಪ ಮಾತ್ರ.
            ಅಂದುಕೊಂಡಂತೆ ಕುಟ್ಣಪ್ಪನನ್ನು ಕೆಲಸಕ್ಕೆ ಕರೆಯುವುದನ್ನು ಕಮ್ಮಿ ಮಾಡಿದ್ದರು. ಶಂಕರ ಹೆಗಡೇರು ಕೂಡ ಒಂದೆರಡು ಬಾರಿ ದಾರಿಯಲ್ಲಿ ಸಿಕ್ಕವರು ದಾರಿಯಲ್ಲೇ ನಿಂತು ಮಾತಾಡಿ ಆಡಿದ ಮಾತಿನಲ್ಲಿಯೂ ತನಗೆ ವಾಪಸ್ ಬರಬೇಕಾಗಿದ್ದ ಹಣದ ಕುರಿತೇ ಒತ್ತಿ ಹೇಳಿದ್ದರು. ವಾರವೊಂದು ಕಳೆಯುವಷ್ಟರಲ್ಲಿ ಕುಟ್ನಪ್ಪನ ಕಾಲುಗಳು ತಾವೇ ತಾವಾಗಿ ಕೇರಿ ತುದಿಯ ಸಾರಾಯಿ ಅಂಗಡಿಯತ್ತ ನಡೆದವು. ಕುಡಿತವೇನೂ ಕುಟ್ನಪ್ಪನಿಗೆ ಹೊಸತಲ್ಲ. ಅಪರೂಪದ ಕಳ್ಳತನದಂತೆ ತಿಂಗಳಿಗೆ ಎರಡು-ಮೂರು ಬಾರಿ ಕುಡಿಯುತ್ತಿದ್ದ ಅಷ್ಟೆ. ಆದರೀಗ ಅದು ಅತಿಯಾಗಿ ಎರಡು-ಮೂರು ದಿನಕ್ಕೆ ಒಂದು ಬಾರಿ ಅನ್ನುವಂತಾಗಿತ್ತು. ಒಂದು ದಿನವಂತೂ ಮಗ ದಿನೇಶನಿಗೆ ಪಟ್ಟಿ-ಪುಸ್ತಕ ತರುತ್ತೇನೆ ಎಂದು ಹೆಂಡತಿಯ ಬಳಿ ತೆಗೆದುಕೊಂಡು ಹೋದ ದುಡ್ಡಲ್ಲಿ ಕುಡಿದು ಬಂದು ಮನೆಯಲ್ಲಿ ರಾಮಾಯಣ-ಮಹಾಭಾರತವೇ ನಡೆದಿತ್ತು. ಮರುದಿನ ಪಟ್ಟಿ ಇಲ್ಲದೆ ಶಾಲೆಗೆ ಹೋದ ದಿನೇಶ ಕಾಲ ಮೇಲೆ ಕೆಂಪಗೆ ಬರೆ ಬೀಳುವಂತೆ ಮಾಸ್ತರರ ಕೈಯಲ್ಲಿ ಹೊಡೆತ ತಿಂದು ಬಂದಿದ್ದ. ಅದನ್ನು ನೋಡಿ ಕುಟ್ನಪ್ಪನಿಗೆ ಅಯ್ಯೋ ಪಾಪ ಎನ್ನಿಸದೆ ಇರಲಿಲ್ಲ. ಆಗಿಂದಾಗ ಅವತ್ತಿನ ಕೂಲಿ ದುಡ್ಡಲ್ಲಿ ಪಟ್ಟಿ ತಂದಿಟ್ಟು ಮಗನ ಕಣ್ಣೊರೆಸಿದ್ದ. ಅರ್ಧ ಮುಚ್ಚಿದ ಬಾಗಿಲ ಹಿಂದೆ ಕೋಣೆಯ ಕತ್ತಲಲ್ಲಿ ನಿಂತಿದ ಸಾವಿತ್ರಿ ಇದನ್ನೆಲ್ಲ ನೋಡಿ ತಾನೂ ಸೆರಗಂಚಿನಿಂದ ಕಣ್ಣೊರೆಸಿಕೊಂಡಿದ್ದಳು.
            ಇದ್ದಕ್ಕಿದ್ದಂತೆ ಅದೊಂದು ದಿನ ಮಹೇಶ ವಾಪಸ್ ಬಂದುಬಿಟ್ಟ. ಯಾವ ಬಟ್ಟೆಯಲ್ಲಿ ಹೋಗಿದ್ದನೋ ಅದರಲ್ಲೇ ಹಿಂದಿರುಗಿದ್ದ. ಕುಟ್ನಪ್ಪನಿಗೆ ಅವನ ಸೋತ ಮುಖವನ್ನು ನೋಡುತ್ತಲೇ ಏನಾಗಿರಬಹುದೆಂಬ ಅಂದಾಜು ಆಗಿಹೋಯಿತು. ಹೆಗಲ ಮೇಲಿನ ಬ್ಯಾಗನ್ನು ಕೆಳಗೂ ಇಳಿಸದೆ ಅಂಗಳದಲ್ಲೇ ನಿಂತು ಹೇಳಿದ್ದ ಮಹೇಶ "ಎಲ್ಲ ಮೋಸ ಅಪ್ಪ. ಕೆಲಸವೂ ಇಲ್ಲ ಮಣ್ಣೂ ಇಲ್ಲ". ದುಡ್ಡನ್ನೆಲ್ಲ ಕಟ್ಟಿಕೊಂಡು ಬಿಲ್ಡಿಂಗಿನ ಷಟರ್ ಎಳೆದು ಅದ್ಯಾವುದೋ ಏಜನ್ಸಿ ಎಂದು ಬೋರ್ಡು ಹಾಕಿಕೊಂಡ ಮನುಷ್ಯ ರಾತ್ರೋರಾತ್ರಿ ಪರಾರಿಯಾಗಿದ್ದ. ಕೊಟ್ಟು ಕೆಟ್ಟ ಮಹೇಶ ಮತ್ತು ಇನ್ನೂ ಹಲವರು ಕಣ್ಣಿಗೆ ನೀರು ಹಚ್ಚಿಕೊಂಡು ಮನೆಯ ದಾರಿ ಹಿಡಿದಿದ್ದರು. ಎಲ್ಲಾದರೂ ಓಡಿಹೋಗಿಬಿಡಲೆ ಎಂಬ ಆಲೋಚನೆ ಕ್ಷಣಕಾಲ ಮಹೇಶನ ತಲೆಯಲ್ಲಿ ಸುಳಿದಿತ್ತು. ಆದರೆ ಅಷ್ಟೇ ಬೇಗ ಅದೆಲ್ಲ ಆಗುವ ಕೆಲಸವಲ್ಲ ಎಂಬ ಅರಿವೂ ಆಗಿತ್ತು. ಅವನಂದುಕೊಂಡಿದ್ದನ್ನು ಅಪ್ಪನಿಗೆ ಹೇಳಿದ್ದರೆ ಸಂಪೂರ್ಣ ಸಮ್ಮತಿ ಕೊಟ್ಟುಬಿಡುತ್ತಿದ್ದನೇನೋ. ಆದರೆ ಈಗ ಆಗಿದ್ದೆಲ್ಲವನ್ನೂ ಸುಮ್ಮನೆ ಕೂತು ಕೇಳಿಸಿಕೊಂಡವನೇ ಏನೂ ಆಗಿಲ್ಲವೆಂಬಂತೆ ಹಳೇ ಅಂಗವಸ್ತ್ರವೊಂದನ್ನು ತಲೆಗೆ ಚಂಡಿ ಕಟ್ಟಿ ಮನೆಯಿಂದ ಹೊರಗೆ ಹೋಗಿಬಿಟ್ಟಿದ್ದ.
            ಅಂದು ಆಶ್ಚರ್ಯವೆಂಬಂತೆ ಶಂಕರ ಹೆಗಡೇರೇ ಕೆಲಸಕ್ಕೆ ಹೇಳಿಕಳುಹಿಸಿದ್ದರು. ಅದನ್ನೇ ಕಾಯುತ್ತಿದ್ದನೆಂಬಂತೆ ಕುಟ್ನಪ್ಪ ಬೆಳಗಿನ ತಿಂಡಿಯನ್ನೂ ತಿನ್ನದೆ ಅವರ ಮನೆಗೋಡಿದ್ದ. "ಒಂದು ನಾಲ್ಕು ಮರ ಇದೆ ಅಷ್ಟೇ ಕುಟ್ಣಪ್ಪ. ಬೇಗ ಕೊಯ್ದುಮುಗಿಸಿಬಿಡುವ ಬಾ" ಎನ್ನುತ್ತ ಮನೆ ಮುಂದಿನ ತೋಟದ ಕಡೆ ನಡೆದರು ಹೆಗಡೇರು. ಸದ್ದಿಲ್ಲದೇ ಅವರನ್ನು ಹಿಂಬಾಲಿಸಿದ ಕುಟ್ಣಪ್ಪ ಸುಮಾರು ಮೂರ್ನಾಲ್ಕು ತೆಂಗಿನಮರಗಳನ್ನು ಸರಿಯಾಗಿಯೇ ಹತ್ತಿಳಿದ. ಮುಂದಿನ ಮರದ ತುದಿಯಲ್ಲಿದ್ದವ ಏಕ್ ದಂ ಜಾರಿಬಿಟ್ಟ. ಜಾರಿದನೋ ಅಲ್ಲ ಹಾರಿದನೋ ಒಟ್ಟಾರೆ ಕಾಯಿ ಗೊಂಚಲಿನ ಜೊತೆ ಕುಟ್ಣಪ್ಪನೂ ಕೆಳಬರುತ್ತಿರುವುದು ಹೆಗಡೇರಿಗೆ ಗೋಚರವಾಯಿತು. ನೆಲಮುಟ್ಟುವ ಮೊದಲು, ಗಾಳಿಯಲ್ಲಿದ್ದಾಗ ಅದೇಕೋ ಕುಟ್ಣಪ್ಪನಿಗೆ ಭಯ-ಭೀತಿ ಮುಂತಾದವುಗಳು ಉಂಟಾಗುವ ಬದಲು "ಇಲ್ಲ. ನನ್ನ ಮಗ ಅಷ್ಟು ಕೆಲಸಕ್ಕೆ ಬಾರದವನಲ್ಲ. ಕಾರವಾರವಲ್ಲದಿದ್ದಲ್ಲಿ ಮತ್ತೊಂದೆಡೆ ಇನ್ನೊಂದು ಕೆಲಸವನ್ನು ಹುಡುಕುತ್ತಾನೆ. ತನ್ನ ಕಾಲಮೇಲೆ ತಾನು ನಿಲ್ಲುತ್ತಾನೆ. ಸ್ವಲ್ಪ ಸಮಯ ಬೇಕಷ್ಟೆ" ಎಂದೆನಿಸುತ್ತಿತ್ತು.

Sunday, 16 June 2013

360 ಎಲ್ಲಿ ಹೋಯಿತು?

ಹತ್ತು, ಹದಿನೈದು ನಿಮಿಷಗಳಿಗೊಮ್ಮೆ ಪುರುಸೊತ್ತಿಲ್ಲದಂತೆ, ಬೇಡವೆಂದರೂ ಬರುತ್ತಿದ್ದ

ಹಗಲುಗಳಲ್ಲೆಲ್ಲ ಖಾಲಿ ಖಾಲಿಯಾಗಿ ಹೋಗುತ್ತಿದ್ದ 

ಇಷ್ಟು ಹೊತ್ತಿನಲ್ಲಾಗಲೇ ಬಂದುಬಿಡಬೇಕಾಗಿದ್ದ 

ಮಾರಾಟವಾಗದೆ ಹಾಗೆ ಉಳಿದ ಬಣ್ಣದ ಕಾಗದದ ಗಿರಗಿಟ್ಲೆ, ಹವೆ ಹೊರಬಿಟ್ಟು ಚಪ್ಪಟೆಯಾದ ಬಲೂನುಗಳನ್ನು ಕಟ್ಟಿದ ಕೋಲನ್ನು ಹಿಡಿದ ಕೋಲಿನಂತಹ ಹುಡುಗ ಕಾಯುತ್ತಿದ್ದ 

ಸ್ಟ್ಯಾಂಡಿನ ಪಕ್ಕದ 'ಕಾಫಿ ಡೇ'ಯಿಂದ ತಂಪಾಗಿ ಹೊರಬಂದ ಜೋಡಿ, ಒಂದು ವೇಳೆ ಬಂದರೂ ಹತ್ತುವುದು ಬೇಡವೆಂದುಕೊಂಡು ನಿಂತಿರುವಾಗ 

ದಿನದ ಕೆಲಸ ಮುಗಿಸಿ ಸಿಗರೇಟೊಂದನ್ನು ಈಗಷ್ಟೇ ಬೂದಿಮಾಡಿ ಹೊಗೆಯುಗುಳುತ್ತಲೇ ಬಂದು ನಿಂತ ಸಾಫ್ಟ್ವೇರು ಎಂಜಿನಿಯರನನ್ನು ಹತ್ತಿಸಿಕೊಳ್ಳಬೇಕಾಗಿದ್ದ 

ಜ್ವರದಿಂದ ನರಳಿದ್ದ ತನ್ನ ಪುಟ್ಟ ಮಗುವನ್ನು ಹೊತ್ತು ಆಸ್ಪತ್ರೆಗೆ ಬಂದು ವಾಪಸು ಹೊರಡಲು ತಡವಾಗಿ ಕ್ಷಣಕ್ಕೊಮ್ಮೆ ಅದರ ಹಣೆ ಮುಟ್ಟಿ ತಳಮಳಗೊಳ್ಳುತ್ತಿರುವಾಗ

ಬೆಳಗಿಂದ ದುಡಿದು ಪಡೆದ ಕೂಲಿಯಲ್ಲಿ ಮೂಗಿನ ತುದಿವರೆಗೆ ಕುಡಿದು ಸಂಪೂರ್ಣ ತೀರ್ಥರೂಪನಾಗಿ ನಿಂತಲ್ಲೇ ತೇಲುತ್ತಿದ್ದವನ ಹತ್ತಿಸಿಕೊಳ್ಳದೆ ಮುಂದೆ ಹೋಗಬೇಕಾಗಿದ್ದ

ಶಾಲೆಯಲ್ಲಿ ಕಲಿತದ್ದಷ್ಟೇ ಅಲ್ಲದೆ ಟ್ಯೂಶನ್ನಿನ ಪಾಠವನ್ನೂ ಹೇಗೆ ನೆನಪಿಟ್ಟುಕೊಳ್ಳುವುದೆಂದು ಬಗೆಹರಿಯದೆ ಕೂತ ಹುಡುಗನ ಬ್ಯಾಗಿನ ಭಾರವನ್ನು ಕಡಿಮೆ ಮಾಡಬೇಕಾಗಿದ್ದ

ಮುಂದೆಲ್ಲೋ ಹೋಗಿಳಿದು ತನ್ನೂರಿನ ಬಸ್ಸು ಹತ್ತಲಿರುವ, ತನ್ನಷ್ಟೇ ಗಾತ್ರದ ಚೀಲಕ್ಕಾತುಕೊಂಡು ನಿಂತವನ ಬಿಟ್ಟು

ರಾತ್ರಿ ಪಾಳಿಯ ಮತ್ಯಾವುದೋ ಕೆಲಸಕ್ಕೆಂದು ಮತ್ತೆಲ್ಲಿಗೋ ಹೋಗಬೇಕಾಗಿದ್ದವರನ್ನು ಅಲ್ಲಿಗೆ ಕರೆದೊಯ್ಯಬೇಕಾಗಿದ್ದ

ಟೆರೇಸಿನ ಮೇಲೆ ಒಣಹಾಕಿದ್ದ ಬಟ್ಟೆಗಳೆಲ್ಲ ಮಳೆಗೆ ಎಲ್ಲಿ ಒದ್ದೆಯಾದಾವೋ ಎಂದು ಪದೇ ಪದೇ ಆಕಾಶ ನೋಡಿ ಆತಂಕಗೊಂಡ ಗೃಹಿಣಿ ಕಾಯುತ್ತಿದ್ದ

ದಿನವಿಡೀ ಗಾರೆ ಕೆಲಸ ಮಾಡಿ ಮೈಮೇಲೆಲ್ಲ ಕರೆಗಟ್ಟಿದ ಸಿಮೆಂಟು-ಧೂಳನ್ನು ಈಗಷ್ಟೇ ತಿಕ್ಕಿ ತಿಕ್ಕಿ ತೊಳೆದು ಸ್ನಾನ ಮಾಡಿ ಲೈಫ್ ಬಾಯ್ ಘಮ ಬೀರುತ್ತ ನಿಂತ ಸರವಣನನ್ನು ಮನೆಮುಟ್ಟಿಸಬೇಕಾಗಿದ್ದ

ಮುಖದ ತುಂಬ ಪೌಡರು ಮೆತ್ತಿಕೊಂಡು, ತಲೆತುಂಬ ಮಲ್ಲಿಗೆ ಮುಡಿದು, ಸ್ಲೀವ್ ಲೆಸ್ಸು ಬ್ಲೌಸು ತೊಟ್ಟು, ಹೈ ಹೀಲ್ದು ಚಪ್ಪಲಿ ಮೆಟ್ಟಿ, ಮೊಬೈಲನ್ನು ಕಿವಿಗೆ ಚುಚ್ಚಿ ಗಿರಾಕಿಯೊಂದಿಗೆ ಮೈಯನ್ನು ಎಷ್ಟಕ್ಕೆ ಮಾರುವುದೆಂಬ ವಾದದಲ್ಲಿ ತೊಡಗಿದ ಆಕೆ ಹತ್ತಬೇಕಾಗಿದ್ದ

360....

ಗಂಟೆ ಹತ್ತಾಯ್ತು
ರಸ್ತೆ ಬರಡಾಯ್ತು
ಮೋಡ ದಟ್ಟವಾಯ್ತು
ಚಳಿ ಜೋರಾಯ್ತು

....ಎಲ್ಲಿ ಹೋಯಿತು? 360....
....ಎಲ್ಲಿ ಹೋಯಿತು?